ADVERTISEMENT

ಚುರುಮುರಿ| ನಿಂದಾಣಿಕೆ ದಗಾಯುದ್ಧ

ಪ್ರಜಾವಾಣಿ ವಿಶೇಷ
Published 26 ಜೂನ್ 2023, 23:30 IST
Last Updated 26 ಜೂನ್ 2023, 23:30 IST
   

ಲಿಂಗರಾಜು ಡಿ.ಎಸ್.

ನಮ್ಮ ಮಾಜಿ ಶಾಸಕರಿಗೆ ಆರೋಗ್ಯ ಸರಿ ಇರಲಿಲ್ಲ. ತಿಂಗಳಿಂದಾ ‘ಕಿತ್ತೊಗೀರಿ, ಪಟ್ಟು ಹಿಡೀರಿ, ಹೋರಾಟ ಮಾಡಬಕು, ಕಳಕೊಂಡಿದ್ದು ತಗೋಬೇಕು’ ಅಂತ ಚಡಪಡಿಸ್ತಾ ಇದ್ದರು. ಇವರ ಸಂಕಟ ನೋಡನಾರದೇ ನಾನು, ತುರೇಮಣೆ ಡಾಕ್ಟರ್ ಹತ್ರ ಕರಕೋದೋ.

‘ಡಾಕ್ರೇ ಎದೆನೋವು, ಹೊಟ್ಟೆಉರಿ, ಸಂಕಟ, ಕೈ ಕಡಿತವೆ, ಎಲ್ಲಾರಿಗೂ ಬೈಬೇಕು ಅನ್ನಿಸ್ತದೆ, ಗ್ಯಾಸ್ಟ್ರಿಕ್ ಜಾಸ್ತಿಯಾಗ್ಯದೆ. ಕಮಲದ ವಾಸನೆಗೆ ಅಲರ್ಜಿ ಆಯ್ತಾ ಅದೆ’ ಅಂತ ವಿವರಿಸಿದರು.

ADVERTISEMENT

‘ಎಲ್ಲಾರೂ ನಿಮಗೆ ಅನ್ಯಾಯ ಮಾಡಿದರು, ಮುಗಿಸೋದಿಕ್ಕೆ ಸಂಚು ಮಾಡ್ತಾವ್ರೆ ಅನ್ನಿಸ್ತಿರಬೇಕು ಅಲ್ಲುವರಾ. ಇದುವರೆಗೂ ನೀವು ಅಧಿಕಾರ ನಡೆಸಿ ಈಗ ಸೋತು ಮನೇಲಿ ಕೂತಿದ್ದೀರಿ’ ಅಂದ್ರು ಡಾಕ್ಟ್ರು.

‘ಹೌದು ಸಾ! ಕರೆಕ್ಟಾಗೇಳಿದಿರಿ. ಕೆಲವರು ಹೊಂದಾಣಿಕೆ ಮಾಡಿಕ್ಯಂಡು ಪಕ್ಷಕ್ಕೆ ಚೂರಿ ಹಾಕಿದರು. ಹೋರಾಟ ಮಾಡಬಕು ಅಂತ ದೊಡ್ಡೋರೆಲ್ಲಾ ನಮ್ಮನ್ನ ಮುಂದಕ್ಕೆ ತಳ್ಳಿ ಹಿಂದುಕ್ಕೆ ಸರ್ಕತರೆ. ಈಗ ನಾನು ಏನು ಮಾಡನೆ?’ ಮಾಜಿ ಶಾಸಕರು ಕೇಳಿದರು.

‘ವಿರೋಧ ಪಕ್ಷದ ನಾಯಕನ್ನ ಆಯ್ಕೆ ಮಾಡಿಕ್ಯಳಕಾಗದೇ ‘ನೀನು ಸರಿಲ್ಲ, ನೀನು ಸರಿಲ್ಲ’ ಅಂತ ಪಕ್ಸದ ಬ್ಯಾಡ್ ಬಾಯ್‍ಗಳೆಲ್ಲಾ ನಿಂದಾಣಿಕೆ ದಗಾಯುದ್ಧ ಮಾಡಿಕ್ಯಂಡು ಕಾಲ ಕಳೀತಾವೆ. ಹಸ್ತದೋರೂ ದಗಾಯುದ್ಧಕ್ಕೆ ಫೇಮಸ್ಸು. ಈಗ ಅವರಿಗೆ ವಾಸಿಯಾಗ್ಯದೆ. ನೀವು ರೆಸ್ಟ್ ತಗಳಿ ಸರೋಯ್ತದೆ’ ಡಾಕ್ಟ್ರು ಪರಿಹಾರ ಹೇಳಿ ಕಳಿಸಿಕೊಟ್ಟರು.

‘ಅದ್ಯಾಕ್ಲಾ ಅವುನಿಗೇನು ತೊಂದರೆ?’ ಯಂಟಪ್ಪಣ್ಣ ಕೇಳಿತು.

‘ಅವರು ಹಿಂದೆ ಅಧಿಕಾರದೇಲಿದ್ದ ಪಕ್ಸದೇಲಿ ಶಾಸಕ ಆಗಿದ್ದರು. ಈಗ ಸೋತು ಮನೇಲಿ ಕೂತವ್ರೆ. ಅಧಿಕಾರ ಇಲ್ಲದ್ದುಕ್ಕೆ ಎದೆಉರಿ, ಚಡಪಡಿಕೆ, ಅಸಹನೆ, ಸಂಕಟ, ಶೋಕಾಚರಣೆ. ಇದು ಸೋತೋರಿಗೆ ಬರೋ ಪೊಲಿಟಿಕಲ್ ಅಬ್ಯೂಸಿಯಾ ಡಿಸ್‍ಪೆಪ್ಸಿಯಾ ಕಾಯಿಲೆ ಕನಣೈ. ಈ ಕಾಯಿಲೆ ದಳದೋರಿಗೂ ಅಮರಿಕ್ಯಂಡದೆ. ಇದಕ್ಕೆ ಅಧಿಕಾರವೇ ಮದ್ದು!’ ಅಂತ ತುರೇಮಣೆ ಟಾಂಗ್ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.