ADVERTISEMENT

ದೂಸರಿ ಬಾತ್

ಲಿಂಗರಾಜು ಡಿ.ಎಸ್
Published 5 ಅಕ್ಟೋಬರ್ 2020, 18:07 IST
Last Updated 5 ಅಕ್ಟೋಬರ್ 2020, 18:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇದಾನಸೌದದ ತಾವು ಆರು ಹುತ್ತ ಎದ್ದಿದ್ದೋ. ಅವುಗಳ ಮುಂದೆ ಕುಮಾರಣ್ಣ ತೆನೆ ಬೋಲೆ ಮನ ಬೋಲೆ ಅಂತ ಪುಂಗಿ ಊದ್ತಾ ಕೂತುದ್ರು. ಪಿತೃಪಕ್ಸ ಪಕ್ಸವೇ ಅಲ್ಲ ಅಂದ ಬಂಡೆದು ಸಿಬಿಐ ಹುತ್ತ ಆಕಡೆ ಏಳತಿತ್ತು!

‘ಬ್ರದರ್, ಮೂರು ಮಾಜಿ ಸಿಎಂಗಳ ಸುತ್ತಾ ಡ್ರಗ್ಸ್ ಅನು-ಮಾನದ ಹುತ್ತ ಎದ್ದದಲ್ಲಾ ಯಾರ ಪಕ್ಸದ ಹುತ್ತದಿಂದ ಎಂತಾ ಹಾವು ಈಚಿಗೆ ಹೊಂಡತವೋ ಅಂತ ಊದ್ತಿವ್ನಿ’ ಅಂತ ಉದೋದನ್ನ ಮುಂದುವರೆಸಿದರು.

‘ಬನ್ನಿ ತುರೇಮಣೆ. ನಾವು ತನ್‍ಕೀ ಬಾತ್ ಅಂತ ಕಾರ್ಯಕ್ರಮ ಮಾಡ್ತುದವಿ. ಹುಲಿಯಾಜಿ ಇವರಿಗೆ ಕೇಸರಿಬಾತ್ ಕೊಡಿಸಿ’ ಅಂತ ಕಬ್ಬನ್ ಪಾರ್ಕಿನಲ್ಲಿದ್ದ ಕೈಕಮಾಂಡ್ ಕರುದ್ರು.

ADVERTISEMENT

‘ಸಾ, ನಾವು ಪಾನೀಕರು. ಮದ್ಯಾನ್ನಕ್ಕೇ ಕೇಸರಿಬಾತ್ ಸೇರಕುಲ್ಲ. ಆದ್ರೂ ನಿಮ್ಮ ವಿರೋದಿ ಪಕ್ಸದ ಹೆಸರಿರ ತಿಂಡಿ ಯಾಕೆ ಕೊಡುಸ್ತೀರಾ!’ ಅಂತ ತುರೇಮಣೆ ತಲೇಗೆ ಉಳಬುಟ್ಟರು. ಹೈಕಮಾಂಡ್, ಹುಲಿಯಾ, ಬಂಡೆ, ರಮೀಜಣ್ಣನಿಗೂ ಈ ಹಂಗಾಮ ಅರ್ತಾಗದೇ ಮಕಮಕ ನೋಡಿಕ್ಯಂಡರು.

‘ಸಾ, ನಿಮ್ಮ ವಿರೋದಿಗಳು ಕೇಸರಿ ಅವರ ಬ್ರಾಂಡು ಅಂತ ಹೇಳಿಕ್ಯತರಲ್ಲ. ಕೇಸರಿ ಇರೋ ಕೇಸರಿಬಾತ್ ನೀವು ಕೊಟ್ರೆ ಅದು ಪಕ್ಸ ವಿರೋಧಿ ಅಲ್ಲುವರಾ?’ ಅಂದ್ರು ತುರೇಮಣೆ. ‘ತಳ್ಳಿ ಬಡ್ಡಿಹೈದ್ನೆ. ವೊಡಿರ್ಲಾ ಅವನ ಕಪಾಳಕ!’ ಹುಲಿಯನಿಗೆ ಕ್ವಾಪ ಬಂದುತ್ತು.

‘ಹುಲಿಯಾಜಿ ಹಾಥ್ರಾಸ್ ಥರ ತಳ್ಳಬ್ಯಾಡಿ. ಆಜ್ ರಾತ್ ಬಾರಾ ಬಜೆಸೆ ಕಾಂಗ್ರೇಸ್ ಮೇ ಕೇಸರಿಬಾತ್ ಬ್ಯಾನ್’ ಅಂದ್ರು ಹೈಕಮಾಂಡ್.

‘ಬ್ಯಾಡಿ ಸಾ, ಕೈ ತೋರಿಸಿದರೆ ಕಮಲನೇ ನುಂಗಬೇಕು! ಕಾಸಿಲ್ಲ ಕರೀಮಣಿ ಇಲ್ಲ ಕೇಸರಿಬಾತಿಗೆ ಬ್ಯಾರೆ ಹೆಸರು ಮಡಗ್ಸಿ ನೀವು ಬಳುಸ್ಕಳಿ!’

‘ಬ್ಯಾರೆ ಹೆಸರು ಏನು ಮಡಗನ? ದೂಸರಿ ಬಾತ್ ಬೋಲೋ’ ಅಂದ ಹೈಕಮಾಂಡ್ ಮಾತಿಗೆ ತುರೇಮಣೆ ‘ಅದೀಯೆ ಸಾ, ಇನ್ನು ಮುಂದೆ ಕೇಸರಿಬಾತಿಗೆ ದೂಸರೀಬಾತ್ ಅಂತ ಹೆಸರಿಟ್ಕಳಿ, ಹೆಸರುಬಲ, ಗಣಕೂಟ ಚೆನ್ನಾಗದೆ’ ಅಂದ ಮಾತಿಗೆ ದೂಸರಿ ಬಾತೆ ಇರನಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.