ADVERTISEMENT

ಚುರುಮುರಿ: ಆಯೋಗ-ನಿಯೋಗ!

ತುರುವೇಕೆರೆ ಪ್ರಸಾದ್
Published 23 ಮೇ 2025, 19:30 IST
Last Updated 23 ಮೇ 2025, 19:30 IST
.
.   

‘ಲೇಯ್, ಆಯೋಗಕ್ಕೂ ನಿಯೋಗಕ್ಕೂ ಏನ್ರಲಾ ಯತ್ವಾಸ?’ ಸಿಬಿರೆಬ್ಬಿದ ಗುದ್ಲಿಂಗ ಹರಟೆಕಟ್ಟೇಲಿ.

‘ಒಬ್ರೋ ಇಬ್ರೋ ಇದ್ರೆ ಆಯೋಗ, ತುಂಬಾ ಜನ ಇದ್ರೆ ನಿಯೋಗ’ ಎಂದ ಮಾಲಿಂಗ.

‘ಅದು ಅಂಗಲ್ಲಲೇ, ತನಿಖೆಗೆ ಆಯೋಗ, ಮನವರಿಕೆಗೆ ನಿಯೋಗ’ ತಿದ್ದುಪಡಿ ಒತ್ತಿದ ಕಲ್ಲೇಶಿ.

ADVERTISEMENT

‘ಆಯೋಗ ಏಕವ್ಯಕ್ತಿ ವ್ಯಸನ, ನಿಯೋಗ ಬಹುವ್ಯಕ್ತಿಗಳ ಪ್ರಹಸನ’.

‘ಆಯೋಗ ಕಮಿಷನ್ನು, ನಿಯೋಗ ಮಿಷನ್ನು. ಆಯೋಗ ವರ್ಷಗಟ್ಟಲೆ ಕೊಟಕೊಟ ಕೆಲಸ ಮಾಡುತ್ತೆ. ನಿಯೋಗ ಅಂದ್ರೆ ಹೋದ ಪುಟ್ಟ, ಬಂದ ಪುಟ್ಟ!’

‘ಆಮೇಲೆ ಆಯೋಗ ಅಂದ್ರೆ ತಮಗಾಗದವರ ವಿರುದ್ಧ ರಚನೆ ಮಾಡೋದು. ನಿಯೋಗ ಎಲ್ಲರನ್ನೂ ಸೇರಿಸ್ಕೊಂಡ್ ರಚನೆ ಮಾಡೋದು’.

‘ವೂ ಅದೇಯ! ಆಯೋಗದಲ್ಲಿ ಪರಸ್ಪರ ಸಕತ್ ಬೈಯ್ಯಿ. ನಿಯೋಗದಲ್ಲಿ ಒಬ್ರಿಗೊಬ್ರು ಭಾಯಿ, ಭಾಯಿ’.

‘ಒಂದು ಏಕಪಕ್ಷಕ್ಕೆ ಅಭಿಯೋಗ, ಅಂದ್ರೆ ಉಗಿ ಯೋಗ, ಇನ್ನೊಂದು ಸರ್ವಪಕ್ಷಕ್ಕೆ ಫಾರಿನ್ ಯೋಗ’.

‘ಈಗ ಮೋದಿ ಅಣ್ಣ, ವೈರಿಗಳ ಷಡ್ಯಂತ್ರನ ಜಗತ್ತಿಗೇ ಮನವರಿಕೆ ಮಾಡಿ ಬನ್ನಿ ಅಂತ ಏಳು ದೇಶಕ್ಕೆ ಏಳು ನಿಯೋಗ ಕಳ್ಸವ್ರಲ್ಲಪ್ಪ’.

‘ಸದಾ ಸದನದಲ್ಲಿ ತೂಕಡಿಕೆ, ಕನವರಿಕೆ ಮಾಡೋರಿಗೆ ಈ ತರ ಅವಾಗವಾಗ ಲವಲವಿಕೆ ಇರ್ಬೇಕು ಬಿಡು’.

‘ಅದ್ರಲ್ಲೂ ಅಪಸ್ವರ ಎದ್ದೈತಲ್ಲ, ಕೈನೋರು ನಾವು ಶಿಫಾರಸು ಮಾಡ್ದೋರನ್ನ ಬಿಟ್ಟು ಶಶಿ ತರೂರ್ ಅವರನ್ನ ನಿಯೋಗದಲ್ಲಿ ಸೇರುಸ್ಕೊಂಡಿದೀರ ಅಂತ ಗರಂ ಆಗವ್ರಲ್ಲ’.

‘ಶಶಿ ತರೂರ್‌ ತಮ್ ಕೈ ತವರೂರು ಬಿಟ್ಟು ಕಮಲದಲ್ಲಿ ಚಂದ್ರನ್ನ ಅರಳಿಸೋಕೆ ಹೊಂಟವ್ರಂತೆ. ಅದ್ಕೇ ಮತ್ತೆ ನಿಯೋಗದಾಗೆ ಜಾಗ ಗಿಟ್ಟಿಸ್ಕಂಡಿರಾದು ಅಂತ ಸುದ್ದಿ ಹಬ್ಬೈತೆ’.

‘ಮತ್ತೆ ತಮ್ ಶಿಫಾರಸು ಧಿಕ್ಕರಿಸವ್ರೆ ಅಂತ ಕೈ ಪಾಳಯಕ್ಕೆ ಸಿಟ್ಟು ಬಂದಿರಕಿಲ್ವಾ? ಅದಕ್ಕೇ ರಾಗಾ ಸೀದಾ ಅಮೆರಿಕಾಗೆ ಓಗಿ, ಯಾವ್ದಾರ ಯೂನಿವರ್ಸಿಟೀಲಿ ಈ ವರ್ತನೇನ ಕಟು ಮಾತುಗಳಲ್ಲಿ ಖಂಡಿಸ್ತಾರೆ’.

‘ಆಮೇಲೆ ಅವರದ್ದೇ ಸರ್ಕಾರ ಬಂದಾಗ ಇದರ ತನಿಖೆಗೆ ಒಂದು ಆಯೋಗನೂ ರಚಿಸ್ತಾರೆ’ ಎಂದ ಪರ್ಮೇಶಿ. ಎಲ್ಲಾ ಗೊಳ್ಳನೆ ನಕ್ಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.