ADVERTISEMENT

ಚುರುಮುರಿ: ‘ದುಸರಾ’ ಕವಿಗೋಷ್ಠಿ!

ಬಿ.ಎನ್.ಮಲ್ಲೇಶ್
Published 29 ಸೆಪ್ಟೆಂಬರ್ 2022, 19:31 IST
Last Updated 29 ಸೆಪ್ಟೆಂಬರ್ 2022, 19:31 IST
   

‘ನೋಡ್ರಲೆ, ಈ ವರ್ಷನೂ ನಂಗೆ ದಸರಾ ಕವಿಗೋಷ್ಠಿಗೆ ಚಾನ್ಸ್ ಸಿಗ್ಲಿಲ್ಲ...’ ತೆಪರೇಸಿ ಹರಟೆಕಟ್ಟೆ ಗೆಳೆಯರಲ್ಲಿ ದುಃಖ ತೋಡಿಕೊಂಡ.

‘ಹೌದಾ? ಯಾರತ್ರನಾದ್ರು ರೆಕ್ಮಂಡ್ ಮಾಡಿಸ್ಬೇಕಿತ್ತು?’ ಗುಡ್ಡೆ ಸಲಹೆ.

‘ಮಾಡ್ಸಿದ್ದೆ ಕಣಲೆ, ಎಂಪಿ ಸಾಹೇಬ್ರತ್ರನು ಹೋಗಿದ್ದೆ, ಅವ್ರೂ ಬೇಜಾರ್ನಾಗಿದ್ರು. ಆಹ್ವಾನ ಪತ್ರಿಕೇಲಿ ನನ್ ಕ್ಷೇತ್ರದ ಹೆಸರೇ ಬದಲಾಗಿದೆ ಕಣಯ್ಯ, ನಂದೇ ನನಗಾಗಿದೆ, ನಿನ್ ಕವಿಗೋಷ್ಠಿ ತಗಂಡ್ ನಾನೇನ್ ಮಾಡ್ಲಿ ಅಂದ್ರು...’

ADVERTISEMENT

‘ಹೌದಾ? ಅಲೆ ಇವ್ನ, ನಿನ್ನಂಥ ಕನ್ನಡದ ಕವಿಗೆ ಅಷ್ಟು ತಾತ್ಸಾರನಾ? ಹೆದರಬ್ಯಾಡ, ಅವರು ದಸರಾ ಕವಿಗೋಷ್ಠಿಗೆ ಕರೀದಿದ್ರೇನಂತೆ, ನಾವು ‘ದುಸರಾ’ ಕವಿಗೋಷ್ಠಿ ಮಾಡಾಣ. ಅದಿರ್‍ಲಿ, ನೀನು ಯಾವುದರ ಮೇಲೆ ಕವನ ಬರೆದಿದ್ದೆ?’ ದುಬ್ಬೀರ ಕೇಳಿದ.

‘ಪೋಸ್ಟರ್ ಮೇಲೆ...’

‘ಥು ನಿನ್ನ, ಅಲ್ಲಲೆ ಯಾರಾದ್ರು ಪೋಸ್ಟರ್ ಮೇಲೆ ಕವನ ಬರೀತಾರಾ? ಬಿಳಿ ಹಾಳೆ ಮೇಲಲ್ವಾ?’ ಗುಡ್ಡೆಗೆ ಸಿಟ್ಟು ಬಂತು.

‘ಬಿಳಿ ಹಾಳೆ ಮೇಲೇ ಬರೆದಿದ್ದೆ ಕಣಲೆ, ಕವನದ ವಿಷಯ ಪೋಸ್ಟರ್ ರಾಜಕೀಯದ್ದು...’ ತೆಪರೇಸಿ ವಿವರಿಸಿದ.

‘ಓ ಹಂಗಾ... ಈಗ ನಿನ್ನ ವಯಸ್ಸೆಷ್ಟು?’

‘ಯಾಕೆ?’

‘ಅಲ್ಲ, ದಸರಾದಲ್ಲಿ ಕವಿಗಳ ವಯಸ್ಸಿಗೆ ತಕ್ಕಂಗೆ ಐದು ಕವಿಗೋಷ್ಠಿ ಇಟ್ಟಾರಂತೆ, ನಿನ್ ವಯಸ್ಸು ಒಂದಕ್ಕೂ ಸೂಟ್ ಆಗ್ಲಿಲ್ವಾ ಅಂತ...’ ಗುಡ್ಡೆ ನಕ್ಕ.

‘ಲೇ ಗುಡ್ಡೆ, ನಗಬ್ಯಾಡ, ಅವ್ನು ಬಾಲಕವಿ ಇದ್ದಾಗಿಂದ್ಲೂ ಕವಿಗೋಷ್ಠಿಗೆ ಟ್ರೈ ಮಾಡ್ತಾನೇ ಅದಾನೆ, ಸಿಕ್ಕಿಲ್ಲ. ಯುವಕವಿಗೋಷ್ಠಿಗೂ ಸಿಗ್ಲಿಲ್ಲ. ಈಗ ದೊಡ್ಡೋರ ಕವಿಗೋಷ್ಠಿಗೂ ಸಿಕ್ಕಿಲ್ಲ ಅಂದ್ರೆ ಇನ್ಯಾವಾಗ ಸಿಗೋದು?’ ದುಬ್ಬೀರ ಬೇಸರ ವ್ಯಕ್ತಪಡಿಸಿದ.

‘ಬೇಜಾರಾಗ್ಬೇಡ ದುಬ್ಬೀರ, ಅವನಿಗೂ ಒಂದಲ್ಲ ಒಂದು ದಿನ ಅವಕಾಶ ಸಿಕ್ಕೇ ಸಿಗುತ್ತೆ...’

‘ಅದೇ ಯಾವಾಗ?’

‘ಪರಮಾತ್ಮನ ಪಾದ ಸೇರ್ಕಂಡಾಗ... ಮೊನ್ನೆ ಒಬ್ರಿಗೆ ಅಂಥ ಅವಕಾಶ ಸಿಕ್ಕಿತ್ತು, ಪೇಪರ್ ನೋಡ್ಲಿಲ್ವಾ?’ ಗುಡ್ಡೆ ಮಾತಿಗೆ ತೆಪರೇಸಿಗೆ ಸಿಟ್ಟು ಬಂದ್ರೂ ನಗು ತಡೆಯಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.