ADVERTISEMENT

ಯೋಗಾಯೋಗ...

ಕೆ.ವಿ.ರಾಜಲಕ್ಷ್ಮಿ
Published 26 ಜೂನ್ 2019, 19:41 IST
Last Updated 26 ಜೂನ್ 2019, 19:41 IST
..
..   

‘ಆಫೀಸಿನಲ್ಲಿ ಯೋಗದಿನ ಚೆನ್ನಾಗಿ ಆಯಿತು ಅನ್ಸುತ್ತೆ? ಕೆಲ ದಿನಗಳಿಂದ ಪತ್ತೆಯಿಲ್ಲ... ಯೋಗವಿದ್ದರೆ ಭೋಗ ಅಲ್ವೇ?’ ವಾಕಿಂಗ್‌ನಲ್ಲಿ ಕಂಠಿಯನ್ನು ವಿಚಾರಿಸಿದೆ.

‘ನಿಜ, ಭೋಗದ ಹಿಂದೆ ಹೋದರೆ ಯೋಗವಿಲ್ಲ, ಆದರೆ ಭೋಗವು ಯೋಗವನ್ನು ಫಾಲೋ ಮಾಡುತ್ತೆ’ ತತ್ವ ನುಡಿದ. ‘ನನಗೂ ಒಂದೆರಡು ಧ್ಯಾನ, ಆಸನಗಳನ್ನು ಕಲಿಸುವ ಯೋಗ, ಬಾಸ್ ಫುಲ್ ಖುಷ್’ ಎಂದು ಬೀಗಿದ.

‘ನನಗೂ ಕಲಿಸು, ಗುರುದಕ್ಷಿಣೆಯಾಗಿ ಕಾಕಾ ಅಂಗಡಿಯಲ್ಲಿ ಬೈಟೂ ಕಾಫಿ ಪ್ಲಸ್ ಬನ್’ ಎಂದೆ. ‘ಹಾಗಿದ್ದರೆ ನಾನು ಹೇಳುವುದನ್ನು ಮಧ್ಯೆ ಬಾಯಿ ಹಾಕದೆ ಕೇಳು’ ಸೂಚನೆ ಕೊಟ್ಟು ಶುರು ಮಾಡಿದ.

ADVERTISEMENT

‘ಮೊದಲು, ಮೌನ ಧ್ಯಾನ. ಅಂದರೆ, ಏಕಕಾಲದಲ್ಲಿ ಮೂಗನಾಗಿಯೂ ಕಿವುಡ ನಾಗಿಯೂ ಇರುವಂತೆ ಮನಸ್ಸನ್ನು ಸಜ್ಜುಗೊಳಿ ಸುವ ಧ್ಯಾನ. ಉದಾ... ‘ಇನ್ನೂ ಕೆಲಸ ಮುಗಿಸಿಲ್ಲವೇ’ ಎಂದು ಬಾಸ್‌ ಬೈಗುಳಾರ್ಚನೆ ಶುರು ಮಾಡುವಾಗ ತಲೆತಗ್ಗಿಸಿ ಕಿವಿ, ಬಾಯಿಗೆ ಕೆಲಸ ಕೊಡದೆ ಮೌನ ಧ್ಯಾನದಲ್ಲಿರುವುದು’.

‘ಭೇಷ್’ ಎಂಬಂತೆ ಹೆಬ್ಬೆಟ್ಟೆತ್ತಿದೆ. ‘ಶಯನ ಧ್ಯಾನ... ಕುಳಿತ ಕುರ್ಚಿಯಲ್ಲೇ ಕಣ್‌ ಬಿಟ್ಟುಕೊಂಡು ರಿಲ್ಯಾಕ್ಸ್ ಆಗುವುದು... ಇದನ್ನು ಕಚೇರಿ, ಮನೆ ಎಲ್ಲಾದರೂ ಮಾಡಬಹುದು’.

‘ಈಗ ನಡೀತಿರೋದು ಅದೇ ಅಲ್ವೆ? ಆಡಳಿತ ಕೆಟ್ಟಿದೆ, ಮೈತ್ರಿ ಇಲ್ಲ, ತರಕಾರಿ ಬೆಲೆ ಏರಿದೆ, ಕರೆಂಟ್ ಇಲ್ಲ... ಆದರೂ ಬಿಲ್ ಶಾಕಿಂಗ್, ನೀರಿಲ್ಲ ಅಂತ ಬೊಬ್ಬೆ ಹೊಡೀತಿದ್ರೂ ರಿಯಾಕ್ಷನ್ ಇಲ್ವಲ್ಲ... ಅದ್ಸರಿ, ಬಾಸ್ ಇಷ್ಟಕ್ಕೇ ಖುಷಿಯಾದರೇ?’

‘ಯಾರಿಗೂ ಹೇಳ್ಬೇಡ. ಅರ್ಧ ಚಕ್ರಾಸನ ಮಾಡಿದರೆ ಆಸ್ತಮ ಬರೋಲ್ಲ ಅಂತ ನನಗೆ ಬಂದಿದ್ದ ಸಂದೇಶ ರವಾನಿಸಿದೆ. ಆಫೀಸ್‌ನಲ್ಲಿ ದೇಹವನ್ನು ಅರ್ಧ ಬಗ್ಗಿಸಿ, ಯಥಾಸ್ಥಿತಿಗೆ ಬರೋಕ್ಕೆ ಅವಸ್ಥೆ ಬಿದ್ದರು. ಇದೇ ನೆಪ, ಮಾಲೀಕರನ್ನು ರಜೆ ಕೇಳಿ ಎಂದು ಸಲಹೆ ನೀಡಿದೆ. ಒಂದು ವಾರ ರಜಾ ಮಂಜೂರು, ವಿತೌಟ್ ಮೆಡಿಕಲ್ ಸರ್ಟಿಫಿಕೇಟ್. ಈಗ ಹಾಯಾಗಿ ಪ್ರವಾಸ ಹೋಗಿದ್ದಾರೆ...’ ಆಕಳಿಸಿದ.

‘ಅರ್ಥವಾಯ್ತು, ನಡಿ’ ಎಂದು ಕಾಕಾ ಅಂಗಡಿಯತ್ತ ಹೆಜ್ಜೆ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.