ಪ್ರಧಾನಿ ನರೇಂದ್ರ ಮೋದಿ
ಈ ಮೊದಲು ಜವಾಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಅವರು ನಾಯಕರಾಗಿ ಪ್ರಖರವಾಗಿ ಕಾಣಿಸಿಕೊಂಡಿದ್ದರೂ ಅವರ ಕಾಲದ ಕಾಂಗ್ರೆಸ್‌ಗೆ ದೊಡ್ಡ ಪ್ರತಿಸ್ಪರ್ಧಿ ಇರಲಿಲ್ಲ. ಆದರೆ ಮೋದಿ ಅವರು ತಮ್ಮ ವರ್ಚಸ್ಸಿನಿಂದ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಹಿಂದೆ ಗುಜರಾತ್ ಚುನಾವಣೆಯಲ್ಲಿಯೂ ಗೆಲುವು ತಂದುಕೊಟ್ಟಿದ್ದಾರೆ. ಇಂಥದ್ದು ಇಂದಿರಾ ಅವರಿಗೂ ಸಾಧ್ಯವಾಗಿರಲಿಲ್ಲ...
ದೇಶದ ನಾಯಕತ್ವ ಬಹಳ ದೃಢವಾಗಿ ಇದ್ದರೆ, ಸಾಮಾನ್ಯವಾಗಿ ಆ ನಾಯಕತ್ವದ ಪರವಾದ ಹಾಗೂ ವಿರುದ್ಧವಾದ ಅಭಿಪ್ರಾಯಗಳು ಬಹಳ ತೀಕ್ಷ್ಣವಾಗಿಯೇ ಇರುತ್ತವೆ. ಇದಕ್ಕೆ ನರೇಂದ್ರ ಮೋದಿ ಅವರ ನಾಯಕತ್ವ ಸೂಕ್ತ ಉದಾಹರಣೆ. ಅವರ ಬೆಂಬಲಿಗರು ಹುಚ್ಚುಕಟ್ಟುವ ಪ್ರೇಮ ಪ್ರಕಟಿಸಿದರೆ, ವಿರೋಧಿಗಳು ಅಷ್ಟೇ ಕಟುವಾದ ಟೀಕೆಗಳನ್ನು ಮಾಡುವುದನ್ನು ನಾವು ಹನ್ನೊಂದು ವರ್ಷಗಳಲ್ಲಿ ನೋಡಿದ್ದೇವೆ.
ನರೇಂದ್ರ ಮೋದಿ ಅವರನ್ನು ಸ್ವತಂತ್ರ ಭಾರತದ ಅತ್ಯಂತ ಶಕ್ತಿಯುತ ಪ್ರಧಾನಿ ಎನ್ನಬಹುದು. ಅದಕ್ಕೆ ಕಾರಣವೂ ಇದೆ. ಈ ಮೊದಲು ಜವಾಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿಯವರು ನಾಯಕರಾಗಿ ಪ್ರಖರವಾಗಿ ಕಾಣಿಸಿಕೊಂಡಿದ್ದರೂ ಅವರ ಕಾಲದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪ್ರತಿಸ್ಪರ್ಧಿ ಇರಲಿಲ್ಲ. ಆದರೆ ಮೋದಿ ಅವರು ತಮ್ಮ ವರ್ಚಸ್ಸಿನ ಕಾರಣಕ್ಕಾಗಿಯೇ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಹಿಂದೆ ಗುಜರಾತ್ ವಿಧಾನಸಭೆಯ ಚುನಾವಣೆಯಲ್ಲಿಯೂ ಗೆಲುವು ತಂದುಕೊಟ್ಟಿದ್ದಾರೆ. ಇಂಥದ್ದು ಇಂದಿರಾ ಅವರಿಗೂ ಸಾಧ್ಯವಾಗಿರಲಿಲ್ಲ.
ಯುಪಿಎ ಸರ್ಕಾರ ತನ್ನ ಎರಡನೇ ಅವಧಿಯಲ್ಲಿ ಬಹಳ ಭ್ರಷ್ಟಗೊಂಡಿದೆ ಎಂಬ ಭಾವನೆ ಮೂಡಿತ್ತು. ಆ ಸಂದರ್ಭದಲ್ಲಿ ನೀತಿ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಆಗುತ್ತಿರಲಿಲ್ಲ ಎಂಬ ಭಾವನೆಯೂ ಇತ್ತು. ಅಂದು ಬಿಜೆಪಿಯ ಹಿಂದುತ್ವ ಹಾಗೂ ಮೋದಿ ಅವರ ಬಲಿಷ್ಠ ನಾಯಕತ್ವ, ಅಭಿವೃದ್ದಿಯ ಮಂತ್ರವು ಕಾಂಗ್ರೆಸ್ಸನ್ನು ಸೋಲಿಸಿದ್ದುದು ಸತ್ಯ. ಅಂದಿನಿಂದ ಇಂದಿನವರೆಗೂ ಮೋದಿ ನಾಯಕತ್ವದ ಬಗ್ಗೆ ವಿರೋಧಿಗಳಿಗೆ ಸಿಟ್ಟು ಇದ್ದಿರಬಹುದಾದರೂ ಅವರ ನಾಯಕತ್ವ ದುರ್ಬಲ ಎಂದು ಅನ್ನಿಸಿಲ್ಲ. ಇದು ಒಂದು ಸಾಧನೆ.
ಬಲಿಷ್ಠ ನಾಯಕತ್ವಕ್ಕೆ ಸಾಕ್ಷ್ಯ ಏನು ಎಂಬ ಪ್ರಶ್ನೆ ಬರಬಹುದು. ಸಣ್ಣ ಉದಾಹರಣೆ ಇಲ್ಲಿದೆ. ಸ್ವಾತಂತ್ರ್ಯಾನಂತರ ದೇಶದಲ್ಲಿ ಸ್ವಚ್ಛತೆಯನ್ನು ಆದ್ಯತೆಯಾಗಿ ಇರಿಸಿಕೊಂಡ ಹಲವು ಯೋಜನೆಗಳು ಶುರು ಆಗಿದ್ದರೂ ಅವು ಜನಮಾನಸದಲ್ಲಿ ಪ್ರಭಾವ ಬೀರಲಿಲ್ಲ. ಇಂದು ದೇಶದಲ್ಲಿ ಸ್ವಚ್ಛತೆಯ ಕೆಲಸ ಪೂರ್ತಿ ಆಗಿದೆ ಎನ್ನಲಾಗದು. ಆದರೆ ಮೋದಿ ಅವರ ವರ್ಚಸ್ಸಿನ ಕಾರಣದಿಂದಾಗಿ, ಸ್ವಚ್ಛತೆಯ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿ ಮೂಡಿದೆ. ಅದರ ಪರಿಣಾಮವಾಗಿ ದೇಶದಲ್ಲಿ ಸುಮಾರು ಹತ್ತು ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣ ಆಗಿದೆ.
ಕಪ್ಪು ಹಣದ ನಿರ್ಮೂಲನೆಗೆ ನೋಟು ರದ್ದತಿಯ ಕ್ರಮವು ಅರ್ಥಶಾಸ್ತ್ರದ ಪಾಠಗಳಲ್ಲೇ ಉಲ್ಲೇಖವಾಗಿರುವ ಒಂದು ಪರಿಹಾರ. ಆದರೆ ಆ ಅಸ್ತ್ರವನ್ನು ಕೈಗೆತ್ತಿಕೊಳ್ಳುವ ಮನಸ್ಸು ಹಿಂದಿನ ಯಾವ ನಾಯಕರಿಗೂ ಇರಲಿಲ್ಲ. ಮೋದಿ ಅವರು ಆ ಅಸ್ತ್ರ ಪ್ರಯೋಗಿಸುವ ಧೈರ್ಯ ಮಾಡಿದರು. ಆದರೆ, ಅಧಿಕಾರಿಗಳ ಮಟ್ಟದಲ್ಲಿ ಆದ ಲೋಪದ ಕಾರಣದಿಂದಾಗಿ ಪರಿಣಾಮವು ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ. ಹೀಗಿದ್ದರೂ, ಇಡೀ ದೇಶವು ಈ ವಿಚಾರದಲ್ಲಿ ಮೋದಿ ಅವರ ಸದುದ್ದೇಶದ ಬಗ್ಗೆ ಸಂಶಯಪಟ್ಟಿಲ್ಲ. ಯೋಜನೆಯ ಫಲ ಎಂಬಂತೆ ದೇಶದ ಹಣಕಾಸು ವ್ಯವಹಾರದಲ್ಲಿ ಡಿಜಿಟಲ್ ಕ್ರಾಂತಿ ಆಗಿದೆ.
ನಮ್ಮಲ್ಲಿ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ಬರಬೇಕು ಅನ್ನುವುದು 1996ರಲ್ಲೇ ಸರ್ಕಾರದ ಗಮನಕ್ಕೆ ಬಂದಿತ್ತು. ಅದನ್ನು ಜಾರಿಗೆ ತಂದರೆ ಆರಂಭದಲ್ಲಿ ಎದುರಾಗಬಹುದಾದ ಹಾನಿಗಳಿಂದಾಗಿ ರಾಜಕೀಯವಾಗಿ ನಷ್ಟ ಆಗಬಹುದು ಎಂಬ ಭೀತಿಯಿಂದ ಯಾರೂ ಆ ವ್ಯವಸ್ಥೆಯನ್ನು ಜಾರಿಗೆ ತರುವ ಕೆಲಸ ಕೈಗೆತ್ತಿಕೊಳ್ಳಲಿಲ್ಲ. ಮೋದಿ ಅವರು ಆ ಸವಾಲನ್ನು ಸ್ವೀಕಾರ ಮಾಡಿದರು. ಆರಂಭಿಕ ಎಡರು–ತೊಡರುಗಳನ್ನು ನಿಭಾಯಿಸಿ, ಇಂದು ಜಿಎಸ್‌ಟಿ ವ್ಯವಸ್ಥೆ ಬಹಳ ಸುಲಲಿತವಾಗಿ ನಡೆಯುವಂತೆ ಮಾಡಲಾಗಿದೆ. 2018ರಲ್ಲಿ ಮಾಸಿಕ ₹62,000 ಕೋಟಿ ಇದ್ದ ಜಿಎಸ್‌ಟಿ ವರಮಾನ ಸಂಗ್ರಹ ಇದೇ ಏಪ್ರಿಲ್‌ನಲ್ಲಿ ದಾಖಲೆಯ ₹2.37 ಲಕ್ಷ ಕೋಟಿ ಆಗಿದೆ.
2018ರ ನಂತರದಲ್ಲಿ ಭಾರತವೂ ಸೇರಿ ವಿಶ್ವದ ಹಲವು ಪ್ರಮುಖ ದೇಶಗಳ ಜಿಡಿಪಿ ಬೆಳವಣಿಗೆ ಪ್ರಮಾಣ ನಿಧಾನವಾಗಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯ ಹೊಡೆತವೂ ಇದರ ಮೇಲೆ ಪ್ರಭಾವ ಬೀರಿದೆ. ಇಂತಹ ಸಂಕೀರ್ಣ ಸ್ಥಿತಿಯಲ್ಲೂ ನಮ್ಮ ದೇಶದ ಜಿಡಿಪಿ ಬೆಳವಣಿಗೆ ದರವು ಶೇ 6.5ರ ಆಸುಪಾಸಿನಲ್ಲಿ ಇದೆ, ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆ ಎಂಬ ಹಿರಿಮೆಯನ್ನು ಕಾಪಾಡಿಕೊಂಡಿದೆ.
ಮೂಲಸೌಕರ್ಯಕ್ಕೆ ಎಷ್ಟು ಒತ್ತು ಕೊಡುತ್ತೇವೆ ಎಂಬುದು ದೇಶದ ಅಭಿವೃದ್ದಿಯಲ್ಲಿ ಗಮನಾರ್ಹವಾಗುತ್ತದೆ. 2025-26ರ ಕೆಂದ್ರ ಬಜೆಟ್‌ನ ತೆರಿಗೆ ವರಮಾನ ಸಂಗ್ರಹ ₹34.5 ಲಕ್ಷ ಕೋಟಿ ಇದೆ. ಈ ಅವಧಿಗೆ ಸರ್ಕಾರವು ಮೂಲಸೌಕರ್ಯಕ್ಕಾಗಿ ದಾಖಲೆಯ ₹11 ಲಕ್ಷ ಕೋಟಿ ಹಣ ಖರ್ಚು ಮಾಡಲಿದೆ.
ಶತ್ರುಗಳ ಎದುರು ಮೃದುಭಾವ ತೋರುವ, ಅನಿಶ್ಚಿತತೆ ತೋರುವ ಯಾವುದೇ ದೇಶ ಇತರ ದೇಶಗಳ ಗೌರವ ಪಡೆಯದು. ಚೀನಾದೊಂದಿಗೆ ಬಿಕ್ಕಟ್ಟಿನ ಸಂದರ್ಭವನ್ನು ಮೋದಿ ನೇತೃತ್ವದ ಸರ್ಕಾರ ಹತ್ತು ವರ್ಷಗಳ ಹಿಂದೆ ದೃಢವಾಗಿ ಎದುರಿಸಿದೆ. ನಿಮ್ಮ ಸೈನಿಕರು ಹಿಂದಕ್ಕೆ ಹೋಗದೆ ಯಾವುದೇ ಮಾತುಕತೆ ಇಲ್ಲ ಎಂದು ಪ್ರಧಾನಿ ಖಡಾಖಂಡಿತವಾಗಿ ಚೀನಾಕ್ಕೆ ಹೇಳಿದ್ದರು. ಇದೇ ದಿಟ್ಟ ನಿಲುವನ್ನು ಮುಂದೆ ಉರಿ, ಬಾಲಾಕೋಟ್ ಹಾಗೂ ‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಸರ್ಕಾರ ಪ್ರದರ್ಶಿಸಿದೆ. ‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಯಾವುದೇ ದೇಶದ ಸಹಾಯದ ನಿರೀಕ್ಷೆ ಮಾಡದೆ, ಯಾವುದೇ ದೇಶದ ಪ್ರತಿಕ್ರಿಯೆಗಳನ್ನು ಹೆಚ್ಚು ಗಣನೆಗೆ ತೆಗೆದುಕೊಳ್ಳದೇ ಸ್ವತಂತ್ರವಾಗಿ ಕಾರ್ಯಾಚರಣೆ ಮಾಡಿರುವುದು ‘ಇದು ನವಭಾರತದ ಯುಗ’ ಎಂಬುದರ ಸಂಕೇತವೇ ಆಗಿದೆ.
ಜನಧನ್ ಯೋಜನೆಯ ಮೂಲಕ 55 ಕೋಟಿ ಜನಸಾಮಾನ್ಯರಿಗೆ ಬ್ಯಾಂಕ್ ಖಾತೆ, 10 ಕೋಟಿ ಮನೆಗಳಿಗೆ ಉಜ್ವಲಾ ಯೋಜನೆಯ ಮೂಲಕ ಅನಿಲ ಸಂಪರ್ಕ, ಕಿಸಾನ್ ಸಮ್ಮಾನ್ ಯೋಜನೆಯ ಅಡಿ ರೈತರ ಖಾತೆಗೆ ನೇರ ಹಣ ವರ್ಗಾವಣೆ, ಆಯಷ್ಮಾನ್ ಯೋಜನೆಯ ಅಡಿ ಬಡವರಿಗೆ ₹5 ಲಕ್ಷದವರೆಗಿನ ಚಿಕಿತ್ಸಾ ವೆಚ್ಚಕ್ಕೆ ನೆರವು... ಇವೆಲ್ಲ ನೇರವಾಗಿ ಜನಸಾಮಾನ್ಯರಿಗೆ ಆಗಿರುವ ಪ್ರಯೋಜನಗಳು.
ಬ್ಯಾಂಕುಗಳ ಅನುತ್ಪಾದಕ ಸಾಲದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಉದ್ಯಮ ಕ್ಷೇತ್ರದಲ್ಲಿ ತಂದ ಬದಲಾವಣೆಗಳು, ಉದ್ದಿಮೆಗಳು ಆರ್ಥಿಕವಾಗಿ ಮುಳುಗಿದಾಗ ಬ್ಯಾಂಕಿಗೆ ನಷ್ಟ ಆಗದಂತೆ ದಿವಾಳಿ ಸಂಹಿತೆಯ ಮೂಲಕ ಕೊಟ್ಟಿರುವ ರಕ್ಷಣೆ, ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆ ಮೂಲಕ ನಮ್ಮಲ್ಲೇ ಉತ್ಪಾದನೆ ಮಾಡಿ ವಿದೇಶಕ್ಕೆ ರಫ್ತು ಮಾಡುವ ಆಲೋಚನೆ, ಉದ್ಯೋಗ ಸೃಷ್ಟಿ ಹಾಗೂ ವಿದೇಶಿ ವಿನಿಮಯ ಗಳಿಕೆ ಈ ಸರ್ಕಾರದ ಅವಧಿಯಲ್ಲಿ ಆಗಿರುವ ಗುರುತಿಸಬಹುದುದಾದ ಪ್ರಗತಿ.
ಹೆದ್ದಾರಿ ನಿರ್ಮಾಣಕ್ಕೆ ವೇಗ, ಹೊಸದಾದ ಸುಮಾರು 25 ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣ ಕಾರ್ಯ ಆರಂಭ, ಸಣ್ಣ ನಗರಗಳಲ್ಲೂ ವಿಮಾನಯಾನ ಸೌಲಭ್ಯ ಇರಬೇಕು ಎಂಬ ಉದ್ದೇಶದ ‘ಉಡಾನ್’ ಯೋಜನೆ ಅಡಿ ನಿರ್ಮಿಸಿದ ಹಲವು ವಿಮಾನ ನಿಲ್ದಾಣಗಳು, ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಕಾಣಸಿಗುವ ರೈಲುಗಳಿಗೆ ಸರಿಸಮಾನವಾದ ‘ವಂದೇ ಭಾರತ್’ ರೈಲುಗಳು ಕೂಡ ಈ 11 ವರ್ಷಗಳ ಅಭಿವೃದ್ಧಿಯ ಸೂಚಕಗಳು.
ಮುಸ್ಲಿಂ ಮಹಿಳೆಯರ ಜೀವನ ಭದ್ರತೆಯ ದೃಷ್ಟಿಯಿಂದ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಪಡಿಸುವ ಕಾನೂನು ಜಾರಿಗೆ ತಂದಿರುವುದು, ಪೌರತ್ವ ತಿದ್ದುಪಡಿ ಕಾಯ್ದೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸುವ ಮೂಲಕ ಅದನ್ನು ದೇಶದೊಳಗೆ ಪೂರ್ತಿಯಾಗಿ ಸಮ್ಮಿಲನಗೊಳಿಸಿರುವುದು, ದೇಶದ ಅಸ್ಮಿತೆಯ ಸಂಕೇತವಾದ ರಾಮ ಮಂದಿರದ ನಿರ್ಮಾಣ ಈ ಸರ್ಕಾರದ ಚಾರಿತ್ರಿಕ ಸಾಧನೆಗಳು. ಆಧಾರ್ ಯೋಜನೆಯ ಅನುಷ್ಠಾನ, ಗ್ರಾಮೀಣ ವಿದ್ಯುದೀಕರಣ, ಮನೆಗಳಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ ಕ್ರಮಗಳು ಸರ್ಕಾರಕ್ಕೆ ಜನಮಾನ್ಯತೆಯನ್ನು ಗಳಿಸಿಕೊಟ್ಟಿವೆ.
ಲೇಖಕ: ಬಿಜೆಪಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.