ADVERTISEMENT

ಅಂಟಿದ ಕಳಂಕ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ದೇಶದ ಘಟಾನುಘಟಿ ಉದ್ಯಮಿಗಳು ಅತ್ಯಾಸಕ್ತಿಯಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತಿರುವ ಹೊತ್ತಿನಲ್ಲಿಯೇ ಆ ರಾಜ್ಯದ ಮಹಾಲೇಖಪಾಲರು (ಸಿಎಜಿ) ಬಿಡುಗಡೆಗೊಳಿಸಿರುವ ವರದಿ ಈ ಸ್ನೇಹಸಂಬಂಧದ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ.

ಮೋದಿ ಸರ್ಕಾರ  ಉದ್ಯಮಿಗಳಿಗೆ ನೆರವಾಗುವ ಉದ್ದೇಶದಿಂದ ಕೈಗೊಂಡಿರುವ ಕೆಲವು ನಿರ್ಧಾರಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ 580 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಕಳೆದ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಸಿಎಜಿ ವರದಿ ಹೇಳಿದೆ. ನಿಯಮಾವಳಿ ಪ್ರಕಾರ ಅನಿಲ ಸಾಗಾಣಿಕೆ ಶುಲ್ಕ ವಸೂಲಿ ಮಾಡದೆ ಇರುವುದರಿಂದ ರಿಲಯನ್ಸ್ ಇಂಡಸ್ಟ್ರಿಸ್‌ಗೆ 52.27 ಕೋಟಿ ರೂಪಾಯಿ ಮತ್ತು ವಿದ್ಯುತ್ ಖರೀದಿ ಒಪ್ಪಂದದ ಷರತ್ತುಗಳನ್ನು ಸಡಿಲಿಸಿದ ಕಾರಣದಿಂದಾಗಿ ಅದಾನಿ ಪವರ್‌ಲಿಮಿಟೆಡ್‌ಗೆ ಅಕ್ರಮವಾಗಿ 160ಕೋಟಿ ರೂಪಾಯಿಯಷ್ಟು ಲಾಭವಾಗಿದೆ.

ಇದೇ ರೀತಿ ಎಸ್ಸಾರ್ ಸ್ಟೀಲ್ಸ್, ಫೋರ್ಡ್ ಹಾಗೂ ಲಾರ್ಸನ್ ಮತ್ತು ಟುಬ್ರೊ ಕಂಪೆನಿಗಳಿಗೆ ನಿಯಮಗಳನ್ನು ಉಲ್ಲಂಘಿಸಿ ಜಮೀನು ನೀಡಿರುವುದನ್ನು ಕೂಡಾ ಸಿಎಜಿ ಪತ್ತೆ ಹಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಉದ್ಯಮಿಗಳು ಗುಜರಾತ್ ರಾಜ್ಯದಲ್ಲಿ ಉದ್ಯಮಗಳ ಸ್ಥಾಪನೆಗೆ ಸಾಲು ಹಿಡಿದು ನಿಂತಿದ್ದಾರೆ. ನರೇಂದ್ರಮೋದಿ ಅವರು ಉದ್ಯಮಿ ಸ್ನೇಹಿ ಮುಖ್ಯಮಂತ್ರಿ ಎಂದೂ ಕೊಂಡಾಡಲಾಗುತ್ತಿದೆ.

ಸರ್ಕಾರವೊಂದು ಇಂತಹ ಉದ್ಯಮಪರವಾದ ವಾತಾವರಣವನ್ನು ನಿರ್ಮಾಣ ಮಾಡುವುದು ತಪ್ಪಲ್ಲ. ಇದರಿಂದ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ, ಆರ್ಥಿಕ ಚಟುವಟಿಕೆ ಚುರುಕಾಗುತ್ತದೆ ಎನ್ನುವುದು ನಿಜ. ಆದರೆ ನಿಯಮಾವಳಿಗಳನ್ನು ಸಡಿಲಿಸಿ ಬೊಕ್ಕಸಕ್ಕೆ ನಷ್ಟ ಉಂಟುಮಾಡಿಕೊಂಡು ಉದ್ಯಮಿಗಳಿಗೆ ನೆರವಾಗುವುದು ಸದುದ್ದೇಶದ ನಡವಳಿಕೆ ಅಲ್ಲ.

ಉದ್ಯಮಿಗಳ ಬಗೆಗಿನ ಸರ್ಕಾರದ ಅತಿಔದಾರ್ಯವನ್ನು ಇನ್ನಷ್ಟು ಸಂಶಯದಿಂದ ನೋಡುವಂತೆ ಮಾಡಿರುವುದು ಮಂಗಳವಾರವಷ್ಟೇ ಗುಜರಾತ್ ವಿಧಾನಸಭೆ ಅಂಗೀಕರಿಸಿರುವ ಲೋಕಾಯುಕ್ತ ಆಯೋಗ ಮಸೂದೆ. ನರೇಂದ್ರ ಮೋದಿ ಅವರ ರಾಜ್ಯದಲ್ಲಿ ಕಳೆದ ಹತ್ತುವರ್ಷಗಳಿಂದ ಲೋಕಾಯುಕ್ತರೇ ಇಲ್ಲ. ಮುಖ್ಯಮಂತ್ರಿಗಳ ಅಸಹಕಾರದಿಂದ ಬೇಸತ್ತು ರಾಜ್ಯಪಾಲರು ಕಾನೂನುದತ್ತ ಅಧಿಕಾರ ಬಳಸಿಕೊಂಡು ಲೋಕಾಯುಕ್ತರನ್ನು ನೇಮಿಸಿದರೂ ರಾಜ್ಯಸರ್ಕಾರ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ತಡೆಹಿಡಿದಿತ್ತು.

ಸುಪ್ರೀಂಕೋರ್ಟ್ ರಾಜ್ಯಪಾಲರ ಕ್ರಮವನ್ನೇ ಎತ್ತಿಹಿಡಿದ ನಂತರ ಬೇರೆ ದಾರಿ ತೋಚದ ನರೇಂದ್ರಮೋದಿ ಅವರು ಈಗ ಇರುವ ಕಾಯ್ದೆಗೆ ತಿದ್ದುಪಡಿ ಮಾಡಿ ಲೋಕಾಯುಕ್ತ ನೇಮಕದ ಆಶಯವನ್ನೇ ಸಂಪೂರ್ಣವಾಗಿ ತಿರುಚಿದ್ದಾರೆ. ಹೊಸ ಮಸೂದೆಯ ಪ್ರಕಾರ ಮುಖ್ಯಮಂತ್ರಿ ನೇತೃತ್ವದ ಏಳು ಸದಸ್ಯರ ಸಮಿತಿ ಲೋಕಾಯುಕ್ತ ಸ್ಥಾನಕ್ಕೆ ಶಿಫಾರಸು ಮಾಡಿದ ಹೆಸರಿಗೆ ಅನುಮೋದನೆ ನೀಡುವುದಷ್ಟೇ ರಾಜ್ಯಪಾಲರ ಕೆಲಸ.

ಈಗ ಇರುವ ಕಾಯ್ದೆಯ ಪ್ರಕಾರ ರಾಜ್ಯಪಾಲರು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಮತ್ತು ವಿರೋಧಪಕ್ಷದ ನಾಯಕರ ಜತೆ ಸಮಾಲೋಚನೆ ಮಾಡಿ ಲೋಕಾಯುಕ್ತರನ್ನು ನೇಮಿಸಬಹುದಿತ್ತು. ಲೋಕಾಯುಕ್ತರ ನೇಮಕಾತಿಯಲ್ಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಮತ್ತು ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ದುರುದ್ದೇಶದಿಂದಲೇ ಹೊಸಮಸೂದೆಯನ್ನು ರೂಪಿಸಲಾಗಿದೆ ಎನ್ನುವುದು ಸ್ಪಷ್ಟ. ಈ ರೀತಿಯ ಆತ್ಮವಂಚನೆಯ ನಡವಳಿಕೆ ನರೇಂದ್ರಮೋದಿ ಅವರು ಪ್ರತಿಪಾದಿಸುತ್ತಾ ಬಂದಿರುವ ಪ್ರಾಮಾಣಿಕತೆಗೆ ವಿರುದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.