ಇಶ್ರತ್ ಜಹಾನ್ ಸೇರಿದಂತೆ ನಾಲ್ವರನ್ನು ಗುಜರಾತ್ ಪೊಲೀಸರು ಸಾಯಿಸಿದ್ದು ನಕಲಿ ಎನ್‌ಕೌಂಟರ್‌ವೊಂದರಲ್ಲಿ ಎಂದು ಸಿಬಿಐ, ಅಹಮದಾಬಾದ್‌ನ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ನಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಈ ಹಿಂದೆ ಈ ಪ್ರಕರಣ ತೀವ್ರ ವಿವಾದ ಸೃಷ್ಟಿಸಿದಾಗ 2009ರಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಅಹಮದಾಬಾದ್‌ನ ಮೆಟ್ರೊಪಾಲಿಟನ್ ನ್ಯಾಯಾಧೀಶರು, ಇಶ್ರತ್ ಹಾಗೂ ಇತರರು ಸತ್ತಿದ್ದು ನಕಲಿ ಎನ್‌ಕೌಂಟರ್‌ವೊಂದರಲ್ಲಿ ಎಂದು ದೃಢವಾಗಿ ತಿಳಿಸಿದ್ದರು. 2011ರಲ್ಲಿ ಗುಜರಾತ್ ಹೈಕೋರ್ಟ್ ರಚಿಸಿದ ವಿಶೇಷ ತನಿಖಾ ದಳ ಇದು ನಕಲಿ ಎನ್‌ಕೌಂಟರ್ ಎಂದು ಪ್ರಮಾಣಪತ್ರದಲ್ಲಿ ತಿಳಿಸಿತ್ತು.
ಹೈಕೋರ್ಟ್ ಪೊಲೀಸ್ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ತಿಳಿಸಿತ್ತು. ಅಹಮದಾಬಾದ್‌ಗೆ ಹೊರಟಿದ್ದ ಮುಂಬೈನ ಯುವತಿ ಇಶ್ರತ್ ಮತ್ತು ಆಕೆಯ ಜೊತೆಗಿದ್ದ ಮೂವರು, ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ಹೂಡಿದ್ದರೆಂದು 2004ರಲ್ಲಿ ಪೊಲೀಸರು ಆರೋಪಿಸಿದ್ದರು. ನಂತರ ಗುಂಡಿನ ಚಕಮಕಿ ನಡೆದು ಅವರ್ಲ್ಲೆಲರೂ ಸತ್ತರೆಂದು ಪೊಲೀಸರು ತಿಳಿಸಿದ್ದರು.
`ಇದು ನಕಲಿ ಎನ್‌ಕೌಂಟರ್. ಉನ್ನತ ಹುದ್ದೆಗೆ ಬಡ್ತಿ ಗಿಟ್ಟಿಸಲು ಮತ್ತು ಮೋದಿ ಅವರ ಮೆಚ್ಚುಗೆ ಗಳಿಸಿ ಅವರಿಗೆ ಹತ್ತಿರವಾಗುವ ಉದ್ದೇಶದಿಂದ ಕತೆ ಕಟ್ಟಲಾಗಿತ್ತು' ಎನ್ನುವುದು ಅನಂತರ ಬಯಲಾಗಿತ್ತು. ಈ ಹಿಂದೆ ಸೊಹ್ರಾಬುದ್ದೀನ್ ಶೇಕ್ ಹತ್ಯೆ ಕೂಡ ಅಸಲಿ ಕಾರ್ಯಾಚರಣೆಯಿಂದ ನಡೆದದ್ದು ಅಲ್ಲ ಎಂದು ಅನಂತರ ಪೊಲೀಸರು ಒಪ್ಪಿಕೊಂಡಿದ್ದರು. ಸತ್ತ ಬಳಿಕ ಅವರಿಗೆ ಉಗ್ರಗಾಮಿ ಎಂದು ಹಣೆಪಟ್ಟಿ ಕಟ್ಟಲಾಗಿತ್ತು.
ಇಶ್ರತ್ ಹಾಗೂ ಇತರರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟು ಪೊಲೀಸರಿಗೆ ಬೇಕಾಗಿರುವ ಅಂದಿನ ಡಿಜಿಪಿ ಪಿ.ಪಿ. ಪಾಂಡೆ ಇನ್ನೂ ನಾಪತ್ತೆಯಾಗಿದ್ದಾರೆ. ಅವರು ಹಾಗೂ ಅಮಾನತುಗೊಂಡಿರುವ ಡಿಐಜಿ (ಅಪರಾಧ ತಡೆ) ಡಿ.ಜಿ. ವಂಜಾರ ಸೇರಿದಂತೆ ಏಳು ಹಿರಿಯ ಅಧಿಕಾರಿಗಳ ಹೆಸರು ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ. ಇದು ಗುಜರಾತ್ ಪೊಲೀಸ್ ಮತ್ತು ಗುಪ್ತಚರ ಇಲಾಖೆಯ ಜಂಟಿ ನಕಲಿ ಎನ್‌ಕೌಂಟರ್ ಎನ್ನುವುದು ಬಹಿರಂಗವಾಗಿದೆ. ಸಾಯಿಸಿದ ಬಳಿಕ ಶಸ್ತ್ರಾಸ್ತ್ರ ಅವರ ಬಳಿ ಇರಿಸಿ ಸಾಕ್ಷ್ಯ ಸಿದ್ಧಪಡಿಸಲಾಗಿದೆ.
ಎಕೆ 56 ಬಂದೂಕಿನಿಂದ ಅವರು ಪೊಲೀಸರ ಮೇಲೆ ಗುಂಡು ಹಾರಿಸಿದಾಗ ಪ್ರತಿಯಾಗಿ ಗುಂಡು ಹಾರಿಸಿ ಅವರನ್ನು ಕೊಲ್ಲಲಾಯಿತು ಎಂದು ಪೊಲೀಸರು ಹೇಳಿಕೊಂಡಿದ್ದರು. ಜನರಿಗೆ ರಕ್ಷಣೆ ಮತ್ತು ನ್ಯಾಯ ದೊರಕಿಸಿಕೊಡಬೇಕಾದ ಪೊಲೀಸರು, ಅಮಾಯಕರ ಮೇಲೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್- ಎ- ತೈಯಬಾಕ್ಕೆ ಸೇರಿದವರೆಂದು ಸುಳ್ಳು ಆರೋಪ ಹೊರಿಸಿದ್ದು ಪಾಶವೀ ಕೃತ್ಯ.
ಕಾನೂನಿಗೆ ಕವಡೆ ಕಿಮ್ಮತ್ತೂ ನೀಡದೆ ಬಡ್ತಿಗಾಗಿ ರಕ್ತಪಾತ ನಡೆಸಿದ ಪೊಲೀಸರು ಮುಗ್ಧರ ಕುಟುಂಬಗಳ ಚಾರಿತ್ರ್ಯಕ್ಕೆ ಮಸಿ ಬಳೆದಿದ್ದಾರೆ. ಈವರೆಗೆ ಅವರು ಅನುಭವಿಸಿದ ನೋವು, ಮಾನಸಿಕ ಒತ್ತಡ ಊಹಿಸಲು ಅಸಾಧ್ಯ. ಜಮ್ಮು-ಕಾಶ್ಮೀರ, ರಾಜಸ್ತಾನ, ಆಂಧ್ರಪ್ರದೇಶ, ಜಾರ್ಖಂಡ್, ಬಿಹಾರ ಮತ್ತು ಈಶಾನ್ಯ ರಾಜ್ಯಗಳಲ್ಲಿ ನಕಲಿ ಎನ್‌ಕೌಂಟರ್‌ಗಳು ಮೇಲಿಂದ ಮೇಲೆ ಸುದ್ದಿ ಮಾಡಿವೆ. ಇವುಗಳಿಗೆ ಪೂರ್ಣ ವಿರಾಮ ಬೇಕಾಗಿದೆ. ಈ ವಿಚಾರದಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರು ಆಶಾವಾದ ಇರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.