ADVERTISEMENT

ಅಸಮರ್ಥನೀಯ ಏರಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 19:30 IST
Last Updated 16 ಜನವರಿ 2011, 19:30 IST

ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಮತ್ತೆ ಪೆಟ್ರೋಲ್ ದರವನ್ನು ಲೀಟರ್‌ಗೆ ಎರಡೂವರೆ ರೂಪಾಯಿಯಷ್ಟು ಹೆಚ್ಚಿಸಿವೆ. ಕಳೆದ ತಿಂಗಳ ಮಧ್ಯಭಾಗದಲ್ಲಿ ಲೀಟರ್‌ಗೆ ಸುಮಾರು ಮೂರು ರೂಪಾಯಿಯಷ್ಟು ಏರಿಕೆಯಾಗಿತ್ತು. ಒಂದು ತಿಂಗಳ ಅವಧಿಯಲ್ಲಿ ಎರಡು ಸಲ ಪೆಟ್ರೋಲ್ ದರ ಹೆಚ್ಚಿಸಿದ ಕ್ರಮ ಕೇಂದ್ರ ಸರ್ಕಾರದ ಜನವಿರೋಧಿ ನೀತಿ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಏರಿಕೆಯಾಗಿದೆ ಎಂಬ ಕಾರಣ ಕೊಟ್ಟು ನಷ್ಟ ತುಂಬಿಕೊಳ್ಳಲು ಪದೇ ಪದೇ ಪೆಟ್ರೋಲ್ ದರ ಹೆಚ್ಚಿಸುವುದು ಅನಿವಾರ್ಯವಾಗಿತ್ತು ಎಂದು ಕೇಂದ್ರ ಸರ್ಕಾರ ದರ ಏರಿಕೆಯನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಇಂಧನ ತೈಲಗಳ ಬೆಲೆಯನ್ನು ಅವಲಂಬಿಸಿದೆ ಎಂಬುದನ್ನು ಸರ್ಕಾರ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇಂಧನ ತೈಲಗಳ ಮೇಲೆ ಸರ್ಕಾರದ ನಿಯಂತ್ರಣವನ್ನು ತೆಗೆದು ಹಾಕಿದ ನಂತರ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಹಣದುಬ್ಬರ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನರು ತತ್ತರಿಸಿಹೋಗಿದ್ದಾರೆ. ಬಡವರು, ಕೆಳಮಧ್ಯಮ ವರ್ಗದವರು ಜೀವನ ಮಾಡುವುದೇ ದುಸ್ತರವಾಗಿದೆ. ಪರಿಸ್ಥಿತಿ ಇನ್ನಷ್ಟು ದುರ್ಭರವಾಗುವುದಕ್ಕೆ ಸರ್ಕಾರ ಅವಕಾಶ ಕೊಡಬಾರದು. ತೈಲ ಕಂಪೆನಿಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇರಬೇಕು. ಈ ಕುರಿತು ಸರ್ಕಾರ ಮರುಚಿಂತನೆ ನಡೆಸಬೇಕಿದೆ.

ಕಳೆದ ಒಂದೆರಡು ವರ್ಷಗಳಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಹಣ್ಣು, ತರಕಾರಿ, ಹಾಲು ಮತ್ತಿತರ ಜೀವನಾವಶ್ಯಕ ವಸ್ತುಗಳ ಬೆಲೆಗಳು ಏರುತ್ತಲೇ ಇದೆ.   ‘ಗಾಯದ ಮೇಲೆ ಬರೆ’ ಎಂಬಂತೆ ಪ್ರಕೃತಿಯೂ ಮುನಿಸಿಕೊಂಡಿದೆ. ಬರ, ಅಕಾಲಿಕ ಮಳೆ ಇತ್ಯಾದಿಗಳಿಂದ ಕೃಷಿ ಉತ್ಪನ್ನಗಳ ಪ್ರಮಾಣ ಕಡಿಮೆಯಾಗಿದೆ. ಈ ಪರಿಸ್ಥಿತಿಯನ್ನು ಕಾಳಸಂತೆ ಖದೀಮರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬೆಳವಣಿಗೆಗಳನ್ನು ನೋಡಿಕೊಂಡು ಕುಳಿತುಕೊಳ್ಳಬಾರದು. ‘ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಬಡವರು ಹೇಗೆ ಜೀವನ ಮಾಡುತ್ತಾರೆ ಎನ್ನುವುದೇ ಸೋಜಿಗ’ ಎಂಬಂತಹ ಮಾತುಗಳು ಪ್ರಧಾನಿಯವರ ಬಾಯಿಂದ ಬರುತ್ತಿವೆ. ಬೆಲೆ ನಿಯಂತ್ರಿಸುವ ಹೊಣೆ ಹೊತ್ತವರೇ ಅಸಹಾಯಕರಂತೆ ಮಾತನಾಡುವುದು ನಿಜಕ್ಕೂ ದುರದೃಷ್ಟಕರ. ಸರ್ಕಾರ ಮೊದಲು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕಾರಣಗಳನ್ನು ಅರ್ಥ ಮಾಡಿಕೊಳ್ಳಬೇಕು. ಪರಿಸ್ಥಿತಿಯ ದುರ್ಲಾಭ ಪಡೆಯುವವರ ವಿರುದ್ಧ ಕಠಿಣ ಕ್ರಮಗಳಿಗೆ ಮುಂದಾಗಬೇಕು. ಇಂಧನ ತೈಲ, ಆಹಾರ ಧಾನ್ಯಗಳ ಬೆಲೆ ನಿಯಂತ್ರಣಕ್ಕೆ ಗಮನ ಕೊಡಬೇಕು. ಇಲ್ಲವಾದರೆ ದಿನಬಳಕೆ ವಸ್ತುಗಳನ್ನು ಖರೀದಿಸುವ ಸಾಮರ್ಥ್ಯ ಇಲ್ಲದ ಬಡ ಜನರು ಊಟವಿಲ್ಲದೆ ಸಾಯುವಂತಹ ಪರಿಸ್ಥಿತಿ ಬಂದೀತು. ಆಹಾರ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವುದು ಕೇಂದ್ರ ಸರ್ಕಾರದ ಕೆಲಸವೇ ಆದರೂ ರಾಜ್ಯದಲ್ಲಿ ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುವುದು ರಾಜ್ಯ ಸರ್ಕಾರದ ಕೆಲಸ. ಸರ್ಕಾರ ಈ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT