ADVERTISEMENT

ಈಜಿಪ್ಟ್- ಹೊಸ ಶಕೆಗೆ ನಾಂದಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

ಜನಶಕ್ತಿಗೆ ಮಣಿದು ಈಜಿಪ್ಟ್‌ನ ಅಧ್ಯಕ್ಷ ಹೋಸ್ನಿ ಮುಬಾರಕ್ ಪಲಾಯನ ಮಾಡಿದ್ದಾರೆ. ಗಾಂಧಿ ಮಾರ್ಗದ ಮೂಲಕ ಜನರು ತಂದ ಬದಲಾವಣೆ ಯಿಂದಾಗಿ ಈಜಿಪ್ಟ್‌ನಲ್ಲಿ ಪ್ರಜಾತಂತ್ರದ ಹೊಸ ಸೂರ್ಯ ಉದಯಿಸಿದಂತಾಗಿದೆ. ಟ್ಯುನೀಶಿಯಾದಲ್ಲಿ ಆರಂಭವಾದ ಜನಕ್ರಾಂತಿಯ ಅಲೆ ಈಜಿಪ್ಟ್‌ನಲ್ಲಿ ಅಷ್ಟೇ ಅಲ್ಲ ಇಡೀ ಅರಬ್ ವಲಯವನ್ನು ಆವರಿಸುವ ಸೂಚನೆ ಕಾಣುತ್ತಿದೆ. ಆದರೆ ಎಲ್ಲ ಕಡೆ ಈಜಿಪ್ಟ್‌ನಲ್ಲಿ ಕಂಡಂಥದೇ ಬದಲಾವಣೆ ಆಗುತ್ತದೆಂದು ಹೇಳುವುದು ಕಷ್ಟ. ಜನಾಂದೋಲವನ್ನು ಬಂದೂಕಿನ ಬಲದಿಂದ ದಮನಮಾಡುವ ಸಾಧ್ಯತೆಗಳು ಈಗಾಗಲೇ ಕಾಣಿಸುತ್ತಿವೆ.
 
ಈಜಿಪ್ಟ್‌ನಿಂದ ಮುಬಾರಕ್ ಪಲಾಯನ ಮಾಡುವ ಮೊದಲು ಮಿಲಿಟರಿಗೆ ಅಧಿಕಾರ ವಹಿಸಿಕೊಟ್ಟು ಹೋಗಿರುವುದರಿಂದ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಸ್ಥಾಪನೆ ಅಷ್ಟು ಸುಲಭವಾಗಿ ಅಗುತ್ತದೆಂದು ನಿರೀಕ್ಷಿಸುವುದೂ ಕಷ್ಟ. ಮುಬಾರಕ್ ನಡೆಸಿದ್ದು ದಮನಕಾರಿ ಆಡಳಿತ. ಭಿನ್ನಮತವನ್ನು ಮಿಲಿಟರಿ ಬಲದ ಮೂಲಕ ಹತ್ತಿಕ್ಕಿದ್ದರು. ಮಿಲಿಟರಿ ಅಧಿಕಾರಿಗಳು ಮುಬಾರಕ್‌ಗೆ ಬೆನ್ನೆಲುಬಾಗಿ ನಿಂತಿದ್ದರೆನ್ನುವ ಇತಿಹಾಸವನ್ನು ಮರೆಯುವುದು ಕಷ್ಟ. ಅಧಿಕಾರ ಮತ್ತು ವಿಶೇಷ ಸವಲತ್ತುಗಳನ್ನು ಅನುಭವಿಸಿದ ಮಿಲಿಟರಿ ಅಧಿಕಾರಿಗಳು ಅವುಗಳನ್ನು ಕಳೆದುಕೊಳ್ಳಲು ಸಿದ್ಧರಾಗುವರೇ ಎಂಬುದು ಸದ್ಯಕ್ಕೆ ಉತ್ತರ ಸಿಗದ ಪ್ರಶ್ನೆ. ಇದೇನೇ ಇದ್ದರೂ ದೇಶದ ಯುವಕ, ಯುವತಿಯರಲ್ಲಿ ಕಂಡು ಬಂದಿರುವ ಪ್ರಜಾತಂತ್ರದ ಕನಸನ್ನು ಅಷ್ಟು ಸುಲಭವಾಗಿ ನುಚ್ಚುನೂರು ಮಾಡಲು ಸಾಧ್ಯವಿಲ್ಲ.

ದೇಶದ ಶೇ 40 ರಷ್ಟು ಜನರು ಕಡು ಬಡತನದಲ್ಲಿ ಜೀವಿಸುತ್ತಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ನಿರುದ್ಯೋಗದ ಭೂತ ಯುವಕ, ಯುವತಿರನ್ನು ಕಂಗಾಲಾಗಿಸಿದೆ. ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿ ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿತ್ತು. ತಮ್ಮ ಸ್ಥಿತಿಯನ್ನು ಪರಸ್ಪರ ಹಂಚಿಕೊಳ್ಳಲೂ ಆಗದಂಥ ನಿರ್ಬಂಧಗಳನ್ನು ಜನರ ಮೇಲೆ ಹೇರಲಾಗಿದೆ. ಇಂಥ ಸ್ಥಿತಿಯಲ್ಲಿ ಯುವಕ ಯುವತಿಯರ ನೆರವಿಗೆ ಬಂದದ್ದು ಸಾಮಾಜಿಕ ಸಂಪರ್ಕ ಜಾಲಗಳು. ಅವುಗಳನ್ನು ಬಳಸಿಕೊಂಡು ಯುವಕ ಯುವತಿಯರು ಜನವರಿ 25 ರಂದು ಕೈರೋದ ತಹ್ರೀರ್ ಚೌಕದಲ್ಲಿ ಸಹಸ್ರ ಸಂಖ್ಯೆಯಲ್ಲಿ ಬಂದು ಸೇರಿ ರಕ್ತರಹಿತ ಕ್ರಾಂತಿಗೆ ನಾಂದಿ ಹಾಡಿದ್ದು ಇತಿಹಾಸ ಹಿಂದೆಂದೂ ಕಾಣದಂಥ ಘಟನೆ.

ಈಜಿಪ್ಟ್‌ನ ಭವಿಷ್ಯದ ಬಗ್ಗೆ ಅಮೆರಿಕ ಸೇರಿದಂತೆ ಹಲವು ದೇಶಗಳು ವ್ಯಕ್ತಮಾಡಿರುವ ಆತಂಕ ಅನಗತ್ಯವಾದುದು. ಇರಾನ್‌ಗೆ ಬಂದ ಗತಿಯೇ ಈಜಿಪ್ಟ್‌ಗೆ ಒದಗಬಹುದೆಂಬ ಭೀತಿ ಅನವಶ್ಯಕವಾದುದು, ಮುಸ್ಲಿಂ ಮೂಲಭೂತವಾದಿಗಳು ಅಧಿಕಾರ ಕಬಳಿಸಬಹುದೆಂಬುದೇ ಈಗಿನ ಆತಂಕ. ಅಂಥ ಬೆಳವಣಿಗೆಯಾದ ಪಕ್ಷದಲ್ಲಿ ಇಡೀ ಅರಬ್ ವಲಯ ಆತಂಕದ ಸ್ಥಿತಿಗೆ ಸಿಕ್ಕುವುದೆಂಬ ಲೆಕ್ಕಾಚಾರ ಅವಸರದ್ದು ಎನಿಸುತ್ತದೆ. ಇಸ್ರೇಲ್ ಈ ಸಂದರ್ಭದಲ್ಲಿ ಅನವಶ್ಯಕ ಗಾಬರಿಗೆ ಒಳಗಾಗುವ ಅಗತ್ಯವಿಲ್ಲ. ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ಜವಾಬ್ದಾರಿಯನ್ನು ಈಜಿಪ್ಟ್ ಜನರಿಗೆ ಬಿಟ್ಟುಕೊಡುವುದೇ ಒಳಿತು. ಈಜಿಪ್ಟ್ ಮತ್ತೊಂದು ಇರಾಕ್ ಅಥವಾ ಆಫ್ಘಾನಿಸ್ತಾನ ಆಗದಂತೆ ನೋಡಿಕೊಳ್ಳುವುದು ವಿಶ್ವ ಸಮುದಾಯದ ಜವಾಬ್ದಾರಿ. ವಿಶ್ವ ಸಮುದಾಯ ಮಿಲಿಟರಿ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಪ್ರಜಾತಂತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.