ADVERTISEMENT

ಉತ್ಸವದ ಹೆಸರಿನಲ್ಲಿ ಪರಿಸರನಾಶ ಇದೇ ಕೊನೆಯದಾಗಲಿ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2016, 9:21 IST
Last Updated 19 ಆಗಸ್ಟ್ 2016, 9:21 IST
ಉತ್ಸವದ ಹೆಸರಿನಲ್ಲಿ ಪರಿಸರನಾಶ ಇದೇ ಕೊನೆಯದಾಗಲಿ
ಉತ್ಸವದ ಹೆಸರಿನಲ್ಲಿ ಪರಿಸರನಾಶ ಇದೇ ಕೊನೆಯದಾಗಲಿ   

ದೆಹಲಿಯ ಯಮುನಾ ನದಿ ತೀರದಲ್ಲಿ ಕಳೆದ ಮಾರ್ಚ್‌ನಲ್ಲಿ ಬೆಂಗಳೂರು ಮೂಲದ ‘ಆರ್ಟ್‌ ಆಫ್‌ ಲಿವಿಂಗ್‌’ ಸಂಸ್ಥೆ ಏರ್ಪಡಿಸಿದ್ದ ‘ವಿಶ್ವ ಸಂಸ್ಕೃತಿ ಉತ್ಸವ’ದಿಂದಾಗಿ ನದಿ ಪರಿಸರಕ್ಕೆ ತೀವ್ರ ಹಾನಿ ಉಂಟಾಗಿದೆ ಎನ್ನುವುದು ಈಗ ಖಚಿತವಾಗಿದೆ.

ಉತ್ಸವಕ್ಕೆ ಮಾಡಿದ ಸಿದ್ಧತೆಗಳು ನದಿ ದಂಡೆಯ ಸ್ವರೂಪವನ್ನೇ ನಾಶಪಡಿಸಿವೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ತಜ್ಞರ ಸಮಿತಿ ನೀಡಿದ ವರದಿ ಸ್ಪಷ್ಟಪಡಿಸಿದೆ. ನದಿಯಂಚಿನ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆದುನಿಂತಿದ್ದ ಮರ, ಗಿಡ, ಹಸಿರು ಪೊದೆ, ನೀರಿನಲ್ಲಿ ಬೆಳೆದ ಸಸ್ಯಗಳೆಲ್ಲ ನಾಶವಾಗಿವೆ.

‘ಡಿಎನ್‌ಡಿ ಮೇಲ್ಸೇತುವೆಯಿಂದ ಕಾರ್ಯಕ್ರಮದ ವೇದಿಕೆಗೆ ಸಂಪರ್ಕ ಕಲ್ಪಿಸುವ ಇಳಿಜಾರು ನಿರ್ಮಿಸಲು ಘನತ್ಯಾಜ್ಯವನ್ನು ತಂದು ಸುರಿಯಲಾಗಿದೆ. ಬಾರಾಪುಲ್ಲಾ ಕಾಲುವೆಯಿಂದ ಸಮಾರಂಭದ ಸ್ಥಳಕ್ಕೆ ಸೇತುವೆ ನಿರ್ಮಿಸಲೂ ಅಪಾರ ಹಸಿರು ನಾಶಗೊಳಿಸಲಾಗಿದೆ’ ಎಂದು ತಜ್ಞರ ಸಮಿತಿ ವರದಿಯಲ್ಲಿ ತಿಳಿಸಿದೆ.

ನಮ್ಮ ಪರಿಸರವನ್ನು ಎಷ್ಟೊಂದು ನಿರ್ಲಕ್ಷ್ಯದಿಂದ ನಾವೇ ಹಾಳುಗೆಡಹುತ್ತಿದ್ದೇವೆ ಎನ್ನುವುದಕ್ಕೆ ಈ ಉತ್ಸವದ ಆಯೋಜನೆ ತಾಜಾ ನಿದರ್ಶನ. ಅದರಲ್ಲೂ ಸಂಸ್ಕೃತಿಯ ರಕ್ಷಣೆ ಮತ್ತು ಉದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳುವ ಸಂಸ್ಥೆಗಳೇ ಹೀಗೆ ಪರಿಸರ ನಾಶಕ್ಕೆ ಕಾರಣವಾಗುವುದು ಅಕ್ಷಮ್ಯವೇ ಸರಿ.

ಪರಿಸರ ಸೂಕ್ಷ್ಮ ಯಮುನಾ ನದಿ ತೀರದಲ್ಲಿ ಈ ಸಂಸ್ಕೃತಿ ಉತ್ಸವ ಆಯೋಜಿಸುವುದನ್ನು ಹಲವು ಸ್ವಯಂಸೇವಾ ಸಂಸ್ಥೆಗಳು ಮೊದಲೇ ಸ್ಪಷ್ಟವಾಗಿ ವಿರೋಧಿಸಿ, ಹಸಿರು ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದವು.

ನದಿ ತೀರದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ಕಾರ್ಯಕ್ರಮ ನಡೆಸುವುದರಿಂದ ಅಲ್ಲಿರುವ ಸೂಕ್ಷ್ಮಜೀವಿಗಳು ಶಾಶ್ವತವಾಗಿ ನೆಲೆ ಕಳೆದುಕೊಳ್ಳಲಿವೆ ಎಂದು ಎಚ್ಚರಿಸಿದ್ದವು. ಈಗ ತಜ್ಞರ ಸಮಿತಿ ನೀಡಿದ ವರದಿಯೂ ಅದನ್ನು ಸಾಬೀತುಪಡಿಸಿದೆ.

‘ನದಿಯಂಚಿನಲ್ಲಿ ನೆಲೆ ಕಂಡುಕೊಂಡಿದ್ದ ಸೂಕ್ಷ್ಮಜೀವಿಗಳು ಕಣ್ಮರೆಯಾಗಿವೆ. ಪರಿಸರಕ್ಕೆ ಒಟ್ಟಾಗಿ ಆಗಿರುವ ನಷ್ಟದ ಪ್ರಮಾಣವನ್ನು ಅಂದಾಜಿಸುವುದು ಸುಲಭವಲ್ಲ’ ಎಂಬ ತಜ್ಞರ ವರದಿಯನ್ನು ಹಸಿರು ನ್ಯಾಯಮಂಡಳಿ ಗಂಭೀರವಾಗಿ ಪರಿಗಣಿಸಬೇಕಿದೆ.

ಪರಿಸರ ರಕ್ಷಣೆಯ ಕಾನೂನುಗಳನ್ನು ನಾಗರಿಕರು ಉಲ್ಲಂಘಿಸದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸರ್ಕಾರದ್ದು. ಉತ್ಸವ ನಡೆಯುವುದಕ್ಕೆ ಮುನ್ನವೇ ಅಲ್ಲಿ ನಡೆಯುತ್ತಿದ್ದ ಪರಿಸರ ನಾಶದ ಚಟುವಟಿಕೆಗಳನ್ನು ರಾಷ್ಟ್ರೀಯ ಮಾಧ್ಯಮಗಳು ಎತ್ತಿ ತೋರಿದ್ದವು.

ಆ ಹಿನ್ನೆಲೆಯಲ್ಲೇ ಸಮಾರಂಭದಲ್ಲಿ ಭಾಗವಹಿಸಬೇಕಿದ್ದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿಯವರು ಹಿಂದೆ ಸರಿದಿದ್ದರು. ಆದರೆ ಈ ಉತ್ಸವದಲ್ಲಿ ಸ್ವತಃ ಪ್ರಧಾನಮಂತ್ರಿಯವರೇ ಭಾಗವಹಿಸಿ, ಭಾಷಣ ಮಾಡಿರುವುದು ಏನನ್ನು ಸೂಚಿಸುತ್ತದೆ?

ಪರಿಸರ ಸಂರಕ್ಷಣೆಯ ಬಗ್ಗೆ ಸರ್ಕಾರಕ್ಕೇ ಕಿಂಚಿತ್ತೂ ಕಾಳಜಿ ಇಲ್ಲವೆಂದೇ ಅಥವಾ ಪ್ರತಿಷ್ಠಿತರು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ಸರ್ಕಾರವೂ ಕಣ್ಣು ಮುಚ್ಚಿ ಕೂರುತ್ತದೆ ಎಂದೇ?

ದೇಶ ವಿದೇಶಗಳಿಂದ ಸಾವಿರಾರು ಕಲಾವಿದರು ಭಾಗವಹಿಸುತ್ತಾರೆ ಎಂಬ ಕಾರಣಕ್ಕೆ ಯಮುನಾ ನದಿ ತೀರವನ್ನು ಕಾರ್ಯಕ್ರಮ ಆಯೋಜಕರಿಗೆ ಬಿಟ್ಟುಕೊಡುವ ಮೂಲಕ ದೆಹಲಿ ಅಭಿವೃದ್ಧಿ ಪ್ರಾಧಿಕಾರ, ದೆಹಲಿ ಮತ್ತು ಕೇಂದ್ರ ಸರ್ಕಾರಗಳು ಕೈಗೊಂಡಿದ್ದ ತೀರ್ಮಾನ ಮೂರ್ಖತನದ್ದು.

ರಾಜಕೀಯ ಮುಖಂಡರು ಬೆಂಬಲಿಸುತ್ತಾರೆಂಬ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಇಂತಹ ವಿಷಯಗಳಲ್ಲಿ ಮೃದು ಧೋರಣೆ ತಳೆಯಬಾರದು. ನಿಯಮಗಳನ್ನು ಉಲ್ಲಂಘಿಸಿ ಪರಿಸರ ನಾಶ ಮಾಡಿದವರು ಎಷ್ಟೇ ಪ್ರಭಾವಿಗಳಾದರೂ ಲೆಕ್ಕಿಸದೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದೆ.

ಸರ್ಕಾರಕ್ಕೆ ಹಾಗೂ ಪ್ರತಿಷ್ಠಿತರಿಗೆ ಇದೊಂದು ಪಾಠವಾಗುವಂತೆ ನೋಡಿಕೊಳ್ಳಬೇಕು. ದಂಡ ವಿಧಿಸಿ  ಅಥವಾ ಒಂದಿಷ್ಟು ಷರತ್ತು ಹೇರಿ ಪರಿಸರ ಹಾಳುಗೆಡವಲು ಅವಕಾಶ ಕೊಡುವುದು ಎಳ್ಳಷ್ಟೂ ಸರಿಯಲ್ಲ. ಹಣದಿಂದ ಪರಿಸರವನ್ನು ಮತ್ತೆ ಮೂಲರೂಪದಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ.

ನಿಸರ್ಗಕ್ಕೆ ಅದರದೇ ಆದ ರೀತಿ ರಿವಾಜುಗಳಿವೆ. ಅದನ್ನು ಎಲ್ಲರೂ ಗೌರವಿಸಬೇಕು.  ತಜ್ಞರ ಸಮಿತಿಯ ವರದಿ ‘ಅವೈಜ್ಞಾನಿಕ, ಅದರಲ್ಲಿ ಕೆಲವೊಂದು ತಪ್ಪು ಮಾಹಿತಿಗಳಿವೆ’ ಎಂದು ‘ಆರ್ಟ್‌ ಆಫ್‌ ಲಿವಿಂಗ್‌’ ಸಂಸ್ಥೆಯ ವಕ್ತಾರರು ವಾದ ಹೂಡಿರುವುದು ಅರ್ಥಹೀನ.

ಸಂಸ್ಥೆಯು ನೆಲದ ಕಾನೂನಿಗೆ ಗೌರವ ನೀಡುವುದನ್ನು ಕಲಿಯಬೇಕು. ಪ್ರಕೃತಿಯನ್ನು ಬಿಟ್ಟು ಸಂಸ್ಕೃತಿ ಇಲ್ಲ. ಹಾಡು, ಗಾಯನ, ನೃತ್ಯಗಳೆಲ್ಲವೂ ಪ್ರಕೃತಿಯ ಪೋಷಣೆಗೆ ಒತ್ತು ಕೊಡಬೇಕೇ ಹೊರತು, ಪ್ರಕೃತಿಯನ್ನು ಬಲಿ ತೆಗೆದುಕೊಂಡು ವಿಜೃಂಭಿಸುವುದಲ್ಲ. ಜೀವ ವೈವಿಧ್ಯದ ಮಹತ್ವವನ್ನು ಎಲ್ಲರೂ ಅರಿಯಬೇಕು. ಪರಿಸರ ಉಳಿದರೆ ಮಾತ್ರ ಮನುಷ್ಯ ಮತ್ತು ಪ್ರಾಣಿಸಂಕುಲ ಉಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT