ADVERTISEMENT

ಉದ್ಯಮಕ್ಕಷ್ಟೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST

ಹತ್ತಿಯ ರಫ್ತನ್ನು ಹಠಾತ್ತಾಗಿ ನಿಷೇಧಿಸಿದ ಕೇಂದ್ರ ಸರ್ಕಾರದ ನಿರ್ಧಾರ ಜವಳಿ ಉದ್ಯಮಿಗಳ ಹಿತರಕ್ಷಣೆಯನ್ನಷ್ಟೆ ಪ್ರಧಾನವಾಗಿ ಉದ್ದೇಶಿಸಿದೆ.
 
ತಕ್ಷಣದಿಂದಲೇ ಜಾರಿಗೆ ಬರುವಂತೆ ಕೈಗೊಳ್ಳಲಾದ ಈ ನಿರ್ಧಾರದಿಂದ ಹತ್ತಿ ಬೆಳೆಗಾರರಿಗೆ ಪ್ರಯೋಜನವಾಗಲಾರದು ಎಂಬ ಶಂಕೆಗೆ ಆಸ್ಪದ ನೀಡಿದೆ. ವಿದೇಶಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡುವ ಉದ್ದೇಶಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ  ರಫ್ತು ಮಾಡುವ ರಫ್ತುದಾರರ ದುರುದ್ದೇಶ ಮತ್ತು ಅದರಿಂದ ದೇಶಿ ಮಾರುಕಟ್ಟೆಯಲ್ಲಿ ಹತ್ತಿಯ ಕೃತಕ ಅಭಾವ ಸೃಷ್ಟಿಯಾಗುವುದನ್ನು ತಡೆಯಲು ಸರ್ಕಾರ ಸಕಾಲಕ್ಕೆ ಈ ನಿರ್ಧಾರ ಕೈಗೊಂಡಿರುವುದು ಸರಿಯಾಗಿಯೇ ಇದೆ.

ಕಳೆದ 10 ದಿನಗಳಲ್ಲಿ ಹತ್ತಿ ರಫ್ತು ಗುತ್ತಿಗೆ ಸಗಟು ನೋಂದಣಿ ಮಾಡಲು ಕಂಡುಬಂದ ರಫ್ತು ಸಂಸ್ಥೆಗಳ ಅವಸರ  ಮತ್ತು ನೋಂದಣಿಯಲ್ಲಿ ರಫ್ತು ಮತ್ತು ಆಮದು ಸಂಸ್ಥೆಗಳ ಹೆಸರು ಒಂದೇ ಇರುವುದು ಸರ್ಕಾರದ ಅನುಮಾನ ಪುಷ್ಟೀಕರಿಸುತ್ತದೆ. ಕೆಲ ಬಹುರಾಷ್ಟ್ರೀಯ ಸಂಸ್ಥೆಗಳು ಇಂತಹ ಕೃತ್ಯದಲ್ಲಿ ತೊಡಗಿರುವುದರಿಂದ ದೇಶಿ `ಹತ್ತಿ ಭದ್ರತೆ~ಗೂ ಬೆದರಿಕೆ ಎದುರಾಗಿದೆ.
 
ಭವಿಷ್ಯದಲ್ಲಿ ದೇಶಿ ಜವಳಿ ಉದ್ಯಮದ ಬೇಡಿಕೆ ಪೂರೈಸಲು ದುಬಾರಿ ದರದಲ್ಲಿ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಉದ್ಭವಿಸಬಾರದು ಎನ್ನುವ ಕಾಳಜಿಯೂ ಈ ನಿರ್ಧಾರದ ಹಿಂದೆ ಇದೆ. ತಲಾ 170 ಕೆ.ಜಿಗಳ 91 ಲಕ್ಷ ಬೇಲ್‌ಗಳಷ್ಟು ಹತ್ತಿ ಈಗಾಗಲೇ ರಫ್ತಾಗಿದೆ. ರಫ್ತು ಪ್ರಮಾಣ ಇದೇ ವೇಗದಲ್ಲಿ ನಡೆದರೆ ಇದೇ ಮಾರ್ಚ್ ಅಂತ್ಯದ ಹೊತ್ತಿಗೆ 100 ಲಕ್ಷ ಬೇಲ್‌ಗಳಷ್ಟು ಹತ್ತಿ ರಫ್ತಾಗುತ್ತಿತ್ತು. ಇದರಿಂದ ದೇಶೀಯವಾಗಿ ಹತ್ತಿ ಲಭ್ಯತೆ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುತ್ತಿತ್ತು. 

ಉತ್ಪಾದನೆ ಮತ್ತು ರಫ್ತಿನಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿ ಇರುವ ದೇಶದಲ್ಲಿ, ಪ್ರಸಕ್ತ ವರ್ಷ ಹತ್ತಿ ಉತ್ಪಾದನೆಯೂ ಹೆಚ್ಚಳಗೊಂಡಿದೆ. ಕೈಗಾರಿಕಾ ಅಶಾಂತಿ ಕಾರಣವೂ ಸೇರಿದಂತೆ ಅನೇಕ ಕಾರಣಗಳಿಗೆ ಸ್ಥಳೀಯ ಜವಳಿ ಗಿರಣಿಗಳ ಹತ್ತಿ ಖರೀದಿ ಕಡಿಮೆಯಾಗಿದೆ. ಇದರಿಂದ ಸ್ಥಳೀಯವಾಗಿ ಬೇಡಿಕೆ  ಕಡಿಮೆಯಾಗಿ ಬೆಲೆ ಕುಸಿಯುವ ಭೀತಿ ಇದೆ. ಈ ಹಂತದಲ್ಲಿ ರಫ್ತು ನಿಷೇಧ ಆದೇಶ ಹೊರ ಬಿದ್ದಿರುವುದರಿಂದ ರೈತರ ಆತಂಕ ಹೆಚ್ಚುವ ಸೂಚನೆ ಇದೆ.
 
ರಫ್ತುದಾರರೂ, ವಿದೇಶಗಳಿಗೆ ರವಾನಿಸಲು ಬಂದರುಗಳಿಗೆ ಸಾಗಿಸಿರುವ ಹತ್ತಿಯನ್ನೂ ಈಗ ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡಬೇಕಾಗಿ ಬಂದಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.  ಫಸಲಿನ ಶೇ 40ರಷ್ಟು ಅಂದಾಜು 12.5 ದಶಲಕ್ಷ ಬೇಲ್‌ಗಳಷ್ಟು  ಹತ್ತಿಯೂ ರೈತರ ಬಳಿಯೇ ಉಳಿಯಲಿದೆ.

ರಫ್ತುದಾರರ ದುರಾಸೆ ಬಯಲಿಗೆಳೆದು ಕೃತಕ ಅಭಾವ ಸೃಷ್ಟಿಸುವವರನ್ನು ಸೂಕ್ತವಾಗಿ ಶಿಕ್ಷಿಸಬೇಕೇ ಹೊರತು ರಫ್ತು ನಿಷೇಧ ಸೂಕ್ತ ಪರಿಹಾರವಾಗಲಾರದು. ಆದ್ದರಿಂದ ಸರ್ಕಾರ ಹತ್ತಿ ಗಿರಣಿಗಳ ಆಧುನಿಕತೆಗೆ ಕ್ರಮ ಕೈಗೊಂಡು, ಜವಳಿ ಉದ್ಯಮದ ಪುನಶ್ಚೇತನಕ್ಕೆ ಮುಂದಾಗಬೇಕು.

ಸ್ಥಳೀಯ ಹತ್ತಿ ದೇಶಿ ಗಿರಣಿಗಳಲ್ಲಿಯೇ ಸಂಸ್ಕರಣಗೊಂಡು ಸಿದ್ಧ ಉತ್ಪನ್ನವಾಗಿ ವಿದೇಶಗಳಿಗೆ ರಫ್ತಾಗುವಂಥ ಪರಿಸ್ಥಿತಿಯನ್ನು ಸೃಷ್ಟಿಸಿದರೆ ಬೆಳೆಗಾರರಿಗೆ ಯೋಗ್ಯ ಧಾರಣೆ ಸಿಗುತ್ತದೆ ಎಂಬುದನ್ನು ಮನಗಾಣಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.