ADVERTISEMENT

ಒತ್ತಡಕ್ಕೆ ಬಗ್ಗಬಾರದು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ರೈಲ್ವೆ ಖಾತೆಯ ಸಚಿವರ ಬದಲಾವಣೆ ಆಡಳಿತ ನಡೆಸುತ್ತಿರುವ ಮೈತ್ರಿಕೂಟಕ್ಕಷ್ಟೇ ಸೀಮಿತವಾದ ವಿದ್ಯಮಾನವಲ್ಲ. ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರ ರಾಜೀನಾಮೆ ನೀಡುವಂತಹ ಪರಿಸ್ಥಿತಿ ಉದ್ಭವವಾಗಲು ಕಾರಣ ಬಜೆಟ್‌ನಲ್ಲಿ ಅವರು ಮಾಡಿರುವ ಪ್ರಯಾಣದರ ಏರಿಕೆಯ ಪ್ರಸ್ತಾಪ.
 
ಇದನ್ನು ವಿರೋಧಿಸಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಪ್ರಧಾನಿಯ ಮೇಲೆ ಒತ್ತಡ ಹೇರಿ ರೈಲ್ವೆ ಸಚಿವರನ್ನೇ ಬದಲಾಯಿಸಿದ್ದಾರೆ. ಅವರ ಸೇಡು ಸಚಿವರ ಬದಲಾವಣೆಯಿಂದಷ್ಟೇ ಶಮನಗೊಳ್ಳುವಂತೆ ಕಾಣುತ್ತಿಲ್ಲ. ಪ್ರಯಾಣ ದರ ಏರಿಕೆಯನ್ನೂ ಹಿಂದಕ್ಕೆ ಪಡೆಯುವಂತೆ ಅವರು ಪ್ರಧಾನಿಯವರ ಮೇಲೆ ಒತ್ತಡ ಹೇರುತ್ತಿದ್ದಾರೆ.

 ಇದು ಜನವಿರೋಧಿ ರಾಜಕಾರಣ. ಬಜೆಟ್‌ಗೆ ಅದರದ್ದೇ ಆಗಿರುವ ಪಾವಿತ್ರ್ಯ ಇದೆ, ಅದನ್ನು ಮಂಡಿಸುವ ಸಚಿವರಿಗೆ ದೇಶದ ಹಿತಾಸಕ್ತಿ ಮುಖ್ಯವಾಗಬೇಕೇ ಹೊರತು, ಯಾವುದೋ ಒಂದು ರಾಜಕೀಯ ಪಕ್ಷದ ನೀತಿ-ನಿರ್ಧಾರಗಳಲ್ಲ.
 
ಹಿಂದಿನ ರೈಲ್ವೆ ಸಚಿವರ ಜನಪ್ರಿಯತೆಯ ಖಯಾಲಿಯಿಂದಾಗಿ ಈ ಇಲಾಖೆ ಸಂಪೂರ್ಣವಾಗಿ ಸೊರಗಿ ಹೋಗಿದೆ. ಪ್ರತಿವರ್ಷ ನೂರಾರು ಪ್ರಯಾಣಿಕರ ಸಾವಿಗೆ ಕಾರಣವಾಗಿರುವ ಬ್ರಿಟಿಷರ ಕಾಲದ ಸುರಕ್ಷತಾ ವ್ಯವಸ್ಥೆ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
 
ಜನರ ಬೇಡಿಕೆಗೆ ಅನುಗುಣವಾಗಿ ಹೊಸ ರೈಲು ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ದೂರವೇ ಉಳಿಯಿತು, ಈಗ ಇರುವ ವ್ಯವಸ್ಥೆಯ ನಿರ್ವಹಣೆಯನ್ನೂ ಮಾಡಲಾಗದ ದಿವಾಳಿ ಸ್ಥಿತಿಗೆ ರೈಲ್ವೆ ಇಲಾಖೆ ತಲುಪಿದೆ. ಹೆಚ್ಚುವರಿ ಸಂಪನ್ಮೂಲವನ್ನು ಕ್ರೋಡೀಕರಿಸದೆ ರೈಲ್ವೆ ಇಲಾಖೆಯ ಸುಧಾರಣೆ ಅಸಾಧ್ಯ.

ಈ ವಾಸ್ತವವನ್ನು ಅರ್ಥಮಾಡಿಕೊಂಡ ಕಾರಣದಿಂದಾಗಿಯೇ ದಿನೇಶ್ ತ್ರಿವೇದಿ ಪ್ರಯಾಣ ದರ ಏರಿಕೆ ಮೂಲಕ 4000 ಕೋಟಿ ರೂಪಾಯಿಗಳ ಹೆಚ್ಚುವರಿ ಆದಾಯವನ್ನು ಸಂಗ್ರಹಿಸುವ ಪ್ರಸ್ತಾಪ ಮಾಡಿದ್ದು.


ಆದರೆ ಜನಪ್ರಿಯತೆಯ ವ್ಯಸನಕ್ಕೆ ಬಿದ್ದಿರುವ ಮಮತಾ ಬ್ಯಾನರ್ಜಿ ಇದನ್ನು ಒಪ್ಪುವ ಸಂಭವ ಕಡಿಮೆ. ಸಚಿವ ತ್ರಿವೇದಿಯವರು ಬಜೆಟ್ ಭಾಷಣದಲ್ಲಿ ಎರಡು ಸಮಿತಿಗಳ ವರದಿಗಳನ್ನು ಉಲ್ಲೇಖಿಸಿದ್ದಾರೆ.
 
ಅವುಗಳಲ್ಲೊಂದಾದ ಡಾ. ಅನಿಲ್ ಕಾಕೋಡ್ಕರ್ ಅಧ್ಯಕ್ಷತೆಯ ಸಮಿತಿ, `ರೈಲ್ವೆ ಇಲಾಖೆಯ ಆರ್ಥಿಕ ಸ್ಥಿತಿಯ ಸುಧಾರಣೆಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಬೇಕಾಗಿದೆ~ ಎಂದು ವರದಿ ನೀಡಿದೆ.
 
ರೈಲ್ವೆ ಸುರಕ್ಷತೆಯ ಬಗ್ಗೆ ಅಧ್ಯಯನ ನಡೆಸಿದ್ದ ಸ್ಯಾಮ್ ಪಿತ್ರೊಡಾ ಸಮಿತಿ `ಸುರಕ್ಷತಾ ವ್ಯವಸ್ಥೆ ಸುಧಾರಣೆಗಾಗಿ ಮುಂದಿನ ಐದುವರ್ಷಗಳ ಅವಧಿಯಲ್ಲಿ ಕನಿಷ್ಠ 5.6 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬೇಕಾಗಿದೆ~ ಎಂದು ಹೇಳಿದೆ.

ರೈಲ್ವೆ ಇಲಾಖೆಯ ಈಗಿನ ಆದಾಯದಿಂದ ಈ ಸಮಿತಿಗಳ ವರದಿಗಳನ್ನು ಅನುಷ್ಠಾನಕ್ಕೆ ತರುವುದು ಅಸಾಧ್ಯ. ಪ್ರಯಾಣ ದರದ ಏರಿಕೆಯನ್ನು ಜನತೆ ಕೂಡಾ ಒಪ್ಪಿಕೊಂಡಿದೆ. ಉತ್ತಮ ಸೇವೆಯನ್ನು ಪಡೆಯಲು ರೈಲ್ವೆ ಇಲಾಖೆಯ ಸುಧಾರಣೆಯ ಅಗತ್ಯ ಇದೆ ಎಂದು ಅವರಿಗೂ ಅರಿವಾಗಿದೆ. ಆದ್ದರಿಂದಲೇ ಎಲ್ಲಿಯೂ ವಿರೋಧದ ಸೊಲ್ಲು ಕೇಳಿ ಬಂದಿಲ್ಲ.

ಪ್ರಧಾನಿಯವರು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಈ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಮಿತ್ರಪಕ್ಷದ ಒತ್ತಡ ತಂತ್ರಕ್ಕೆ ಬಲಿಯಾಗಿ ರೈಲ್ವೆ ಇಲಾಖೆಯ ಸುಧಾರಣೆಗೆ ಒದಗಿಬಂದಿರುವ ಅಪೂರ್ವ ಅವಕಾಶವನ್ನು ಕಳೆದುಕೊಳ್ಳಬಾರದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.