ADVERTISEMENT

ಕಣ್ತೆರೆಯಲು ಇನ್ನೇನಾಗಬೇಕು?

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2013, 19:30 IST
Last Updated 14 ನವೆಂಬರ್ 2013, 19:30 IST

ಕೇವಲ ಎರಡು ವಾರದ ಹಿಂದೆ ಆಂಧ್ರಪ್ರದೇಶದ ಪಾಲೆಂ ಬಳಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೋಗುತ್ತಿದ್ದ ಜಬ್ಬಾರ್‌ ಟ್ರಾವೆಲ್‌್ಸನ ವೋಲ್ವೊ ಬಸ್‌ಗೆ ಬೆಂಕಿ ಹೊತ್ತಿಕೊಂಡು 44 ಜನ ಸುಟ್ಟು ಕರಕಲಾಗಿದ್ದರು. ಅದರ ಕರಾಳ ನೆನಪು ಮಾಸುವ ಮುನ್ನವೇ ಹಾವೇರಿ ಸಮೀಪ ನ್ಯಾಷನಲ್‌ ಟ್ರಾವೆಲ್‌್ಸಗೆ ಸೇರಿದ ಬೆಂಗಳೂರು– ಮುಂಬೈ ವೋಲ್ವೊ ಬಸ್ಸಿಗೆ ಬೆಂಕಿ ಹತ್ತಿಕೊಂಡು ಏಳು ಅಮಾಯಕ ಜೀವಿಗಳು ಬಲಿಯಾಗಿವೆ. ಪೊಲೀಸರು ಹೇಳುವಂತೆ, ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ದುರಂತಕ್ಕೆ ಕಾರಣ. ವೇಗದಲ್ಲಿದ್ದ ಬಸ್‌ ಸೇತುವೆಯ ರಕ್ಷಣಾ ಕಂಬಿಗೆ ಉಜ್ಜಿದಾಗ ಇಂಧನ ಟ್ಯಾಂಕ್‌ ಒಡೆದು ಬೆಂಕಿ ಹೊತ್ತಿಕೊಂಡಿತು ಎಂಬುದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ.

ಆಂಧ್ರ ಬಸ್‌ ಅಪಘಾತದಲ್ಲಿಯೂ ಇದೇ ರೀತಿ ಡೀಸೆಲ್‌ ಟ್ಯಾಂಕರ್‌ನಿಂದಲೇ ಬೆಂಕಿ ಇಡೀ ಬಸ್ಸನ್ನು ಆವರಿಸಿತು ಎನ್ನುವ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ‘ಡೀಸೆಲ್‌ ಟ್ಯಾಂಕ್‌ ಒಡೆಯುವ ಮತ್ತು ಅದರಿಂದ ಬೆಂಕಿ ಹರಡುವ ಸಾಧ್ಯತೆ ಕಡಿಮೆ, ಅದಕ್ಕೆ ಅನುಗುಣವಾಗಿಯೇ ಬಸ್‌ನ ವಿನ್ಯಾಸ ಮಾಡಲಾಗಿದೆ’ ಎಂದು ಆಗ ವೋಲ್ವೊ ಸಂಸ್ಥೆ ತಜ್ಞರು ಹೇಳಿದ್ದರು.

ಹಾವೇರಿ ಬಳಿ ದುರಂತಕ್ಕೀಡಾದ ಬಸ್‌ ಹೊಸದು. ‘ಕೇವಲ 40 ದಿನಗಳ ಹಿಂದೆ ರಸ್ತೆಗಿಳಿದಿತ್ತು.  ಅದಕ್ಕೆ ವೇಗ ನಿಯಂತ್ರಕವನ್ನೂ ಅಳವಡಿಸಲಾಗಿತ್ತು’ ಎಂಬುದು ಬಸ್‌ ಮಾಲೀಕರ ವಾದ. ಹಾಗಿದ್ದರೆ ದೋಷ ಎಲ್ಲಿದೆ ಎಂಬುದನ್ನು ತಜ್ಞರು ಗುರುತಿಸಬೇಕಿದೆ.

ಕೆಲ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸಾಕಷ್ಟು ಮಹತ್ವ ಕೊಡುತ್ತಿಲ್ಲ ಎಂಬ ಆರೋಪ ಇದೆ. ಇದನ್ನು ಪೂರ್ಣ ತಳ್ಳಿಹಾಕುವಂತೆಯೂ ಇಲ್ಲ. ಏಕೆಂದರೆ ಬಸ್‌ಗಳು ಇರುವುದು ಜನರ ಪ್ರಯಾಣಕ್ಕಾಗಿ. ಅವುಗಳ ಅಡಿ ಭಾಗದ ಆವರಣದಲ್ಲಿ (ಲಗೇಜ್‌ ಸ್ಥಳ) ಪ್ರಯಾಣಿಕರ ಸೂಟ್‌ಕೇಸ್‌­ಗಳನ್ನು ಮಾತ್ರ ಸಾಗಿಸಬೇಕು. ಆದರೆ ಖಾಸಗಿಯವರು ಹಣದಾಸೆಯಿಂದ ಆ ಜಾಗದಲ್ಲಿ ನಾನಾ ನಮೂನೆಯ ಸರಕುಗಳು, ಪಾರ್ಸೆಲ್‌ಗಳನ್ನು ತುಂಬುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು.

ಇವುಗಳಲ್ಲಿ ಬೇಗ ಬೆಂಕಿ ಹೊತ್ತಿಕೊಂಡು ಧಗಧಗ ಉರಿಯುವ ದಹನಶೀಲ ವಸ್ತುಗಳಿದ್ದಾಗಲಂತೂ ಅಪಾಯದ ಸಾಧ್ಯತೆ ಹೆಚ್ಚು. ಕಾನೂನಿನ ಪ್ರಕಾರ ಅಂಥ ವಸ್ತುಗಳ ಸಾಗಣೆ ಅಪರಾಧವೂ ಹೌದು. ಆದರೆ ಅವುಗಳ ಮೇಲೆ ನಿಗಾ ಇಡಬೇಕಾದ ಸಾರಿಗೆ ಅಧಿಕಾರಿಗಳು ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ ಎಂದೇ ಹೇಳಬೇಕಾಗುತ್ತದೆ.

ಇನ್ನು ಕೆಲ ಖಾಸಗಿ ಐಷಾರಾಮಿ ಬಸ್‌ಗಳು ಮೇಲ್ಭಾಗದಲ್ಲಿ ಸರಕುಗಳ ದೊಡ್ಡ ದೊಡ್ಡ ಮೂಟೆಗಳನ್ನು ಹೇರಿಕೊಂಡು ರಾಜಾರೋಷವಾಗಿ ಸಂಚರಿಸುತ್ತಿದ್ದರೂ, ಹಿಡಿದು ಕಾನೂನು ಕ್ರಮ ತೆಗೆದುಕೊಂಡ ಉದಾಹರಣೆಗಳೇ ಕಡಿಮೆ. ಬೆಳಿಗ್ಗೆ 10 ರಿಂದ ಸಂಜೆ 5ರವರೆಗಷ್ಟೇ  ಕೆಲಸದ ಅವಧಿ ಎಂದು ಅಧಿಕಾರಿಗಳು ಭಾವಿಸಿರು­ವುದರಿಂದಲೇ ಇಂಥ ಅಕ್ರಮಗಳು ನಿರ್ಭಯವಾಗಿ ನಡೆಯುತ್ತಿವೆ. ಸುರಕ್ಷತೆ ದೃಷ್ಟಿಯಿಂದ ರಾತ್ರಿ ಹೊತ್ತಿನಲ್ಲಿಯೂ  ಬಸ್‌ ತಪಾಸಣೆ ಮಾಡಬೇಕು.

ಆದರೆ ಅದು ನಡೆಯದೇ ಇರುವುದು  ದೊಡ್ಡ ಲೋಪ. ಯಾವುದಾದರೂ ದುರಂತ ನಡೆದಾಗ ಮಂತ್ರಿಗಳು, ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು ಉದ್ದುದ್ದ ಹೇಳಿಕೆ ಕೊಟ್ಟು, ‘ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಗುಡುಗಿದರೆ ಪ್ರಯೋಜನವಿಲ್ಲ. ಅದನ್ನು ಕಾರ್ಯರೂಪಕ್ಕೆ ತಂದು ತೋರಿಸಬೇಕು.  ಬಿಗಿ ಕ್ರಮ ಕೈಗೊಳ್ಳಲು ಇನ್ನೆಷ್ಟು ಅಮಾಯಕ ಜೀವಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಬೇಕು? ಸರ್ಕಾರ ಎಚ್ಚೆತ್ತುಕೊಳ್ಳಲು ಇನ್ನೂ ಏನಾಗಬೇಕು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.