ADVERTISEMENT

ಕದಡಿದ ರಾಜತಾಂತ್ರಿಕ ಸಂಬಂಧ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ನ್ಯೂಯಾರ್ಕ್‌ನಲ್ಲಿ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯಾಗಿರುವ ದೇವಯಾನಿ ಖೋಬ್ರಾಗಡೆ ಅವರನ್ನು,  ವೀಸಾ ನಿಯಮಗಳನ್ನು ಉಲ್ಲಂಘಿಸಿ ವಂಚಿಸಿದ ಆರೋಪದಡಿ ಅಮೆರಿಕದ ಪೊಲೀಸರು ಬಂಧಿಸಿದ ಕ್ರಮ ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧವನ್ನು ಕದಡಿದೆ.

ಅಮೆರಿಕದ ಈ ಕ್ರಮವನ್ನು ಭಾರತ ಸರ್ಕಾರ ತೀವ್ರವಾಗಿ  ಖಂಡಿಸಿರುವುದು ಸರಿಯಾಗಿಯೇ ಇದೆ. ಭಾರತದಲ್ಲಿರುವ ಅಮೆರಿಕದ ರಾಯಭಾರಿಯನ್ನೂ ಕರೆಸಿ ಅಮೆರಿಕದ ಈ ಕ್ರಮವನ್ನು ಖಂಡಿಸಿದೆ. ತಮ್ಮ ಮಗಳನ್ನು ಶಾಲೆಗೆ ಬಿಡಲು ಹೋಗಿದ್ದ ದೇವಯಾನಿ ಅವರನ್ನು ಪೊಲೀಸರು ಶಾಲೆಯ ಗೇಟಿನ ಬಳಿಯೇ ಬಂಧಿಸಿ, ಕೈಕೋಳ ತೊಡಿಸಿ ಕರೆದೊಯ್ದದ್ದು  ಅನುಚಿತ ಕ್ರಮ. ರಾಜತಾಂತ್ರಿಕ ಅಧಿಕಾರಿಗಳಿಗೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಳ್ಳುವಾಗ ಕನಿಷ್ಠ ಮಟ್ಟದ ಸೌಜನ್ಯವನ್ನು ಅನುಸರಿಸುವುದು ಸಹಜ. ಇಂತಹ ಸೌಜನ್ಯವನ್ನು ತೋರದ ಅಮೆರಿಕದ ಪೊಲೀಸರು, ಬಹಿರಂಗವಾಗಿ ಕೈಕೋಳ ತೊಡಿಸಿ ಕರೆದೊಯ್ದಿರುವುದು ಅವರ ಉದ್ಧಟತನವನ್ನಷ್ಟೇ ತೋರುತ್ತದೆ.

ವಂಚನೆಯ ಆರೋಪ ಇರುವ ಯಾರದೇ ವಿರುದ್ಧವಾದರೂ ಪೊಲೀಸ್‌ ಕ್ರಮ ಜರುಗಿಸುವ ಅಧಿಕಾರ ಆ ದೇಶಕ್ಕೆ ಇದ್ದೇ ಇದೆ. ಆದರೆ ಜವಾಬ್ದಾರಿಯುತ ಹುದ್ದೆಯಲ್ಲಿರುವ ದೇವಯಾನಿ ಅವರು ತಲೆಮರೆಸಿಕೊಳ್ಳುವ ಸಾಧ್ಯತೆಯಂತೂ ಇರಲಿಲ್ಲ. ಉಪ ಕಾನ್ಸಲ್‌ ಜನರಲ್‌ ಆಗಿರುವ ಹಿನ್ನೆಲೆಯಲ್ಲಿ ಕನಿಷ್ಠಪಕ್ಷ ಅವರಿಗೆ ಪೊಲೀಸ್‌ ಮುಖ್ಯ ಕಚೇರಿಯಲ್ಲಿ ಹಾಜರಾಗಲು ಸೂಚಿಸಿ, ಅಲ್ಲೇ ಬಂಧಿಸಬಹುದಿತ್ತು.

ಭಾರತದ ಉನ್ನತಮಟ್ಟದ ಅಧಿಕಾರಿಯನ್ನು ಸಾರ್ವಜನಿಕವಾಗಿ ಅವಹೇಳನಕರ ರೀತಿಯಲ್ಲಿ ನಡೆಸಿಕೊಂಡಿರುವುದು ಖಂಡನಾರ್ಹ. ಈ ಹಿಂದೆ ಅಮೆರಿಕದ ಪೊಲೀಸರು, ಆಗಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ, ಹಿಂದಿ ಚಿತ್ರತಾರೆ ಶಾರೂಖ್‌ ಖಾನ್‌ ಮುಂತಾದವರ ತಪಾಸಣೆ ವಿಷಯದಲ್ಲಿ ಉದ್ಧಟತನದಿಂದ ವರ್ತಿಸಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ದೇವಯಾನಿ ಅವರು ತಮ್ಮ ಮನೆಯ ಕೆಲಸಕ್ಕೆ ಭಾರತದಿಂದ ಕರೆಸಿರುವ ಮನೆಗೆಲಸದ ಹೆಣ್ಣುಮಗಳಿಗೆ ವೀಸಾ ಒಪ್ಪಂದದಲ್ಲಿ ನಮೂದಿಸಿದಷ್ಟು ಸಂಬಳ ನೀಡದೆ, ತೀರಾ ಕಡಿಮೆ ನೀಡಿ ವಂಚಿಸುತ್ತಿದ್ದಾರೆ ಎನ್ನುವುದು ಪೊಲೀಸರು ಮಾಡಿರುವ ಆರೋಪ. 

ದೇವಯಾನಿ ಅವರ ಮೇಲಿನ ಆರೋಪ ರಾಜತಾಂತ್ರಿಕ ಕೆಲಸಕ್ಕೆ ಸಂಬಂಧಪಟ್ಟದ್ದಲ್ಲವಾದ್ದರಿಂದ ಅವರನ್ನು ಇತರ ಸಾಮಾನ್ಯ ಪ್ರಜೆಗಳಂತೆಯೇ ನಡೆಸಿಕೊಂಡಿರುವುದಾಗಿ ಅಮೆರಿಕದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ, ಭಾರತದ ರಾಜತಾಂತ್ರಿಕ ಅಧಿಕಾರಿಗಳೂ ಆಯಾ ದೇಶದ ವೀಸಾ ನಿಯಮಗಳನ್ನು ನಿರ್ಲಕ್ಷ್ಯ ಮಾಡು­ವುದೂ ಸರಿಯಲ್ಲ. ಭಾರತೀಯ ರಾಜತಂತ್ರಜ್ಞರು ಈ ರೀತಿಯ ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಿರುವ ಮೂರನೆಯ ಪ್ರಕರಣ ಇದಾಗಿದೆ ಎನ್ನುವುದು ಗಮನಾರ್ಹ. ಆಯಾ ದೇಶಗಳ ವೀಸಾ ಮತ್ತು ಆಡಳಿತದ ನಿಯಮಗಳನ್ನು ನಮ್ಮ ರಾಜತಂತ್ರಜ್ಞರೇ ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಅದರಿಂದ ಇಡೀ ದೇಶಕ್ಕೆ ಮುಜುಗರವಾಗುತ್ತದೆ ಎನ್ನುವುದೂ ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.