ADVERTISEMENT

ಕರಾಳ ಅಧ್ಯಾಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ಅಮೆರಿಕದ ಕನೆಕ್ಟಿಕಟ್‌ನ ಸ್ಯಾಂಡಿ ಹುಕ್ ಪ್ರಾಥಮಿಕ ಶಾಲೆಯಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದೆ.  20 ಶಾಲಾಮಕ್ಕಳು, ಶಾಲಾ ಪ್ರಾಚಾರ್ಯರು  ಸೇರಿದಂತೆ 28 ಜನರು ಈ ದಾಳಿಯಲ್ಲಿ ಸತ್ತಿದ್ದಾರೆ.  ಮೊದಲು ತಾಯಿಯನ್ನು ಕೊಂದು, ನಂತರ ಶಾಲೆಗೆ ಆಗಮಿಸಿ ಗುಂಡಿನ ದಾಳಿ ನಡೆಸಿ ಅನೇಕ ಜೀವಗಳ ಬಲಿ ಪಡೆದ 20 ವರ್ಷ ವಯಸ್ಸಿನ ಆಡಂ ಲಾಂಝಾ ಕಡೆಗೆ ತನ್ನನ್ನೂ ಕೊಂದುಕೊಂಡಂತಹ ಘಟನಾವಳಿಗಳು ಈಗ ಪೊಲೀಸರ ವಿಶ್ಲೇಷಣೆಗೆ ಒಳಪಟ್ಟಿವೆ.

ಈ ಭೀಕರ ದಾಳಿ ನಡೆಸಿದಾತನ ಕೈಯಲ್ಲಿ ಎರಡು ಅರೆಸ್ವಯಂಚಾಲಿತ ಕೈಬಂದೂಕುಗಳು ಹಾಗೂ ಹೆಚ್ಚಿನ ಸಾಮರ್ಥ್ಯದ ಒಂದು ರೈಫಲ್ ಇದ್ದವು ಎಂದು ಹೇಳಲಾಗಿದೆ. ಈ  ಅಸ್ತ್ರಗಳು ಆತನ ತಾಯಿಗೆ ಸೇರಿದವಾಗಿದ್ದವು. ಕ್ರಿಸ್‌ಮಸ್ ಹತ್ತಿರವಾಗುತ್ತಿರುವ ಈ ದಿನಗಳಲ್ಲಿ ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಶೋಕಸಾಗರವನ್ನು ಅಳೆಯುವುದು ಅಸಾಧ್ಯ. `ನಮ್ಮ ಹೃದಯಗಳು ನೋವಿನಿಂದ ನುಚ್ಚುನೂರಾಗಿವೆ' ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕಣ್ಣೀರೇನೊ ಹರಿಸಿದ್ದಾರೆ.

ಆದರೆ ಹೆಚ್ಚಿನ ಸಾಮರ್ಥ್ಯದ, ಅಪಾಯಕಾರಿ ಅಸ್ತ್ರಗಳನ್ನು ಇಂತಹ ಸಾಮೂಹಿಕ ಹಂತಕರಿಂದ ದೂರವಿಡುವುದು ಹೇಗೆ? ಹಾಗೆಯೇ ಬಂದೂಕು ಹೊಂದುವಂತಹ ಸಾಂವಿಧಾನಿಕ ಹಕ್ಕುಗಳನ್ನೂ ರಕ್ಷಿಸಿಕೊಳ್ಳುವುದು ಹೇಗೆ ಎಂಬಂಥ ಚರ್ಚೆಗಳಿಗೆ ಉತ್ತರ ಹುಡುಕುವ ಪ್ರಾಮಾಣಿಕ ಪ್ರಯತ್ನಗಳಿಗೆ ಇದು ಸಕಾಲ.

ಅಮೆರಿಕದ ಶಾಲಾ ಆವರಣದಲ್ಲಿ ನಡೆದಂತಹ ಎರಡನೇ ಅತಿ ಭೀಕರ ಪ್ರಕರಣ ಇದು. 2007ರಲ್ಲಿ  ನಡೆದ ವರ್ಜೀನಿಯಾ ಟೆಕ್ ಹತ್ಯಾಕಾಂಡದಲ್ಲಿ 33 ಮಂದಿ ಸಾವನ್ನಪ್ಪಿದ್ದರು. ಆ ಹತ್ಯಾಕಾಂಡದಲ್ಲಿ ಇಬ್ಬರು ಭಾರತೀಯರೂ ಜೀವ ತೆತ್ತಿದ್ದರು. ಇತ್ತೀಚೆಗಷ್ಟೇ ಕಳೆದ ಆಗಸ್ಟ್‌ನಲ್ಲಿ ವಿಸ್ಕಾನ್‌ಸಿನ್‌ನಲ್ಲಿರುವ ಸಿಖ್ ಮಂದಿರದಲ್ಲಿ ನಡೆದ ಗುಂಡಿನ ದಾಳಿಗೆ ಆರು ಮಂದಿ ಬಲಿಯಾಗ್ದ್ದಿದುದನ್ನೂ ಸ್ಮರಿಸಬಹುದು.

ನಿಜ. ಮನುಷ್ಯ ಸ್ವಭಾವಗಳ ಎಲ್ಲಾ ಏರುಪೇರುಗಳನ್ನು ತಡೆಯುವುದು ಕಷ್ಟ. ಆದರೆ ಇಂತಹ ಪ್ರಕರಣಗಳು ಮತ್ತೆಮತ್ತೆ ಸಂಭವಿಸುವುದನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಗಂಭೀರ ಚರ್ಚೆಗಳಾಗುವುದಂತೂ ಅಗತ್ಯ. ಮೊದಲಿಗೆ, ಎಲ್ಲಾ ಶಾಲೆಗಳಲ್ಲಿ ಸಶಸ್ತ್ರ ಭದ್ರತಾ ಸಿಬ್ಬಂದಿ ನಿಯೋಜನೆ ದುಬಾರಿಯಾದುದೇನೂ ಅಲ್ಲ. ಜೊತೆಗೆ ಮಾನಸಿಕವಾಗಿ ತೊಂದರೆಯಲ್ಲಿರುವ ವ್ಯಕ್ತಿಗಳನ್ನು ಗುರುತಿಸುವಂತಹ ಕ್ರಿಯೆಯೂ ಮುಖ್ಯವಾದದ್ದು.

2004ರಲ್ಲಿ  ಆಕ್ರಮಣಕಾರಿ ಶಸ್ತ್ರಾಸ್ತ್ರಗಳ ಮೇಲಿನ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳಲಾಗಿದ್ದು, ಈಗ  ಆ ಬಹಿಷ್ಕಾರವನ್ನು ಮರು  ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಯಬೇಕಿದೆ. ಹೆಚ್ಚು ಸಾಮರ್ಥ್ಯದ, ಮಿಲಿಟರಿ ರೀತಿಯ ಶಸ್ತ್ರಾಸ್ತ್ರಗಳು ನಾಗರಿಕರಿಗಾದರೂ ಏಕೆ ಬೇಕು ಎಂಬ ವಾದ ಸರಿಯಾದುದು. ಆದರೆ ಬಂದೂಕು ತಯಾರಕರ ಲಾಬಿ ಹಾಗೂ ಅದರ ಪರವಾಗಿರುವವರ ಒತ್ತಡಗಳು ಸುಮ್ಮನಿರುವುದು ಅಸಾಧ್ಯ.

ವ್ಯಕ್ತಿಗಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬಂಥ ವಾದಮಂಡನೆ ಬಲವಾಗಿಯೇ ಇದೆ. ಆದರೆ, ಮುಗ್ಧಜೀವಿಗಳ ಸಾಮೂಹಿಕ ಹತ್ಯಾಕಾಂಡಗಳು ಹೆಚ್ಚು ನಿಯಮಿತವಾಗಿ ಸಂಭವಿಸುತ್ತಿರುವಂತಹ ಪ್ರಸಕ್ತ ಸಂದರ್ಭದಲ್ಲಿ ಈ ವಿಚಾರದ ಕುರಿತು ಮರು ಅವಲೋಕನ ಅಗತ್ಯ. ಬಂದೂಕು ಸಂಸ್ಕೃತಿಯ ಸಮಸ್ಯೆ ದೊಡ್ಡದಾಗಿಯೇ ಕಾಡುತ್ತಿದೆ ಎಂಬುದು ಅಮೆರಿಕಕ್ಕೆ ಅರಿವಾಗುವ ಮುಂಚೆ ಇನ್ನೆಷ್ಟು ಮುಗ್ಧಜೀವಿಗಳ ಬಲಿದಾನ ಅಗತ್ಯ ಎಂಬುದು ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT