ADVERTISEMENT

ಕಲ್ಲಿದ್ದಲು ಗಣಿಗಳ ಖಾಸಗೀಕರಣ ನಿಯಂತ್ರಣ ವ್ಯವಸ್ಥೆಯೂ ಸರಿಯಾಗಲಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ಕಲ್ಲಿದ್ದಲು ಗಣಿಗಳ ಖಾಸಗೀಕರಣ ನಿಯಂತ್ರಣ ವ್ಯವಸ್ಥೆಯೂ ಸರಿಯಾಗಲಿ
ಕಲ್ಲಿದ್ದಲು ಗಣಿಗಳ ಖಾಸಗೀಕರಣ ನಿಯಂತ್ರಣ ವ್ಯವಸ್ಥೆಯೂ ಸರಿಯಾಗಲಿ   

ಕಲ್ಲಿದ್ದಲು ಗಣಿಗಾರಿಕೆ ಖಾಸಗೀಕರಣಗೊಳಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ವಾಣಿಜ್ಯ ಬಳಕೆ ಉದ್ದೇಶಕ್ಕೆ ಗಣಿಗಾರಿಕೆ ನಡೆಸಲು ದೇಶದ ಖಾಸಗಿ ಮತ್ತು ವಿದೇಶಗಳ ಕಾರ್ಪೊರೇಟ್‌ ಸಂಸ್ಥೆಗಳಿಗೆ ಅನುಮತಿ ನೀಡಿರುವುದು ದೇಶಿ ಇಂಧನ ಕ್ಷೇತ್ರದಲ್ಲಿ ದೂರಗಾಮಿ ಪ್ರಭಾವ ಬೀರಲಿದೆ. 1973ರಲ್ಲಿ ಕಲ್ಲಿದ್ದಲು ಗಣಿಗಳ ರಾಷ್ಟ್ರೀಕರಣ ನಂತರದ ಐತಿಹಾಸಿಕ ಸಕಾಲಿಕ ನಿರ್ಧಾರ ಇದಾಗಿದೆ.

ಖಾಸಗಿ ವಲಯಕ್ಕೆ ಮುಕ್ತಗೊಳಿಸುವುದು ಬಹು ದಿನಗಳ ಬೇಡಿಕೆಯಾಗಿತ್ತು. ದೇಶದ ವಿದ್ಯುತ್‌ ಅಗತ್ಯ ಪೂರೈಸಿಕೊಳ್ಳುವ ಉದ್ದೇಶದಿಂದ 45 ವರ್ಷಗಳ ಹಿಂದೆ ರಾಷ್ಟ್ರೀಕರಣ ನಿರ್ಧಾರ ಕೈಗೊಳ್ಳಲಾಗಿತ್ತು. ಈಗ ಮತ್ತೆ ಖಾಸಗೀಕರಣದತ್ತ ಮುಖ ಮಾಡಲಾಗಿದೆ. ಇದರಿಂದ ಸರ್ಕಾರದ ಏಕಸ್ವಾಮ್ಯ ಕೊನೆಗೊಳ್ಳಲಿದೆ. ಆರೋಗ್ಯಕರ ಸ್ಪರ್ಧೆಗೆ ಅವಕಾಶ ದೊರೆಯಲಿದೆ.

ಕಲ್ಲಿದ್ದಲು ಗಣಿಗಳನ್ನು ಇ–ಹರಾಜು ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಈ ವಿಷಯದಲ್ಲಿ ಮೊಬೈಲ್‌ ತರಂಗಾಂತರ ಹಂಚಿಕೆಯಲ್ಲಿನ ತಪ್ಪು ನಿರ್ಧಾರಗಳಿಂದ ಸರ್ಕಾರ ಪಾಠ ಕಲಿಯಬೇಕಾಗಿದೆ. ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿ ಅಕ್ರಮಗಳು ಕಂಡುಬಂದಿದ್ದರಿಂದ 2014ರಲ್ಲಿ 204 ನಿಕ್ಷೇಪಗಳ ಹಂಚಿಕೆ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್‌ ತೀರ್ಪನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು.

ADVERTISEMENT

ನಮ್ಮಲ್ಲಿನ ಕಲ್ಲಿದ್ದಲು ನಿಕ್ಷೇಪಗಳು ಒಳನಾಡಿನಲ್ಲಿವೆ. ಇಲ್ಲಿಂದ ಕರಾವಳಿ ಪ್ರದೇಶದಲ್ಲಿ ಇರುವ ಬಳಕೆದಾರರಿಗೆ ಸಾಗಿಸುವ ವೆಚ್ಚಕ್ಕಿಂತ ಆಮದು ಹೆಚ್ಚು ಅಗ್ಗವಾಗಿರುತ್ತದೆ. ಇದೆಲ್ಲವನ್ನೂ ಇ–ಹರಾಜಿನ ಸಂದರ್ಭದಲ್ಲಿ ಪರಿಗಣಿಸುವ ಅಗತ್ಯ ಇದೆ. ಇಂಧನ ಆರ್ಥಿಕತೆಯ ದಕ್ಷತೆ ಸುಧಾರಣೆಯಾಗಬೇಕೆ ಹೊರತು ವರಮಾನ ಸಂಗ್ರಹ ಉದ್ದೇಶವೇ ಮುಖ್ಯವಾಗಬಾರದು. ಜತೆಗೆ ಈ ವಲಯದ ನಿಯಂತ್ರಣ ವ್ಯವಸ್ಥೆಯನ್ನೂ ಸಮರ್ಪಕವಾಗಿ ಜಾರಿಗೆ ತರಲು ಸರ್ಕಾರ ಮುತುವರ್ಜಿ ತೋರಬೇಕಾಗಿದೆ.

ದೇಶದಲ್ಲಿ ಪುನರ್‌ಬಳಕೆ ಮತ್ತು ಅಣುಶಕ್ತಿ ಬಳಕೆ ಹೆಚ್ಚುತ್ತಿದ್ದರೂ, ಶಾಖೋತ್ಪನ್ನ ಸ್ಥಾವರಗಳ ಮೇಲಿನ ಅವಲಂಬನೆ ಗರಿಷ್ಠ ಪ್ರಮಾಣದಲ್ಲಿ ಇದೆ. ನಮ್ಮಲ್ಲಿ ಮುಂದಿನ 400 ವರ್ಷಗಳಿಗೆ ಸಾಲುವಷ್ಟು ಕಲ್ಲಿದ್ದಲು ಸಂಗ್ರಹ ಇರುವ ಅಂದಾಜಿದೆ. ಸರ್ಕಾರಿ ಏಕಸ್ವಾಮ್ಯದ ಗಣಿಗಾರಿಕೆ ಕಾರಣಕ್ಕೆ ಅದರ ಉತ್ಪಾದನೆ ಮತ್ತು ಬಳಕೆ ಸೀಮಿತವಾಗಿದೆ. ಬೇಡಿಕೆ ಈಡೇರಿಸುವಷ್ಟು ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿಲ್ಲ.

ಹೀಗಾಗಿ ದೇಶಿ ಬೇಡಿಕೆಯ ಶೇ 22ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಸ್ಥಳೀಯವಾಗಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ನಿಕ್ಷೇಪಗಳಿದ್ದರೂ ಆಮದನ್ನೇ ಬಹುವಾಗಿ ನೆಚ್ಚಿಕೊಂಡಿರುವುದರಿಂದ ಆರ್ಥಿಕ ಹೊರೆಯಾಗಿದೆ. ಇನ್ನು ಮುಂದೆ ಈ ಪರಿಸ್ಥಿತಿ ಬದಲಾಗಬಹುದು. ದೇಶದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಕಲ್ಲಿದ್ದಲು ಬಳಸುವ ಶಾಖೋತ್ಪನ್ನ ಸ್ಥಾವರಗಳ ಮೇಲಿನ ಅವಲಂಬನೆಯು ಗರಿಷ್ಠ ಮಟ್ಟದಲ್ಲಿ (ಶೇ 70) ಇದೆ. ಖಾಸಗಿ ವಲಯಕ್ಕೆ ಮುಕ್ತಗೊಳಿಸುವುದರಿಂದ ಈ ಕ್ಷೇತ್ರದಲ್ಲಿ ಅತ್ಯಾಧುನಿಕ ವಿದೇಶಿ ತಂತ್ರಜ್ಞಾನವೂ ಬಳಕೆಗೆ ಬರಲಿದೆ.

ಹೆಚ್ಚುವರಿ ಬಂಡವಾಳವೂ ಹೂಡಿಕೆಯಾಗಲಿದೆ. ಇದರಿಂದ, ಶಾಖೋತ್ಪನ್ನ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಹಠಾತ್ತಾಗಿ ಕರಗಿ ಉತ್ಪಾದನೆಗೆ ಅಡಚಣೆಯಾಗುವ ಸಮಸ್ಯೆಗೆ ಪರಿಹಾರ ಸಿಗಲಿದೆ.

ದೇಶದ ಇಂಧನ ಭದ್ರತೆ ಮತ್ತು ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಗೆ ಅಪಾಯ ಎದುರಾಗದಂತೆಯೂ ಈ ನೀತಿಯನ್ನು ಜಾರಿಗೆ ತರಬೇಕಾಗಿದೆ. ರಾಷ್ಟ್ರೀಯ ನೈಸರ್ಗಿಕ ಸಂಪತ್ತಿನ ದುರ್ಬಳಕೆ ಆಗದಂತೆಯೂ ಎಚ್ಚರಿಕೆ ವಹಿಸಬೇಕಾಗಿದೆ. ವಿದೇಶಿ ಸರಕಿಗೆ ಹೋಲಿಸಿದರೆ ದೇಶಿ ಕಲ್ಲಿದ್ದಲಿನ ಗುಣಮಟ್ಟವೂ ಕಡಿಮೆ. ಬೂದಿ ಪ್ರಮಾಣ ಹೆಚ್ಚಿನ ಮಟ್ಟದಲ್ಲಿ ಇದೆ.

ಇ–ಹರಾಜು ಮತ್ತು ಬೆಲೆ ನಿಗದಿಯಲ್ಲಿ ಸರ್ಕಾರ ಈ ಎಲ್ಲ ಸಂಗತಿಗಳನ್ನೂ ಗಮನದಲ್ಲಿ ಇಟ್ಟುಕೊಂಡು ಹೂಡಿಕೆದಾರರ ಹಿತಾಸಕ್ತಿಗೂ ಧಕ್ಕೆ ಬರದ ರೀತಿಯಲ್ಲಿ ನಿರ್ಧಾರಕ್ಕೆ ಬರಬೇಕಾಗಿದೆ. ಇಂಧನ ಸುರಕ್ಷತೆ ಹೆಚ್ಚಿಸುವ, ಕೈಗೆಟುಕುವ ಬೆಲೆಗೆ ಕಲ್ಲಿದ್ದಲು ಲಭಿಸುವ ಮತ್ತು ಉದ್ಯೋಗ ಅವಕಾಶ ಹೆಚ್ಚಿಸುವ ಸರ್ಕಾರದ ಭರವಸೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯಗತಗೊಳ್ಳಬೇಕಾಗಿದೆ.

ಇದುವರೆಗಿನ ದೇಶಿ ಕೈಗಾರಿಕೆ ಬೆಳವಣಿಗೆ ಮತ್ತು ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಸರ್ಕಾರಿ ಒಡೆತನದಲ್ಲಿ ಇದ್ದ ಕಲ್ಲಿದ್ದಲು ಗಣಿಗಾರಿಕೆ ವಲಯವು ಮಹತ್ವದ ಕೊಡುಗೆ ನೀಡಿದೆ. ಈಗ ಖಾಸಗಿ ಸಂಸ್ಥೆಗಳೂ ಕೈಜೋಡಿಸುವುದರಿಂದ ವಿದ್ಯುತ್‌ ಸ್ಥಾವರಗಳಲ್ಲಿನ ಕಲ್ಲಿದ್ದಲು ಕೊರತೆ ಸಮಸ್ಯೆ ಶಾಶ್ವತವಾಗಿ ದೂರವಾಗಿ ಉತ್ಪಾದನೆ ಹೆಚ್ಚುವ ಆಶಯ ನಿಜವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.