ಮುಖ್ಯಮಂತ್ರಿಗಳು ಬದಲಾವಣೆಯಾಗಿ, ಸಚಿವರೊಬ್ಬರು ಜೈಲುಪಾಲಾದರೂ ಅಕ್ರಮ ಗಣಿಗಾರಿಕೆಯ `ಭೂತ~ದಿಂದ ರಾಜ್ಯ ಸರ್ಕಾರ ಬಿಡುಗಡೆ ಪಡೆದಂತೆ ಕಾಣುತ್ತಿಲ್ಲ. ಹಾಗಿಲ್ಲದಿದ್ದರೆ ಅಕ್ರಮ ಗಣಿಗಾರಿಕೆಯಲ್ಲಿ ಷಾಮೀಲಾಗಿರುವ ಆರೋಪದ ಮೇಲೆ ಅಮಾನತುಗೊಂಡಿರುವ ಅಧಿಕಾರಿಯನ್ನು ಮರುನೇಮಕಗೊಳಿಸುವ ಉದ್ಧಟತನವನ್ನು ಸರ್ಕಾರ ತೋರಿಸುತ್ತಿರಲಿಲ್ಲ.
ಹಿಂದಿನ ಮುಖ್ಯಮಂತ್ರಿ, ನಾಲ್ವರು ಸಚಿವರು ಸೇರಿದಂತೆ 112 ರಾಜಕಾರಣಿಗಳು ಮತ್ತು 787 ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಮೇಲ್ನೋಟಕ್ಕೆ ಸರಿಯೆಂದು ತೋರಿರುವುದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ 25 ಸಾವಿರ ಪುಟಗಳ ವರದಿಯಲ್ಲಿ ಲೋಕಾಯುಕ್ತರು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ 29 ಅಧಿಕಾರಿಗಳು ಸೇರಿದಂತೆ ನೇರ ಆರೋಪ ಎದುರಿಸುತ್ತಿರುವವರನ್ನು ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್ ತಿಂಗಳಲ್ಲಿಯೇ ಅಮಾನತುಗೊಳಿಸಿತ್ತು. ಈ ಆರೋಪಿಗಳ ಬಗ್ಗೆ ಪೂರ್ಣಪ್ರಮಾಣದ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಾಗಿರುವ ಸರ್ಕಾರ ಈಗ ತರಾತುರಿಯಲ್ಲಿ ಅವರನ್ನು ನಿರಪರಾಧಿ ಎಂದು ಸಾರಿ ರಕ್ಷಿಸಲು ಹೊರಟಿದೆ.
ಇದರ ಫಲವೇ ಅಮಾನತುಗೊಂಡಿದ್ದ ಸಂಡೂರು ವಲಯ ಅರಣ್ಯಾಧಿಕಾರಿ ಎಚ್.ರಾಮಮೂರ್ತಿ ಅವರ ಮರುನೇಮಕ. ಇದರಲ್ಲಿ ರಾಜ್ಯದ ಅರಣ್ಯ ಸಚಿವರೇ ವಿಶೇಷ ಆಸಕ್ತಿ ವಹಿಸಿದ್ದಾರೆಂದೂ ಹೇಳಲಾಗುತ್ತಿದೆ. ಈ ನೇಮಕ ಮುಖ್ಯಮಂತ್ರಿಗಳ ಸಮ್ಮತಿಯೊಡನೆ ನಡೆದಿದ್ದರೆ ಅದು ಅಪರಾಧ, ಅವರ ಗಮನಕ್ಕೆ ಬರದಂತೆ ಅರಣ್ಯ ಸಚಿವರ ಮಟ್ಟದಲ್ಲಿಯೇ ನಡೆದಿದ್ದರೆ ಅದು ಇನ್ನೂ ದೊಡ್ಡ ಅಪರಾಧ.
ಇದರಿಂದ ಮುಖ್ಯಮಂತ್ರಿಗಳಿಗೆ ತಮ್ಮದೇ ಸಹೋದ್ಯೋಗಿಗಳ ಮೇಲೆ ನಿಯಂತ್ರಣ ಇಲ್ಲ ಎಂದಾಗುತ್ತದೆ. ಮುಖ್ಯಮಂತ್ರಿಗಳು ಆಡಳಿತ ನಡೆಸುವುದಕ್ಕಿಂತ ಹೆಚ್ಚಿನ ಸಮಯವನ್ನು ಭಿನ್ನಮತೀಯ ಚಟುವಟಿಕೆಗಳಿಗೆ ಪ್ರತಿತಂತ್ರ ಹೆಣೆಯುವುದರಲ್ಲಿಯೇ ಕಳೆಯುತ್ತಿರುವುದು ಇದಕ್ಕೆ ಕಾರಣ ಇರಬಹುದು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಗಣಿಲೂಟಿಕೋರರ ಔದಾರ್ಯದ ಉರುಳಲ್ಲಿ ಸಿಕ್ಕಿ ಒದ್ದಾಡುತ್ತಿರುವುದನ್ನು ಜನತೆ ಕಂಡಿದೆ. `ಆಪರೇಷನ್ ಕಮಲ~ ಸೇರಿದಂತೆ ಬಿಜೆಪಿ ನಡೆಸಿದ್ದ ಎಲ್ಲ ಅನೈತಿಕ ರಾಜಕೀಯ ಚಟುವಟಿಕೆಗಳಿಗೆ ಬಳಕೆಯಾಗಿದ್ದು ಗಣಿಲೂಟಿಕೋರರ ಹಣ.
ಇದರಿಂದಾಗಿ ಮತದಾರರ ಋಣಕ್ಕಿಂತಲೂ ಈ ಗಣಿಲೂಟಿಕೋರರ ಋಣ ತೀರಿಸಲು ಸರ್ಕಾರ ಹೆಚ್ಚಿನ ಆಸಕ್ತಿ ವಹಿಸುತ್ತಾ ಬಂದಿದೆ. ಮುಖ್ಯಮಂತ್ರಿ ಬದಲಾವಣೆಯಾದ ನಂತರ ಪರಿಸ್ಥಿತಿ ಬದಲಾಗಬಹುದೆಂದು ತಿಳಿದುಕೊಂಡಿರುವುದು ಹುಸಿಯಾಗಿದೆ.
ಭ್ರಷ್ಟಅಧಿಕಾರಿಗಳಿಗೆ ರಕ್ಷಣೆ ನೀಡುವ ಹಿಂದಿನ ಸರ್ಕಾರದ ಪರಂಪರೆಯನ್ನು ಈಗಿನ ಸರ್ಕಾರ ಕೂಡಾ ಮುಂದುವರಿಸಿಕೊಂಡು ಬರುತ್ತಿದೆ. ಭ್ರಷ್ಟ ಅಧಿಕಾರಿಯ ಮರುನೇಮಕವನ್ನು ಕೇಂದ್ರ ತನಿಖಾ ದಳ (ಸಿಬಿಐ) ವಿರೋಧಿಸಿದೆ. ಕಳಂಕಿತರನ್ನು ಮತ್ತೆ ಅದೇ ಸ್ಥಾನಗಳಿಗೆ ನೇಮಿಸುವುದರಿಂದ ಅಕ್ರಮ ಗಣಿಗಾರಿಕೆಯ ತನಿಖೆಗೆ ಅಡ್ಡಿ ಉಂಟಾಗುತ್ತದೆ ಎನ್ನುವ ಅದರ ಆಕ್ಷೇಪ ಸರಿಯಾಗಿಯೇ ಇದೆ.
ಅಕ್ರಮ ಗಣಿಗಾರಿಕೆಯ ಹಗರಣದ ಆರೋಪಿಗಳನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ನೇಮಿಸಬಾರದು ಎಂದು ಸುಪ್ರೀಂ ಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿಯ (ಸಿಇಸಿ) ಶಿಫಾರಸನ್ನು ಕೂಡಾ ರಾಜ್ಯಸರ್ಕಾರ ನಿರ್ಲಕ್ಷಿಸಿದೆ.
ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ತಪರಾಕಿ ನೀಡುವ ಮೊದಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮರುನೇಮಕಗೊಳಿಸಿರುವ ಕಳಂಕಿತ ಅಧಿಕಾರಿಯ ಮರು ನೇಮಕದ ಆದೇಶವನ್ನು ತಕ್ಷಣ ರದ್ದುಗೊಳಿಸಿ ಅವರ ವಿರುದ್ಧದ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.