ADVERTISEMENT

ಕಾಡನ್ನು ಸಂರಕ್ಷಿಸಲು ಆದ್ಯತೆ ನೀಡಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ಮೈಸೂರಿನ ರಾಘವೇಂದ್ರನಗರದ ಶಾಲಾ ಆವರಣಕ್ಕೆ ನುಗ್ಗಿದ ಚಿರತೆಯೊಂದನ್ನು ಅರಿವಳಿಕೆ ನೀಡಿ ಯಶಸ್ವಿಯಾಗಿ ಸೆರೆಹಿಡಿದು ಅಲ್ಲಿಯ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಕಳುಹಿಸಲಾಗಿದೆ. ಕೆಲ ತಿಂಗಳ ಹಿಂದೆ ಅಲ್ಲಿಯ ಕೈಗಾರಿಕೆಯೊಂದರ ಆವರಣಕ್ಕೆ ನುಗ್ಗಲು ಯತ್ನಿಸಿದ ಚಿರತೆಗೆ ಎತ್ತರದ ಕಾಂಪೌಂಡಿನ ಸರಳು ಚುಚ್ಚಿ ತೀವ್ರವಾಗಿ ಗಾಯವಾಗಿತ್ತು. ಚಿರತೆ, ಹುಲಿ ಅಥವಾ ಆನೆ ಇಲ್ಲವೇ ಕಾಡು ಪ್ರಾಣಿಗಳು ನಾಡಿಗೆ ನುಗ್ಗುವುದು ಸಾಮಾನ್ಯವಾಗುತ್ತಿದೆ.

ಕೆಲ ತಿಂಗಳ ಹಿಂದೆ ಹೆಗ್ಗಡದೇವನಕೋಟೆಯ ಹಳ್ಳಿಯೊಂದಕ್ಕೆ ಕಬಿನಿ ಹಿನ್ನೀರಿನ ಕಾಡಿನಿಂದ ಹುಲಿಯೊಂದು ನುಗ್ಗಿತ್ತು. ಅದಕ್ಕೆ ಅರಿವಳಿಕೆ ಮದ್ದು ನೀಡಿ ಹಿಡಿಯುವ ಸಂದರ್ಭದಲ್ಲಿ ಹುಲಿಯು ಛಾಯಾಗ್ರಾಹಕರೊಬ್ಬರ ಮೇಲೆ ಹಲ್ಲೆ ನಡೆಸಿತ್ತು. ಇದೇ ತಾಲ್ಲೂಕಿನ ಸೊಳ್ಳೆಪುರದಲ್ಲಿ ಫೆಬ್ರುವರಿ ತಿಂಗಳಲ್ಲಿ ಹುಲಿಯ ಬಾಯಿಗೆ ಬಲಿಯಾಗಿದ್ದ ಹಸುವಿನ ದೇಹದ ಮೇಲೆ ಮೆಟಾಸಿಡ್ ಸುರಿದು ವ್ಯಾಘ್ರನ ಹತ್ಯೆ ಮಾಡಲಾಗಿತ್ತು. ಇದಕ್ಕೆ ಸಮೀಪದ ಡಿ.ಬಿ.ಕುಪ್ಪೆ ವಲಯದಲ್ಲಿ ಬೇಟೆ ಪ್ರಾಣಿಯ ಮೇಲೆ ಇಲಿ ಪಾಷಾಣ ಸುರಿದು ಮತ್ತೊಂದು ಹುಲಿಯನ್ನು ಬಲಿ ತೆಗೆದುಕೊಳ್ಳಲಾಗಿತ್ತು. ಇವು ಊರಿಗೆ ನುಗ್ಗಿದ ಪ್ರಾಣಿಗಳ ಮೇಲಿನ ಪ್ರತೀಕಾರ ಎಂದೇ ಹೇಳಬಹುದು.

ರಾಜ್ಯದಲ್ಲಿ ಚಿರತೆಗಳ ಸಂಖ್ಯೆ ಅಧಿಕವಾಗಿದೆ. ಪ್ರಮುಖ ಬೇಟೆಗಾರ ಹುಲಿ ಇರುವ ಕಡೆ ಚಿರತೆ ಕದ್ದುಮುಚ್ಚಿ ಬೇಟೆಯಾಡಬೇಕಾಗುತ್ತದೆ. ಇದೇ ಕಾರಣಕ್ಕೆ ಅವು ಮರದ ಮೇಲಕ್ಕೆ ಬೇಟೆಯನ್ನು ಹೊತ್ತೊಯ್ಯುವುದು. ಅವುಗಳ ನಡುವೆ ಪೈಪೋಟಿ ಹೆಚ್ಚಾದಾಗ ನಾಡಿನ ಕಡೆ ಹೆಜ್ಜೆಯಿಡುವುದು ಸಾಮಾನ್ಯ. ಇದೇ ರೀತಿಯಲ್ಲಿ ಹುಲಿಗಳು ಒಂದು ಪ್ರದೇಶದಲ್ಲಿ ಸಾಮ್ರಾಜ್ಯವನ್ನು ಗುರುತಿಸಿಕೊಂಡರೂ, ಬಲಿಷ್ಠವಾದ ಮತ್ತೊಂದು ಹುಲಿ ಬಂದಾಗ ಬಲಹೀನವಾದ ಹುಲಿ ಅನಿವಾರ್ಯವಾಗಿ ಹಳ್ಳಿಗಳತ್ತ ಹೆಜ್ಜೆ ಹಾಕಿ ಜಾನುವಾರುಗಳನ್ನು ಹಿಡಿಯುವ ಸ್ಥಿತಿ ಬರುತ್ತದೆ. ಆದರೆ ಗಟ್ಟಿಯಾಗಿರುವ ಬೇಟೆ ಪ್ರಾಣಿಗಳು ನಾಡಿನತ್ತ ನುಗ್ಗುತ್ತಿರುವುದು ಕಳವಳಕಾರಿ.

ಅರಣ್ಯ ಇಲಾಖೆಯ ದಾಖಲೆಗಳನ್ನು ಗಮನಿಸಿದರೆ ಕಾಡಿನಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಹೊರತು ಅರಣ್ಯದ ವಿಸ್ತೀರ್ಣ ಹೆಚ್ಚಾಗುತ್ತಿಲ್ಲ. ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೂ ರಾಜ್ಯದಲ್ಲಿ ಕಾಡಿನ ವಿಸ್ತೀರ್ಣ ಹೆಚ್ಚಿಲ್ಲ. ಕಾಡಿನಂಚಿನ ಹಳ್ಳಿಗಳ ಉರುವಲಿನ ಅಗತ್ಯಕ್ಕಾಗಿ ನಿಧಾನವಾಗಿ ಅರಣ್ಯ ಬೋಳಾಗುತ್ತಿದೆ. ಇಂತಹ ಕೆಟ್ಟ ನಡವಳಿಕೆಗೆ ಕಡಿವಾಣ ಬೀಳಬೇಕು.

ಅರಣ್ಯ ಇಲಾಖೆಯು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ನೆಡುತೋಪು ಯೋಜನೆ ಯಶಸ್ವಿಯಾಗಿದ್ದರೆ ಇಷ್ಟೊತ್ತಿಗೆ ರಾಜ್ಯದ ಅರ್ಧಭಾಗದಲ್ಲಿ ಅರಣ್ಯ ತಲೆಯೆತ್ತಬೇಕಿತ್ತು. ಘಟ್ಟಪ್ರದೇಶದ ಕಂದಾಯ ಭೂಮಿಯಲ್ಲಿ ದಟ್ಟವಾಗಿ ಮರ ಬೆಳೆದಿರುವ ಪ್ರದೇಶಕ್ಕೂ ಅರಣ್ಯದ ಮಾನ್ಯತೆ ನೀಡಲು ಸರ್ಕಾರ ಆಸಕ್ತಿ ತೋರುತ್ತಿಲ್ಲ ಎನ್ನುವುದು ಬಹಿರಂಗವಾಗಿದೆ. ಕಾಡನ್ನು ಸಂರಕ್ಷಿಸದಿದ್ದರೆ ಪ್ರಾಣಿಗಳು ಗ್ರಾಮಗಳತ್ತ ನುಗ್ಗುವುದು ಸಾಮಾನ್ಯ. ಸಂರಕ್ಷಣೆಯ ಬಗ್ಗೆ ಸರ್ಕಾರದ ಜೊತೆಗೆ ಸಾರ್ವಜನಿಕರೂ ಗಮನ ಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.