ADVERTISEMENT

ಕಾನೂನು ಬಿಗಿಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

`ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯವೇ ಇಲ್ಲ ಎನ್ನುವ ನಿರಾಶಾವಾದದ ಸನ್ನಿವೇಶವನ್ನು ಹುಟ್ಟುಹಾಕಲಾಗುತ್ತಿದೆ~ ಎನ್ನುವ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಹೇಳಿಕೆ ವಾಸ್ತವಸ್ಥಿತಿಯ ವಿಶ್ಲೇಷಣೆಗಿಂತಲೂ ಹೆಚ್ಚಾಗಿ ವಿರೋಧಿಗಳನ್ನುದ್ದೇಶಿಸಿ ಮಾಡಿರುವ ಆರೋಪದಂತೆ ಕೇಳುತ್ತಿದೆ.

ಲೋಕಪಾಲರ ನೇಮಕಕ್ಕಾಗಿ ಒತ್ತಾಯಿಸಿ ಅಣ್ಣಾ ಹಜಾರೆ ಮತ್ತು ತಂಡ ಚಳವಳಿ ಪ್ರಾರಂಭಿಸಿದ ನಂತರದ ದಿನಗಳಲ್ಲಿ ದೇಶದಾದ್ಯಂತ ಭ್ರಷ್ಟಾಚಾರದ ವಿರುದ್ದ ಜನತೆ ಗಟ್ಟಿದನಿಯಲ್ಲಿ ಮಾತನಾಡುತ್ತಿದ್ದಾರೆ.

ಈ ಚಳವಳಿಯ ಕೆಲವು ನಾಯಕರ ಅವಸರದ ಮತ್ತು ಹಟಮಾರಿ ಧೋರಣೆಯಿಂದಾಗಿ ನಿರೀಕ್ಷಿತ ಗುರಿ ತಲುಪದೆ ಹೋದರೂ ಇದು ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ನೆರವಾಗಿರುವುದನ್ನು ನಿರಾಕರಿಸಲಾಗದು.

ADVERTISEMENT

ಆದರೆ ಜಾಗೃತಗೊಂಡ ಜನರಲ್ಲಿ ಭ್ರಷ್ಟಾಚಾರಿಗಳನ್ನು ಶಿಕ್ಷಿಸಲು ಅಸಾಧ್ಯವಾಗಿರುವ ಕಾನೂನು ವ್ಯವಸ್ಥೆ ಬಗ್ಗೆ ಅಸಮಾಧಾನ ಇದೆ. ಈ ಕಾರಣದಿಂದಾಗಿ ಭ್ರಷ್ಟರನ್ನು ಶಿಕ್ಷೆಗೊಳಪಡಿಸಬೇಕಾದ ಪೊಲೀಸ್, ನ್ಯಾಯಾಲಯ ಮತ್ತು ಕಾನೂನು ಬಗ್ಗೆ ಅವರು ನಿರಾಶೆ ಮತ್ತು ನಕಾರಾತ್ಮಕ ದನಿಯಲ್ಲಿ ಮಾತನಾಡುತ್ತಾರೆ ಎನ್ನುವುದನ್ನು ಪ್ರಧಾನಿ ಅರ್ಥಮಾಡಿಕೊಳ್ಳಬೇಕು.

ಭ್ರಷ್ಟರ ವಿರುದ್ಧ ಸಾವಿರಾರು ಪ್ರಕರಣಗಳು ದಾಖಲೆಗೊಂಡರೂ ಆರೋಪ ಸಾಬೀತಾಗಿ ಶಿಕ್ಷೆಗೀಡಾದವರ ಸಂಖ್ಯೆ ಅತೀ ಕಡಿಮೆ. ಇದಕ್ಕೆ ಕಾನೂನಿನಲ್ಲಿನ ದೋಷ ಮಾತ್ರ ಅಲ್ಲ, ರಾಜಕೀಯ ಹಸ್ತಕ್ಷೇಪವೂ ಕಾರಣ ಎನ್ನುವುದು ಪ್ರಧಾನಿಯವರಿಗೂ ಗೊತ್ತಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರ ಅಳಿಯನ ವಿರುದ್ಧದ ಆರೋಪದ ಬಗ್ಗೆ ತನಿಖೆ ಇಲ್ಲವೇ ಇಲ್ಲ ಎಂದು ಯುಪಿಎ ಸರ್ಕಾರ ಹೇಳಿರುವುದು ಇದಕ್ಕೆ ಇತ್ತೀಚಿನ ಉದಾಹರಣೆ.

ಖಾಸಗಿ ಕ್ಷೇತ್ರದ ಭ್ರಷ್ಟರನ್ನು ಕೂಡಾ ಶಿಕ್ಷಿಸಲು ಅನುಕೂಲವಾಗುವಂತೆ ಈಗಿನ ಭ್ರಷ್ಟಾಚಾರ ನಿಷೇಧ ಕಾಯಿದೆಗೆ ತಿದ್ದುಪಡಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಪ್ರಧಾನಿಯವರು ಹೇಳಿದ್ದಾರೆ.

ಬಹುತೇಕ ಭ್ರಷ್ಟಾಚಾರದ ಹಗರಣಗಳ ಕೇಂದ್ರ ಸ್ಥಾನದಲ್ಲಿ ವಾಣಿಜ್ಯ ಕ್ಷೇತ್ರ ಇರುವುದರಿಂದ ಈ  ಚಿಂತನೆ ಸ್ವಾಗತಾರ್ಹವಾದುದು. ಹಲವಾರು ದೇಶಗಳಲ್ಲಿ ಈ ಬಗೆಯ ಕಾನೂನುಗಳಿರುವ ಬಗ್ಗೆ ಪ್ರಧಾನಿಯವರು ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಷಾಮೀಲಾಗಿರುವ ಹಗರಣಗಳ ಮೊತ್ತ ಸಾವಿರದಿಂದ ಲಕ್ಷ ಕೋಟಿ ರೂಪಾಯಿಗಳಾಗಿರುತ್ತದೆ. ಇವೆಲ್ಲವೂ ನೇರವಾಗಿ ರಾಜಕಾರಣಿಗಳು ಇಲ್ಲವೆ ಅಧಿಕಾರಿಗಳ ಕಿಸೆಗೆ ಹೋದ ಹಣ ಅಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಉದ್ಯಮಿಗಳು ಆಡಳಿತಾರೂಢ ಪಕ್ಷದ ರಾಜಕಾರಣಿಗಳಿಗೆ ಲಂಚದ ಆಮಿಷವೊಡ್ಡಿ ಸರ್ಕಾರದ ನೀತಿ-ನಿರ್ಧಾರಗಳನ್ನು ತಿರುಚುವ ಇಲ್ಲವೇ ಬದಲಿಸುವ ಪ್ರಯತ್ನವನ್ನು ಮಾಡಿರುತ್ತಾರೆ.

ಈ ಮೂಲಕ ಲಂಚ ಕೊಟ್ಟಿರುವ ಮೊತ್ತಕ್ಕಿಂತ ಹತ್ತಾರುಪಟ್ಟು ಹೆಚ್ಚು ಆರ್ಥಿಕ ಲಾಭವನ್ನು ಗಳಿಸುತ್ತಾರೆ. ಇದನ್ನು ತಡೆಯಲು ಈಗಿನ ಕಾನೂನಿನಲ್ಲಿ ಹೆಚ್ಚು ಅವಕಾಶ ಇಲ್ಲ. ಲಂಚ ಪಡೆದವರನ್ನು ಶಿಕ್ಷಿಸುವ ಅವಕಾಶ ಇರುವ ಈಗಿನ ಕಾನೂನಿನಲ್ಲಿ ಲಂಚ ನೀಡಿದವರನ್ನು ಶಿಕ್ಷಿಸುವ ಬಗ್ಗೆ ಸ್ಪಷ್ಟತೆ ಇಲ್ಲ.

ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಷೇಧ ಕಾನೂನಿಗೆ ತಿದ್ದುಪಡಿ ಮಾಡಬೇಕೆಂಬ ಕೂಗು ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಪ್ರಧಾನಿ ಮನಮೋಹನ್‌ಸಿಂಗ್ ಅವರೇ ಇದನ್ನು ಹಲವಾರು ಬಾರಿ ಪ್ರಸ್ತಾಪಿಸಿದ್ದರು. ಭ್ರಷ್ಟಾಚಾರದ ವಿರುದ್ಧದ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕಾದರೆ ಇದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.