ಮಿಲಿಟರಿ ಭದ್ರತೆಯನ್ನು ಸೀಳಿ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಸಂಸತ್ ಭವನ, ರಾಯಭಾರ ಕಚೇರಿಗಳು, ನ್ಯಾಟೋ ಮುಖ್ಯ ಕಚೇರಿ ಮುಂತಾದ ಪ್ರಮುಖ ಕೇಂದ್ರಗಳ ಮೇಲೆ ಭಾನುವಾರ ನಡೆದಿರುವ ಬಾಂಬ್ ದಾಳಿ ಘಟನೆಗಳನ್ನು ನೋಡಿದರೆ ತಾಲಿಬಾನ್ ಉಗ್ರಗಾಮಿಗಳ ಬಲ ಇನ್ನೂ ಅಡಗಿಲ್ಲ ಎನ್ನುವುದು ಸ್ಪಷ್ಟ.
ಅಧಿಕಾರದ ಕೇಂದ್ರವಾಗಿರುವ ಕಾಬೂಲ್ ಮೇಲೆ ಹಿಂದೆಯೂ ಹಲವು ಬಾರಿ ತಾಲಿಬಾನ್ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ. ಇಸ್ಲಾಂ ಆಧಾರಿತ ದೇಶ ಸ್ಥಾಪನೆ ಮಾಡಿ ಷರಿಯತ್ ಕಾನೂನು ಜಾರಿಗೊಳಿಸಬಯಸುವ ಮತ್ತು ಭಯೋತ್ಪಾದನೆಯ ಮೂಲಕ ತನ್ನ ವಿರೋಧಿಗಳನ್ನು ಮುಗಿಸುವ ಉದ್ದೆೀಶವುಳ್ಳ ತಾಲಿಬಾನ್ ಉಗ್ರರನ್ನು ಮಟ್ಟಹಾಕಲು ನ್ಯಾಟೋ ಪಡೆಗಳು ಇಲ್ಲಿಗೆ ಬಂದು ಹನ್ನೊಂದು ವರ್ಷಗಳೇ ಕಳೆದಿವೆ.
ಭದ್ರತೆಯ ಜವಾಬ್ದಾರಿಯನ್ನು ಆಫ್ಘಾನಿಸ್ತಾನದ ಪಡೆಗಳಿಗೆ ವಹಿಸಿ 2014ರ ಅಂತ್ಯಕ್ಕೆ ವಾಪಸಾಗಲು ನ್ಯಾಟೋ ಸಿದ್ಧತೆ ನಡೆಸುತ್ತಿರುವ ಈ ಸಂದರ್ಭದಲ್ಲಿ ನಡೆದಿರುವ ಈ ಘಟನೆಗಳು ಮುಂಬರುವ ಭಯಾನಕ ದಿನಗಳ ಮುನ್ಸೂಚನೆಯಂತಿವೆ.
ದೇಶದ ಭದ್ರತೆಯನ್ನು ನೋಡಿಕೊಳ್ಳುವ ಸಾಮರ್ಥ್ಯ ಆಫ್ಘಾನಿಸ್ತಾನದ ಭದ್ರತಾ ಪಡೆಗಳಿಗೆ ಇದೆ ಎನ್ನುವ ಬಗ್ಗೆಯೇ ಈಗ ಅನುಮಾನ ಬರುತ್ತಿದೆ. ತಾಲಿಬಾನ್ ಬೆನ್ನು ಮೂಳೆ ಮುರಿಯುವುದು ನ್ಯಾಟೋ ಪಡೆಗಳ ಉದ್ದೇಶ.
ಅಕಸ್ಮಾತ್ ಅದು ಆಗದೆ ಹೋದರೆ ಆಫ್ಘಾನಿಸ್ತಾನದಿಂದ ನ್ಯಾಟೋ ಸೇನೆ ಹೊರಹೋಗುವ ಮುನ್ನ ಉದಾರವಾದಿ ತಾಲಿಬಾನ್ ನಾಯಕರನ್ನು ಸರ್ಕಾರದ ಭಾಗವಾಗಿ ಮಾಡಿ ದೇಶದಲ್ಲಿ ರಾಜಕೀಯ ಸ್ಥಿರತೆ ಸ್ಥಾಪಿಸುವುದು ಪಾಶ್ಚಿಮಾತ್ಯ ದೇಶಗಳ ತಂತ್ರ.
ಆದರೆ ಈವರೆಗೆ ಅಂಥ ಯತ್ನಗಳಿಗೆ ತಾಲಿಬಾನ್ ನಾಯಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಎಂಬತ್ತರ ದಶಕದಲ್ಲಿ ಆಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದ ಸೋವಿಯತ್ ಒಕ್ಕೂಟದ ಸೇನೆಯನ್ನು ಅಲ್ಲಿಂದ ಓಡಿಸಲು ಅಮೆರಿಕ ನೆರವು ನೀಡಿದ ಮುಜಾಹಿದ್ದೀನ್ ಹೋರಾಟಗಾರರೇ ಈಗ ತಾಲಿಬಾನ್‌ಗಳಾಗಿ ಆ ದೇಶದ ವಿರುದ್ಧವೇ ಹೋರಾಡುತ್ತಿದ್ದಾರೆ.
ಆಗ ಅಮೆರಿಕ ಬೆಂಬಲ ನೀಡಿದ್ದ ಹಕ್ಕಾನಿ ಸಂಘಟನೆಯೂ ಇದೀಗ ತಾಲಿಬಾನ್ ಜೊತೆ ಸೇರಿಕೊಂಡಿರುವುದು ಸಮಸ್ಯೆಯನ್ನು ಜಟಿಲಗೊಳಿಸಿದೆ. ಆಫ್ಘಾನಿಸ್ತಾನದಲ್ಲಿ ಭಾನುವಾರ ನಡೆದಿರುವ ದಾಳಿಯ ಹಿಂದೆ ಪಾಕಿಸ್ತಾನವನ್ನು ನೆಲೆ ಮಾಡಿಕೊಂಡಿರುವ ಹಕ್ಕಾನಿ ಉಗ್ರವಾದಿಗಳಿದ್ದಾರೆ ಎಂಬ ಸುದ್ದಿಗಳು ಆತಂಕ ಹುಟ್ಟಿಸಿವೆ.
ಭವಿಷ್ಯದಲ್ಲಿ ತೈಲ ಸಾಗಣೆ ಮತ್ತು ಭದ್ರತೆಯ ದೃಷ್ಟಿಯಿಂದ ಆಫ್ಘಾನಿಸ್ತಾನ ಭಾರತಕ್ಕೆ ಬಹಳ ಮುಖ್ಯವಾದುದು. ಹೀಗಾಗಿಯೇ ಆ ದೇಶದ ಅಭಿವೃದ್ಧಿಯಲ್ಲಿ ಭಾರತ ನೆರವಾಗುತ್ತಿದೆ. ಈ ಬೆಳವಣಿಗೆ ತನ್ನ ಭದ್ರತೆಗೆ ಅಪಾಯ ಎಂದು ಪಾಕಿಸ್ತಾನ ಭಾವಿಸಿದೆ. ಹೀಗಾಗಿ ಆಫ್ಘಾನಿಸ್ತಾನದಲ್ಲಿ ಕೈಗೊಂಬೆ ಸರ್ಕಾರ ಸ್ಥಾಪಿಸಲು ಪಾಕಿಸ್ತಾನ ಪ್ರಯತ್ನಿಸುತ್ತ ಬಂದಿದೆ.
ಹಕ್ಕಾನಿ ಸಂಘಟನೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಎಲ್ಲ ನೆರವು ನೀಡಿ ನ್ಯಾಟೋ ವಿರುದ್ಧ ಮುಸುಕಿನ ಯುದ್ಧ ನಡೆಸುತ್ತಿರುವುದು ಇದೇ ಕಾರಣಕ್ಕೆ. ಪಾಕಿಸ್ತಾನ ಭಯೋತ್ಪಾದನೆಗೆ ಉತ್ತೇಜನ ನೀಡುವ ದೇಶವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನವನ್ನು ಹದ್ದುಬಸ್ತಿಗೆ ತರದೆ ಆಫ್ಘಾನಿಸ್ತಾನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎನ್ನುವುದನ್ನು ಅಂತರರಾಷ್ಟ್ರೀಯ ಸಮುದಾಯ ಈಗಲಾದರೂ ಮನವರಿಕೆ ಮಾಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.