ADVERTISEMENT

ಕ್ಯಾಚುಗಳ ಸರದಾರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2010, 12:15 IST
Last Updated 29 ಡಿಸೆಂಬರ್ 2010, 12:15 IST
ಕ್ಯಾಚುಗಳ ಸರದಾರ
ಕ್ಯಾಚುಗಳ ಸರದಾರ   

ಕ್ರೀಡೆಯಲ್ಲಿ ಜನರು ಕೊಡುವ ಬಿರುದುಗಳೆಲ್ಲ ಆಟಗಾರನ ಸ್ವಭಾವ ಮತ್ತು ಆಟದ ವೈಖರಿಗೆ ಅನುಗುಣವಾಗಿಯೇ ಇರುತ್ತವೆ. ರಾಹುಲ್ ದ್ರಾವಿಡ್ ‘ಗೋಡೆ’ ಎಂದು ಕರೆಸಿಕೊಳ್ಳಲು ಅವರ ಬ್ಯಾಟಿಂಗ್‌ನಲ್ಲಿರುವ ತಾಳ್ಮೆ, ಸ್ಥಿರತೆ ಕಾರಣ. ಹಾಗೆಯೇ ಅವರ ಕೈಗಳಿಂದ ಚೆಂಡು ನೆಲಕ್ಕುರುಳಿದ್ದು ಕಡಿಮೆ. ಬ್ಯಾಟ್ಸಮನ್ನರ ಬ್ಯಾಟಿನಿಂದ ಸಿಡಿಯುವ ಚೆಂಡು ಅವರ ಬಳಿ ಹೋದರೆ ಅದು ಪಕ್ಕಾ ಕ್ಯಾಚ್ ಆಗಿಯೇ ಪರಿವರ್ತಿತಗೊಳ್ಳುತ್ತದೆ. ಅವರ ಕೈಗಳಲ್ಲಿ ಕಿಂಡಿಗಳಿಲ್ಲ. ಸುಭದ್ರ ಗೋಡೆಯೇ ಹೌದು.

ಭಾರತ ಕ್ರಿಕೆಟ್ ತಂಡದಲ್ಲಿ ಈಗ ಇರುವ ಈ ಏಕೈಕ ಕನ್ನಡಿಗ ಟೆಸ್ಟ್ ಕ್ರಿಕೆಟ್‌ನಲ್ಲಿ 200 ಕ್ಯಾಚುಗಳ ಹೊಸ ವಿಶ್ವ ದಾಖಲೆಯನ್ನು ಸೋಮವಾರ ಬರೆದರು. ದಕ್ಷಿಣ ಆಫ್ರಿಕ ವಿರುದ್ಧ ಡರ್ಬನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ, ಹರಭಜನ್ ಸಿಂಗ್ ಬೌಲಿಂಗ್‌ನಲ್ಲಿ ಡೇಲ್ ಸ್ಟೇಯ್ನ್ ಬ್ಯಾಟಿನ ಹೊರತುದಿಯಿಂದ ಸಿಡಿದ ಚೆಂಡು ಸ್ಲಿಪ್‌ನತ್ತ ಹಾರಿತು. ದ್ರಾವಿಡ್ ಅವರಿಗೆ ವಿಕೆಟ್‌ಕೀಪರ್ ದೋನಿ ಅವರ ಪ್ಯಾಡ್ ಅಡ್ಡವಾಗಿತ್ತು. ಆದರೂ ತಮ್ಮ ಎಡಬದಿಗೆ ಹಾರುತ್ತಿದ್ದ ಚೆಂಡನ್ನು ನೋಡಿದ ಅವರು ಕಚಕ್ಕನೇ ಕೈಹಾಕಿ ಹಿಡಿದೇಬಿಟ್ಟರು.

ಕೂಡಲೇ ಹುಣ್ಣಿಮೆ ಚಂದ್ರನನ್ನೇ ಬೊಗಸೆಯಲ್ಲಿ ಹಿಡಿದಷ್ಟು ಸಂಭ್ರಮಪಟ್ಟರು. ಟೆಸ್ಟ್‌ನಲ್ಲಿ 200 ಕ್ಯಾಚ್ ಹಿಡಿದ ಮೊದಲ ಆಟಗಾರನೆಂಬ ಗೌರವಕ್ಕೆ ಅವರು ಪಾತ್ರರಾಗಿದ್ದು ಸಾಮಾನ್ಯವೇನಾಗಿರಲಿಲ್ಲ. ಕಳೆದ ವಾರವಷ್ಟೇ ಸಚಿನ್ ತಮ್ಮ 50ನೇ ಶತಕದೊಂದಿಗೆ ಅಂಥ ಇನ್ನೊಂದು ದಾಖಲೆ ಸ್ಥಾಪಿಸಿದ ಮೊದಲ ಆಟಗಾರನಾಗಿದ್ದರು.

ಬ್ಯಾಟ್ಸಮನ್-ಬೌಲರ್, ಬ್ಯಾಟ್ಸಮನ್-ವಿಕೆಟ್‌ಕೀಪರ್ ಆಲ್‌ರೌಂಡರುಗಳಿದ್ದಂತೆ ಬ್ಯಾಟ್ಸ್‌ಮನ್-ಕ್ಯಾಚರ್ ಆಲ್‌ರೌಂಡರ್ ಎಂದು ಯಾರೂ ಕರೆಸಿಕೊಂಡಿಲ್ಲ. ಸಂದರ್ಭ ಬಿದ್ದಾಗ ವಿಕೆಟ್‌ಕೀಪರ್ ಕೆಲಸವನ್ನೂ ಮಾಡಿರುವ ದ್ರಾವಿಡ್ ತಮ್ಮ ಅಮೋಘ ಕ್ಯಾಚಿಂಗ್ ಕಲೆಯ ಮೂಲಕ ಆಲ್‌ರೌಂಡರ್ ಎಂಬ ಪದಕ್ಕೆ ಹೊಸ ಅರ್ಥ ಕಲ್ಪಿಸಿದ್ದಾರೆ. ಹಿಂದೆ ಏಕನಾಥ್ ಸೋಳ್ಕರ್ ತಮ್ಮ ಬ್ಯಾಟಿಂಗ್‌ಗಿಂತ ಕ್ಯಾಚ್ ಹಿಡಿಯುವುದಕ್ಕೇ ಖ್ಯಾತರಾಗಿದ್ದರು. ಷಾರ್ಟ್ ಲೆಗ್‌ನಲ್ಲಿ ಅವರು ಹಿಡಿದ ಕ್ಯಾಚುಗಳಿಂದಲೇ ಸ್ಪಿನ್ನರುಗಳಿಗೆ ಹೆಚ್ಚು ವಿಕೆಟ್ ಸಿಕ್ಕಿದ್ದವು.
 
ಬ್ಯಾಟಿಂಗ್‌ನಲ್ಲಿ ಆಪದ್ಬಾಂಧವನಾಗಿ ‘ಗೋಡೆ’ ಎಂದು ಹೆಸರು ಮಾಡಿದ ದ್ರಾವಿಡ್, ಕಳೆದ ವರ್ಷವೇ ಆಸ್ಟ್ರೇಲಿಯದ ಮಾರ್ಕ್ ವಾ ಹೆಸರಲ್ಲಿದ್ದ 181 ಕ್ಯಾಚುಗಳ ವಿಶ್ವ ದಾಖಲೆ ಮುರಿದಿದ್ದರು. ಆಸ್ಟ್ರೇಲಿಯ ತಂಡದ ಈಗಿನ ನಾಯಕ ರಿಕಿ ಪಾಂಟಿಂಗ್ 174 ಕ್ಯಾಚುಗಳೊಡನೆ ದ್ರಾವಿಡ್ ಅವರಿಗಿಂತ ಬಹಳ ಹಿಂದಿದ್ದಾರೆ.  ನಿವೃತ್ತರಾಗಿರುವ  ನ್ಯೂಜಿಲೆಂಡ್‌ನ ಸ್ಟೀಫೆನ್ ಫ್ಲೆಮಿಂಗ್ 171 ಹಾಗೂ ವೆಸ್ಟ್‌ಇಂಡೀಸ್‌ನ ಬ್ರಯಾನ್ ಲಾರಾ 164 ಕ್ಯಾಚ್ ಹಿಡಿದಿದ್ದರು. ಮುತ್ತಯ್ಯ ಮುರಳೀಧರನ್ ಅವರ 800 ಟೆಸ್ಟ್ ವಿಕೆಟ್ ಅಥವಾ ಸಚಿನ್ ತೆಂಡೂಲ್ಕರ್ ಅವರ 50 ಶತಕಗಳ ದಾಖಲೆಗೆ ಇರುವ ಮೆರುಗು 200 ಕ್ಯಾಚುಗಳಲ್ಲಿ ಕಾಣದಿದ್ದರೂ 200 ಕ್ಯಾಚುಗಳಿಗೆ ಅದರದ್ದೇ ಆದ ಮಹತ್ವ ಇದ್ದೇ ಇರುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಯಾಚುಗಳ ದಾಖಲೆ ಬರೆಯಬೇಕಾದಾಗಲೆಲ್ಲ ರಾಹುಲ್ ದ್ರಾವಿಡ್ ಅವರ ಹೆಸರು ಮೊದಲು ಬರುತ್ತದೆ. ರಾಹುಲ್ ದ್ರಾವಿಡ್‌ಗೆ ಹಾರ್ದಿಕ ಅಭಿನಂದನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.