ADVERTISEMENT

ಗಣಿಗಾರಿಕೆ ಬೇಡವೇ ಬೇಡ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಪಶ್ಚಿಮ ಘಟ್ಟದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಕೇಂದ್ರ ಉಕ್ಕು ಖಾತೆಯ ಕಾರ‌್ಯದರ್ಶಿಗಳು ಮಾಡಿರುವ ಶಿಫಾರಸು ಜನದ್ರೋಹದ್ದು ಮಾತ್ರವಲ್ಲ, ಜೀವವಿರೋಧಿ ಕೂಡಾ ಆಗಿದೆ.
 
ಕರ್ನಾಟಕವೂ ಸೇರಿದಂತೆ ಮಹಾರಾಷ್ಟ್ರದಿಂದ ತಮಿಳುನಾಡುವರೆಗೆ ವ್ಯಾಪಿಸಿರುವ ಪಶ್ಚಿಮ ಘಟ್ಟ ಅಪರೂಪದ ಪ್ರಾಣಿ, ಪಕ್ಷಿ ಮತ್ತು ಸಸ್ಯಗಳನ್ನೊಳಗೊಂಡ ಜೀವಿ ವೈವಿಧ್ಯದ ತಾಣ. ಅಲ್ಲಿನ ಪ್ರಕೃತಿಗೆ ಹಾನಿ ಉಂಟು ಮಾಡುವ ಗಣಿಗಾರಿಕೆ ಮತ್ತಿತರ ಅಭಿವೃದ್ಧಿ ಚಟುವಟಿಕೆ ನಡೆಸಬಾರದೆಂದು ಡಾ.ಮಾಧವ ಗಾಡ್ಗೀಳ್ ಸಮಿತಿ ಶಿಫಾರಸು ಮಾಡಿದೆ.
 
ಪಶ್ಚಿಮಘಟ್ಟದ ಅಧ್ಯಯನ ನಡೆಸಿ ವರದಿ ನೀಡಲು ಈ ಸಮಿತಿಯನ್ನು ನೇಮಕ ಮಾಡಿದ್ದು ಕೇಂದ್ರ ಪರಿಸರ ಖಾತೆ. ಈಗ ಅದೇ ಖಾತೆಯ ಕಾರ‌್ಯದರ್ಶಿಗಳು ಸಮಿತಿಯ ಶಿಫಾರಸಿಗೆ ವಿರುದ್ಧವಾದ ವರದಿಯನ್ನು ಯೋಜನಾ ಆಯೋಗಕ್ಕೆ ಸಲ್ಲಿಸಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.
 
`ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ~ (ಐಸಿಎಫ್‌ಆರ್‌ಇ) ನೀಡಿರುವ ವರದಿಯನ್ನು ಉಕ್ಕು ಸಚಿವಾಲಯದ ಕಾರ‌್ಯದರ್ಶಿಗಳು ತನ್ನ ಶಿಫಾರಸಿಗೆ ಬಳಸಿಕೊಂಡಿದ್ದಾರೆ.
 
ಈ ಸಂಸ್ಥೆ ನೇಮಕಗೊಂಡಿರುವುದು ಬಳ್ಳಾರಿಯಲ್ಲಿನ ಅಕ್ರಮ ಗಣಿಗಾರಿಕೆಯ ಅಧ್ಯಯನಕ್ಕೆ. ಆದರೆ ಅದು ತನ್ನ ಕಾರ್ಯವ್ಯಾಪ್ತಿಯನ್ನು ಮೀರಿ ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆಯ ಸಾಧ್ಯತೆಯ ಅಧ್ಯಯನಕ್ಕೆ ಸಲಹೆ ನೀಡಿದೆ.

ಮೇಲ್ನೋಟಕ್ಕೆ ಈ ಬೆಳವಣಿಗೆಗಳಿಗೆ ಪರಸ್ಪರ ಸಂಬಂಧ ಇಲ್ಲದಂತೆ ಕಂಡು ಬಂದರೂ ಇವೆಲ್ಲದರ ಹಿಂದೆ ಗಣಿ ಮಾಫಿಯಾದ ಸೂತ್ರಬದ್ಧ ಕೈವಾಡ ಇರುವುದನ್ನು ತಳ್ಳಿಹಾಕುವಂತಿಲ್ಲ.

ಗಣಿಗಾರಿಕೆ ಎಂದರೆ ಅಕ್ರಮ ಎಂದೇ ಅರ್ಥ ಎನ್ನುವಂತಾಗಿದೆ. ಇದರಿಂದ ಆಗಿರುವ ಅನಾಹುತಗಳೇನು ಎಂಬುದು ಸರ್ಕಾರಕ್ಕೆ ಗೊತ್ತಿಲ್ಲದ ಸಂಗತಿಯೇನಲ್ಲ. ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತರು ವಿವರವಾದ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳನ್ನೊಳಗೊಂಡ ದುಷ್ಟಕೂಟ ಕರ್ನಾಟಕದ ಖನಿಜ ಸಂಪತ್ತನ್ನು ಹಾಡಹಗಲೇ ಕೊಳ್ಳೆ ಹೊಡೆಯುವುದನ್ನು ತಡೆಯಲು ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕಾಯಿತು.
 
ಅಷ್ಟರಲ್ಲಿ ಗಣಿ ಲೂಟಿಕೋರರು ಪ್ರಕೃತಿಯನ್ನು ಮಾತ್ರವಲ್ಲ, ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳನ್ನು ಹಾಳುಗೆಡಹಿ ಆಗಿ ಹೋಗಿತ್ತು. ಇದರ ಫಲವಾಗಿ ರಾಜ್ಯದ ಮಾಜಿ ಸಚಿವರೊಬ್ಬರು ಈಗಲೂ ಜೈಲಲ್ಲಿದ್ದಾರೆ. ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ ಕೂಡಾ ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ನೀಡಿದೆ.

ಪಶ್ಚಿಮ ಘಟ್ಟದ ಭಾಗವೇ ಆಗಿರುವ ಕುದುರೆಮುಖದಲ್ಲಿ ಗಣಿಗಾರಿಕೆಯನ್ನು ಮುಚ್ಚುವಂತೆ 2005ರಲ್ಲಿಯೇ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅಲ್ಲಿ ನಡೆದಿರುವ ಗಣಿಗಾರಿಕೆಯಿಂದ ಪ್ರಕೃತಿಗೆ ಹಾನಿ ಉಂಟಾಗಿರುವುದು ಮಾತ್ರವಲ್ಲ, ಭದ್ರಾ ನದಿಯಲ್ಲಿ ಹೂಳು ತುಂಬಿ ನೀರು ಕೂಡಾ ವಿಷವಾಗಿ ಹೋಗಿತ್ತು.
 

ಗಣಿಗಾರಿಕೆಯ ದುಷ್ಪರಿಣಾಮಕ್ಕೆ ಬೇರೆ ಜೀವಂತ ಸಾಕ್ಷಿ ಏನು ಬೇಕು? ಈ ನಗ್ನಸತ್ಯಗಳು ಕಣ್ಣ ಮುಂದಿದ್ದರೂ ಅವುಗಳನ್ನೆಲ್ಲ ನಿರ್ಲಕ್ಷಿಸಿರುವ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಕುರುಡರಂತೆ ಶಿಫಾರಸುಗಳನ್ನು ಮಾಡಿರುವುದು ಬೇಜವಾಬ್ದಾರಿತನದ ಪರಮಾವಧಿ.

ಕೇಂದ್ರ ಸರ್ಕಾರ ಈ ಶಿಫಾರಸನ್ನು ಮೊದಲು ಕಸದ ಬುಟ್ಟಿಗೆ ಎಸೆಯಬೇಕು. ಯಾವುದೇ ಕಾರಣಕ್ಕೂ ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆಯಂತಹ ಜೀವವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಕೂಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT