ADVERTISEMENT

ಜನಪರ ಆಡಳಿತ: ಮೈತ್ರಿ ಸರ್ಕಾರದ ಆದ್ಯತೆಯಾಗಲಿ

​ಪ್ರಜಾವಾಣಿ ವಾರ್ತೆ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ಜನಪರ ಆಡಳಿತ: ಮೈತ್ರಿ ಸರ್ಕಾರದ ಆದ್ಯತೆಯಾಗಲಿ
ಜನಪರ ಆಡಳಿತ: ಮೈತ್ರಿ ಸರ್ಕಾರದ ಆದ್ಯತೆಯಾಗಲಿ   

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ನಂತರ ಸೃಷ್ಟಿಯಾಗಿದ್ದ ರಾಜಕೀಯ ಗೊಂದಲಗಳು ಸದ್ಯಕ್ಕೆ ಬಗೆಹರಿದಿವೆ. ಜೆಡಿಎಸ್– ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ರಾಜಕೀಯವನ್ನು ಮರೆತು ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ನೀಡಲು ಇದು ಸಕಾಲ. ಎಲ್ಲ ಜನಪ್ರತಿನಿಧಿಗಳೂ ಈಗ ಜನಪರ ಆಡಳಿತದತ್ತ ಮುಖ ಮಾಡಬೇಕಿದೆ.

ಸಂಖ್ಯಾಬಲದ ಆಟ ಜಗ್ಗಾಟವನ್ನು ಕೊನೆಗಾಣಿಸಿ ಜನರ ಆಶೋತ್ತರಗಳನ್ನು ಈಡೇರಿಸುವ ಕಡೆಗೆ ಆದ್ಯತೆ ನೀಡಬೇಕಾಗಿದೆ. ಮೈತ್ರಿ ಸರ್ಕಾರವನ್ನು ಮುನ್ನಡೆಸುವುದು ಹಗ್ಗದ ಮೇಲಿನ ನಡಿಗೆ. ಇದಕ್ಕೆ ಪಾಲುದಾರ ಪಕ್ಷಗಳ ನಡುವೆ ಹೊಂದಾಣಿಕೆ ಅಗತ್ಯ.

ಇದಕ್ಕಾಗಿ ಸಮನ್ವಯ ಸಮಿತಿ ರಚಿಸುವುದಾಗಿ ಉಭಯ ಪಕ್ಷಗಳ ಮುಖಂಡರೂ ಹೇಳಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಈ ಎರಡೂ ಪಕ್ಷಗಳ ಮುಖಂಡರು ಪರಸ್ಪರ ಆರೋಪ– ಪ್ರತ್ಯಾರೋಪದಲ್ಲಿ ತೊಡಗಿದ್ದರಾದರೂ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಸಮಿತಿಗೆ ನೇಮಕಗೊಳ್ಳುವ ಸದಸ್ಯರು ಎಷ್ಟರ ಮಟ್ಟಿಗೆ ಹೊಂದಾಣಿಕೆಯ ಸ್ವಭಾವದವರಾಗಿರುತ್ತಾರೆ ಎಂಬುದು ಮುಖ್ಯ.

ADVERTISEMENT

ಸರ್ಕಾರದ ಯಶಸ್ವಿ ಕಾರ್ಯನಿರ್ವಹಣೆಯಲ್ಲಿ ಇದು ಗಣನೀಯ ಪಾತ್ರ ವಹಿಸಲಿದೆ. ಚುನಾವಣೆಗೆ ಮೊದಲು ಎರಡೂ ಪಕ್ಷಗಳು ಪ್ರತ್ಯೇಕ ಪ್ರಣಾಳಿಕೆ ಪ್ರಕಟಿಸಿದ್ದವು. ಅವುಗಳಲ್ಲಿ ಕೆಲವು ಸಮಾನ ಅಂಶಗಳಿದ್ದವು.

ಈಗ, ಎರಡೂ ಪ್ರಣಾಳಿಕೆಗಳಲ್ಲಿರುವ ಜನಪರ ಅಂಶಗಳನ್ನು ಒಗ್ಗೂಡಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಬೇಕಾದ ಜವಾಬ್ದಾರಿಯೂ ಎರಡೂ ಪಕ್ಷಗಳ ವರಿಷ್ಠರ ಮೇಲಿದೆ. ಮೈತ್ರಿ ಸರ್ಕಾರ ಯಶಸ್ವಿಯಾಗಲು ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ಕ್ಕೆ ಎರಡೂ ಪಕ್ಷಗಳು ಬದ್ಧವಾಗಿ ಇರಬೇಕಾದುದು ಅನಿವಾರ್ಯ. ಜನರ ಕಲ್ಯಾಣವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಉಭಯ ಪಕ್ಷಗಳ ಮುಖಂಡರು ಮುಂದುವರಿಯಬೇಕಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡಿದ್ದರೂ ರಾಜ್ಯದಲ್ಲಿ ಇನ್ನು ಮುಂದೆ ನಡೆಯುವ ಚುನಾವಣೆಗಳಲ್ಲಿ ಅವು ಹೇಗೆ ನಡೆದುಕೊಳ್ಳುತ್ತವೆ ಎನ್ನುವುದು ಮುಖ್ಯವಾಗುತ್ತದೆ.

ತಕ್ಷಣಕ್ಕೆ ಈಗ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಜಯನಗರ ಕ್ಷೇತ್ರಗಳ ಚುನಾವಣೆಗಳು ಇವೆ. ಈ ಎರಡೂ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳೂ ಇದ್ದಾರೆ. ಇಂತಹ ಪರಿಸ್ಥಿತಿಯನ್ನು ಮೈತ್ರಿಕೂಟ ಹೇಗೆ ಎದುರಿಸುತ್ತದೆ ಎನ್ನುವುದೂ ಮುಖ್ಯ. ಜೊತೆಗೆ ಮೂವರು ಸಂಸತ್ ಸದಸ್ಯರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಆ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವುದು ಅನಿವಾರ್ಯ.

ಇಲ್ಲಿ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಗಳು ಕಣಕ್ಕೆ ಇಳಿಯುತ್ತಾರೆಯೇ ಎನ್ನುವ ಕುತೂಹಲ ಕೂಡ ಇದೆ. 2019ರ ಆರಂಭದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ದೇಶದಲ್ಲಿ ಬಿಜೆಪಿಗೆ ಪರ್ಯಾಯವಾದ ಮೈತ್ರಿಕೂಟವನ್ನು ರಚಿಸುವ ಯತ್ನಗಳು ಆರಂಭವಾಗಿವೆ. ಕರ್ನಾಟಕದ ಮೈತ್ರಿಕೂಟ ಸರ್ಕಾರ ರಚನೆಯು ರಾಷ್ಟ್ರಮಟ್ಟದ ಮೈತ್ರಿಕೂಟ ರಚನೆಗೂ ಮುನ್ನುಡಿ ಬರೆಯುವ ಲಕ್ಷಣಗಳು ಇವೆ.

ಅದರ ಭಾಗವಾಗಿಯೇ, ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ದೇಶದ ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡುವುದಾಗಿ ಎಚ್.ಡಿ. ಕುಮಾರಸ್ವಾಮಿ  ಹೇಳಿದ್ದಾರೆ. ಇದು ಒಳ್ಳೆಯ ಸೂಚನೆ. ಮೈತ್ರಿಕೂಟದ ಸರ್ಕಾರವು ಕರ್ನಾಟಕ ಅಥವಾ ಭಾರತಕ್ಕೆ ಹೊಸದೇನೂ ಅಲ್ಲ. ಈ ಹಿಂದೆಯೂ ಹಲವಾರು ಬಾರಿ ಇಂತಹ ಪ್ರಯತ್ನಗಳು ನಡೆದಿವೆ. ಮುಂದೆಯೂ ನಡೆಯಬಹುದು.

ಆದರೆ ಮೈತ್ರಿ ಸರ್ಕಾರ ಸಂಪೂರ್ಣವಾಗಿ ಯಶಸ್ಸು ಕಂಡಿದ್ದು ಕಡಿಮೆ. ಪರಸ್ಪರ ಅಪನಂಬಿಕೆ, ಪ್ರತಿಷ್ಠೆ, ರಾಜಕೀಯ ಕಾರಣಕ್ಕಾಗಿ ಒಬ್ಬರನ್ನೊಬ್ಬರು ಕಾಲೆಳೆಯುವ ಪ್ರವೃತ್ತಿಯಿಂದ ಮೈತ್ರಿ ಸರ್ಕಾರಗಳು ಬಿದ್ದು ಹೋಗಿವೆ. ಈಗ ಅಂತಹ ಪರಿಸ್ಥಿತಿ ಬಾರದಿರಲಿ. ಎರಡೂ ಪಕ್ಷಗಳು ಸಂಕುಚಿತ ಮನೋಭಾವವನ್ನು ಬಿಟ್ಟು ಜನರ ಕಲ್ಯಾಣದತ್ತಲೇ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದರೆ ಹಗ್ಗದ ನಡಿಗೆಯೂ ಕಷ್ಟವೇನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.