ಚುನಾವಣೆಗಳ ಸಂದರ್ಭಕ್ಕೆ ಸರಿಯಾಗಿ ದೇಶದ ಎಲ್ಲೆಡೆ ಜಾತಿ ಸಮಾವೇಶಗಳ ಭರಾಟೆಯೂ ಆರಂಭವಾಗುತ್ತದೆ. ಭಾರತದ ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ಜಾತಿಗಿರುವ ಮಹತ್ವವನ್ನು ಅರಿತವರಿಗೆ ಇದರಲ್ಲಿ ಆಶ್ಚರ್ಯ ಹುಟ್ಟಿಸುವಂಥದ್ದೇನೂ ಇಲ್ಲ. ಸಂವಿಧಾನ, ಹುಟ್ಟನ್ನು ಆಧಾರವಾಗಿಟ್ಟುಕೊಂಡ ಜಾತಿ ಅಸಮಾನತೆಯನ್ನು ಗುರುತಿಸಿದೆ.
ಹಾಗೆಯೇ ಅದನ್ನು ನಿರ್ಮೂಲನ ಮಾಡುವುದಕ್ಕಾಗಿ ಧನಾತ್ಮಕ ತಾರತಮ್ಯವನ್ನು ಏರ್ಪಡಿಸುವ ಮೀಸಲಾತಿಯಂಥ ಸವಲತ್ತನ್ನೂ ಒದಗಿಸಿದೆ. ಇದರಾಚೆಗಿನ ಕೆಲವು ಸಾಮಾಜಿಕ ವಾಸ್ತವಗಳೂ ನಮ್ಮ ಮುಂದಿವೆ. ನಿರ್ದಿಷ್ಟ ಸಮುದಾಯವೊಂದು ತನ್ನ ರಾಜಕೀಯ ಅಭೀಪ್ಸೆಗಳನ್ನು ಮುಂದಿಡುವುದಕ್ಕಾಗಿ ಸಂಘಟಿತ ಪ್ರಯತ್ನ ನಡೆಸಬೇಕಾಗುತ್ತದೆ.
ಈ ಬಗೆಯ ಸಂಘಟನೆಗೆ ಜಾತಿಯೊಂದು ಕಾರಣವಾಗುವುದು ಸಹಜ ಬೆಳವಣಿಗೆಯೇ. ವರ್ತಮಾನದಲ್ಲಿ ಜಾತಿಯ ಸಾಮಾಜಿಕ ಸ್ವರೂಪವಿರುವುದೇ ಅದರ ಸಂಘಟಿತ ರಾಜಕೀಯ ಅನನ್ಯತೆಯಲ್ಲಿ. ಈ ಎಲ್ಲಾ ಆಯಾಮಗಳನ್ನು ಒಟ್ಟಾಗಿ ಪರಿಗಣಿಸಿದಾಗ ಒಂದು ಸಾಮೂಹಿಕ ಚೌಕಾಸಿಯ ಮಾರ್ಗವಾಗಿ ಜಾತಿಯೆಂಬ ಅನನ್ಯತೆಯಡಿಯಲ್ಲಿ ಸಂಘಟಿತರಾಗುವುದನ್ನು ಪೂರ್ಣವಾಗಿ ತಪ್ಪು ಎನ್ನಲು ಸಾಧ್ಯವಿಲ್ಲ. ಆದರೆ ಚುನಾವಣೆಗಳ ಕಾಲಕ್ಕೆ ನಡೆಯುವ ಜಾತಿ ಸಮಾವೇಶಗಳು ಇಷ್ಟು ಸರಳವಲ್ಲ.
ಕರ್ನಾಟಕದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ನಡೆದ ಜಾತಿ ಸಮಾವೇಶಗಳನ್ನು ನೋಡಿದರೂ ಇದು ಅರ್ಥವಾಗುತ್ತದೆ. ಈ ಜಾತಿಗಳೆಲ್ಲವೂ ವಿಶಾಲಾತ್ಮಕ ನೆಲೆಯಲ್ಲಿ ಹಿಂದುಳಿದವು ಇಲ್ಲವೇ ಪರಿಶಿಷ್ಟ ಎನ್ನಬಹುದಾದ ವರ್ಗೀಕರಣದಲ್ಲಿ ಬರುವಂಥವು. ಆದರೆ ಆ ವರ್ಗದೊಳಗಿನ ಇತರ ಜಾತಿಗಳ ಜೊತೆ ಹೋಲಿಸಿ ನೋಡಿದಾಗ ಪ್ರಬಲವಾಗಿರುವಂಥವು. ಈ ವ್ಯತ್ಯಾಸವೇ ಚುನಾವಣಾ ಕಾಲದಲ್ಲಿ ‘ಜಾತಿ ಸಂಘಟನೆ’ಯ ಅಪಾಯವನ್ನು ವಿವರಿಸುತ್ತದೆ.
ಸಂವಿಧಾನ, ಮೀಸಲಾತಿಯನ್ನು ಒದಗಿಸುವಾಗ ಸಾಮಾಜಿಕ ಅಸಮಾನತೆಯ ಪ್ರಮಾಣಕ್ಕನುಗುಣವಾಗಿ ಜಾತಿಗಳನ್ನು ಹಲವು ಗುಂಪುಗಳಲ್ಲಿ ವರ್ಗೀಕರಿಸಿದೆ. ಈ ಗುಂಪುಗಳ ಒಳಗಿರುವ ಕೆಲವು ಜಾತಿಗಳ ಸಂಖ್ಯಾಬಲ ಬಹಳ ದೊಡ್ಡದಿದ್ದರೆ ಇನ್ನು ಕೆಲವು ಜಾತಿಗಳಲ್ಲಿರುವವರ ಸಂಖ್ಯೆ ಬಹಳ ಸಣ್ಣದು. ಈ ಗುಂಪುಗಳ ಒಳಗಿರುವ ಜಾತಿಗಳು ಪ್ರತ್ಯೇಕ ಅನನ್ಯತೆಯನ್ನು ಪ್ರತಿಪಾದಿಸುವುದರ ಹಿಂದಿನ ಕಾರಣಗಳು ಎರಡು. ಮೊದಲನೆಯದ್ದು ತಮ್ಮ ಅರ್ಹತೆಯಷ್ಟು ಪ್ರಾತಿನಿಧ್ಯ ದೊರೆತಿಲ್ಲ ಎಂಬ ಕೊರಗು.
ಎರಡನೆಯದ್ದು ತಮ್ಮ ಸಂಖ್ಯಾಬಲವನ್ನು ಬಳಸಿಕೊಂಡು ಗುಂಪಿನೊಳಗಿರುವ ಇತರರನ್ನು ಬದಿಗೊತ್ತುವ ಪ್ರಯತ್ನ. ಈ ಎರಡೂ ಬಗೆಯ ಪ್ರಯತ್ನಗಳಲ್ಲಿ ತೊಡಗಿಕೊಳ್ಳುವ ಜಾತಿಗಳಿಗೂ ಸಂಘಟಿತ ಒತ್ತಡ ಹೇರುವಷ್ಟು ಸಂಖ್ಯಾಬಲವಿರುತ್ತದೆ. ಈ ಕಾರಣದಿಂದಾಗಿಯೇ ಅವು ಕೆಲ ಮಟ್ಟಿಗಿನ ‘ಲಾಭ’ವನ್ನೂ ಪಡೆಯುತ್ತವೆ. ಆದರೆ ಈ ಬಗೆಯ ಒತ್ತಡ ಹೇರಲು ಸಾಧ್ಯವೇ ಇಲ್ಲದಿರುವ ಸಣ್ಣ–ಪುಟ್ಟ ಜಾತಿಗಳ ಸಂಖ್ಯೆಯೂ ಸಾಕಷ್ಟು ದೊಡ್ಡದು. ಇವುಗಳು ಅನುಭವಿಸುತ್ತಿರುವ ರಾಜಕೀಯ ಪ್ರಾತಿನಿಧ್ಯದ ಕೊರತೆಯೇನೂ ಸಣ್ಣದಲ್ಲ. ಆದರೆ ದೊಡ್ಡ ಜಾತಿಗಳ ‘ಭಾರೀ ಸಮಾವೇಶ’ಗಳ ನೆರಳಿನಲ್ಲಿ ಸಣ್ಣ ಜಾತಿಗಳ ಧ್ವನಿ ಸಣ್ಣದಾಗಿಯೂ ಕೇಳಿಸದಂತಾಗುತ್ತಿದೆ.
ಮತಗಳ ಪ್ರಮಾಣಕ್ಕನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳುವ ರಾಜಕೀಯ ಪಕ್ಷಗಳು ಕೊನೆಗೂ ಮಣೆ ಹಾಕುವುದು ಸಂಖ್ಯಾಬಲಕ್ಕೇ. ಕೇಂದ್ರದಿಂದ ರಾಜ್ಯದ ತನಕದ ಅಧಿಕಾರಾರೂಢ ರಾಜಕಾರಣಿಗಳಿಂದ ಹೆಚ್ಚುವರಿ ಮೀಸಲಾತಿ ಸವಲತ್ತಿನ ಭರವಸೆ ಪಡೆಯುತ್ತಿರುವ ಜಾತಿಗಳೆಲ್ಲವೂ ವೋಟಿನ ಬಲವನ್ನು ಹೊಂದಿವೆ. ಈ ಪ್ರಕ್ರಿಯೆ ಒಟ್ಟರ್ಥದಲ್ಲಿ ಮೀಸಲಾತಿಯನ್ನು ಅಪ್ರಸ್ತುತಗೊಳಿಸುವುದರ ಜೊತೆಗೆ ಅಂಚಿನಲ್ಲಿ ಉಳಿದ ಜಾತಿಗಳು ಸದಾ ಅನಾಥ ಪ್ರಜ್ಞೆಯಲ್ಲಿ ಕೊರಗುವಂತೆ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.