ADVERTISEMENT

ಜೈಲು ಶಿಕ್ಷೆ ಆಗಲಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:35 IST
Last Updated 22 ಮಾರ್ಚ್ 2012, 19:35 IST


ಪರೀಕ್ಷೆಗೆ ಮೊದಲೇ ಪ್ರಶ್ನೆ ಪತ್ರಿಕೆಗಳು ಬಯಲಿಗೆ ಬರುವುದರಿಂದ ಪರೀಕ್ಷೆಗಳ ಮಹತ್ವ ಮತ್ತು ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಘಟ್ಟವಾದ ಪಿಯು ಹಂತದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಅವರ ಜೊತೆ ಪರೀಕ್ಷಾ ಸಿದ್ಧತೆಯಲ್ಲಿ ಸಹಕರಿಸುವ ಪೋಷಕರಿಗೂ ತೀವ್ರ ಮಾನಸಿಕ ಆಘಾತ ನೀಡುವ ವಿದ್ಯಮಾನ. ಪಿಯು ಪರೀಕ್ಷೆಗಳಿಗೆ ಎರಡು ವರ್ಷ ಕಾಲ ಸತತ ಪರಿಶ್ರಮ ಹಾಕಿ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಬಯಲಾದರೆ ಮಾನಸಿಕ ಖಿನ್ನತೆಗೂ ಕಾರಣವಾಗಬಲ್ಲದು.

 ಪರೀಕ್ಷೆ ಎದುರಿಸಲು ಸನ್ನದ್ಧರಾದ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಬಹಿರಂಗದ ಕಾರಣ ಪರೀಕ್ಷೆ ಮುಂದಕ್ಕೆ ಹೋದರೂ ಮಾನಸಿಕ ತೊಳಲಾಟ ಅನುಭವಿಸುತ್ತಾರೆ.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದಕ್ಕೆ ಸಾಕಷ್ಟು ದಿಟ್ಟ ಕ್ರಮಗಳನ್ನು ಈಚಿನ ವರ್ಷಗಳಲ್ಲಿ ಕೈಗೊಂಡಿರುವ ರಾಜ್ಯದ ಪದವಿಪೂರ್ವ ಶಿಕ್ಷಣ ಇಲಾಖೆಗೆ ಈ ಸಲ ಗಣಿತ ಮತ್ತು ಭೌತಶಾಸ್ತ್ರದ ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣಗಳಿಂದ ಕೆಟ್ಟ ಹೆಸರು ಬರುವಂತೆ ಆಗಿದೆ.

ಪರೀಕ್ಷೆ ನಿರ್ವಹಣೆಯಲ್ಲಿ ಸುಧಾರಣೆ ಮಾಡಿರುವುದರಿಂದ ಯಾವ ಹಂತದಲ್ಲಿ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿವೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಲ್ಲ.

ADVERTISEMENT

ಈಗಾಗಲೇ ಪ್ರಕರಣವನ್ನು ಕೈಗೆತ್ತಿಕೊಂಡ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಕಾರ್ಯೋನ್ಮುಖರಾಗಿರುವುದು ಸ್ವಾಗತಾರ್ಹ. ತನಿಖೆ ನಿಷ್ಪಕ್ಷಪಾತವಾಗಿ ನಡೆದು ತಪ್ಪಿತಸ್ಥರು ಕಾನೂನು ಕ್ರಮಕ್ಕೆ ಒಳಪಡುವಂತೆ ಮಾಡದಿದ್ದರೆ ಪ್ರಶ್ನೆಪತ್ರಿಕೆ ಸೋರಿಕೆಯ ಪಿಡುಗನ್ನು ನಿವಾರಿಸುವುದು ಕಷ್ಟ.

ಪಿಯು ಪರೀಕ್ಷೆ ವೃತ್ತಿ ಶಿಕ್ಷಣದ ಅವಕಾಶಗಳನ್ನು ತೆರೆಯುವ ಮಹತ್ವದ ಶೈಕ್ಷಣಿಕ ಘಟ್ಟ. ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪ್ರವೇಶಕ್ಕೆ ಅರ್ಹತೆಯನ್ನು ಇಲ್ಲಿನ ಫಲಿತಾಂಶ ನಿರ್ಧರಿಸುವುದರಿಂದ ಉತ್ತಮ ಫಲಿತಾಂಶ ಬರುವುದಕ್ಕೆ ವಿದ್ಯಾರ್ಥಿಗಳಂತೆ, ಪ್ರತಿಷ್ಠಿತ ಖಾಸಗಿ ಕಾಲೇಜುಗಳೂ ಕಸರತ್ತು ನಡೆಸುತ್ತವೆ.

ಪರೀಕ್ಷಾ ಕೇಂದ್ರಗಳ ಉಸ್ತುವಾರಿ ಹೊತ್ತವರ ನೆರವಿಲ್ಲದೆ ಪ್ರಶ್ನೆಪತ್ರಿಕೆಗಳು ಬಹಿರಂಗವಾಗುವ ಸಾಧ್ಯತೆಯೇ ಇಲ್ಲ. ಇದರಲ್ಲಿ ಇಲಾಖೆಯ ಸಿಬ್ಬಂದಿಯ ಪಾತ್ರವನ್ನೂ ಅಲ್ಲಗಳೆಯುವಂತಿಲ್ಲ.

ಪಿಯು ಪರೀಕ್ಷೆಗಳ ಸಿದ್ಧತೆಗೆ ಭಾರಿ ಮೊತ್ತದ ಟ್ಯೂಷನ್ ಪಡೆಯುವ ಖಾಸಗಿ ಟ್ಯುಟೋರಿಯಲ್‌ಗಳಿಗೂ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಆಸಕ್ತಿ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ನಡೆಯುವುದು ಅವಶ್ಯಕ. ಸಂಶಯದ ಮೇಲೆ ಕೆಲವರನ್ನು ಬಂಧಿಸಿ, ಹಲವು ಖಾಸಗಿ ಕಾಲೇಜುಗಳಿಗೆ ನೋಟಿಸ್ ನೀಡಿ, ಪರೀಕ್ಷಾ ಕೇಂದ್ರಗಳನ್ನು ರದ್ದುಪಡಿಸಿದರೆ ಈ ಸಮಸ್ಯೆ ನಿಲ್ಲುವುದಿಲ್ಲ.

ಅವರನ್ನು ಕಾನೂನು ಪ್ರಕಾರ ವಿಚಾರಣೆಗೆ ಒಳಪಡಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ತಪ್ಪು ಮಾಡಿದವರನ್ನು ವರ್ಗ ಮಾಡುವುದೇ ಶಿಕ್ಷೆ ನೀಡಿದಂತೆ ಎಂಬುದು ಈಗ ಜಾರಿಯಲ್ಲಿರುವ ಪದ್ಧತಿ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಇಲಾಖೆ ಸಿಬ್ಬಂದಿ ಪಾತ್ರ ವಹಿಸಿದ್ದರೆ ಅವರನ್ನು ವರ್ಗಾವಣೆ ಮಾಡುವುದೇ ಶಿಕ್ಷೆಯಲ್ಲ.

ಪಿಯುಸಿ ಮಾತ್ರವಲ್ಲ, ಯಾವುದೇ ಪಬ್ಲಿಕ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಜೈಲುಶಿಕ್ಷೆಗೆ ಅರ್ಹವಾದ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಕಾನೂನು ತಿದ್ದುಪಡಿಗೂ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಯಾವ ಪರೀಕ್ಷೆಗಳಿಗೂ ಮಹತ್ವ ಉಳಿಯುವುದಿಲ್ಲ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.