ADVERTISEMENT

ತೆರಿಗೆ ಸುಧಾರಣೆಗೆ ಸಕಾಲ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಕೇಂದ್ರ ಸರ್ಕಾರದ ಜತೆಗಿನ 11 ಸಾವಿರ ಕೋಟಿಗಳ ಆದಾಯ ತೆರಿಗೆ ವ್ಯಾಜ್ಯದಲ್ಲಿ ವೊಡಾಫೋನ್ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್ ಪರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅನೇಕ ಕಾರಣಗಳಿಗೆ ಮಹತ್ವ ಪಡೆದಿದೆ.

ದೇಶದ ಎರಡನೇ ಅತಿದೊಡ್ಡ ದೂರಸಂಪರ್ಕ ಸೇವಾ ಸಂಸ್ಥೆ ವೊಡಾಫೋನ್‌ಗೆ ಕಾನೂನು ಸಮರದಲ್ಲಿ ದೊರೆತಿರುವ ಈ ಗೆಲುವಿನಿಂದ ವಿದೇಶಿ ಬಂಡವಾಳ ಹೂಡಿಕೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ. ಆದರೆ, ತೆರಿಗೆ ವಂಚಿಸಿದ ಕಪ್ಪು ಹಣವನ್ನು ವಿದೇಶಗಳಲ್ಲಿ ಠೇವಣಿ ಇಡುವುದರ ವಿರುದ್ಧದ ಸರ್ಕಾರದ ಹೋರಾಟಕ್ಕೆ ತೀವ್ರ ಹಿನ್ನಡೆಯೂ ಉಂಟಾಗಲಿದೆ.

ಎರಡು ವಿದೇಶಿ ಸಂಸ್ಥೆಗಳ ಮಧ್ಯೆ ಷೇರುಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕೇಮನ್ ಐಲ್ಯಾಂಡ್‌ನಲ್ಲಿ ನಡೆದ ವಹಿವಾಟು, ಭಾರತದ ತೆರಿಗೆ ಕಾಯ್ದೆಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳು ವಿಶ್ಲೇಷಿಸಿದ್ದಾರೆ. ಈ ಪ್ರಕರಣದಲ್ಲಿ ಕೇವಲ ಷೇರುಗಳನ್ನು ಖರೀದಿಸಲಾಗಿದೆಯೇ ಹೊರತು ಸಂಪತ್ತಿನ ಮಾರಾಟವಲ್ಲ ಎಂದೂ ಕೋರ್ಟ್ ವ್ಯಾಖ್ಯಾನಿಸಿದೆ.
 
ಹಚಿಸನ್ಸ್ ಸಂಸ್ಥೆಯು ಎಸ್ಸಾರ್ ಜತೆಗಿನ ಜಂಟಿ ಉದ್ದಿಮೆಯಲ್ಲಿ ಹೊಂದಿರುವ ಷೇರುಗಳನ್ನು ವೊಡಾಫೋನ್ ಖರೀದಿಸಿದ ಪ್ರಕರಣದಲ್ಲಿ ತೆರಿಗೆ ವಸೂಲಿ ಮಾಡುವಂತಿಲ್ಲ ಎನ್ನುವ ತೀರ್ಪು, ದೇಶದ ತೆರಿಗೆ ಕಾನೂನು - ಕಟ್ಟಲೆಗಳ ಪರಾಮರ್ಶೆಗೂ ಅವಕಾಶ ಕಲ್ಪಿಸಿದೆ.

ಜತೆಗೆ ಆದಾಯ ತೆರಿಗೆ ಕಾಯ್ದೆಯಲ್ಲಿನ ದೋಷಗಳಿಗೂ ಕನ್ನಡಿ ಹಿಡಿದಿದೆ. ಇದೇ ಬಗೆಯ ಇತರ ವ್ಯಾಜ್ಯಗಳಿಗೂ ಈ ತೀರ್ಪು ಪೂರ್ವ ನಿದರ್ಶನವಾಗಲಿರುವುದರಿಂದ ಬೊಕ್ಕಸಕ್ಕೆ ಬರಬೇಕಾದ ವರಮಾನಕ್ಕೂ ಖೋತಾ ಬೀಳಲಿದೆ. ತೆರಿಗೆ ಕಾಯ್ದೆ ಕುರಿತು ಕೋರ್ಟ್ ವ್ಯಾಖ್ಯಾನದ ಹಿನ್ನೆಲೆಯಲ್ಲಿ, ಸೂಕ್ತ ತಿದ್ದುಪಡಿ ತರುವ ಅಗತ್ಯ ಹೆಚ್ಚಿದೆ.
 
ಜಾಗತೀಕರಣದ ಸದ್ಯದ ದಿನಗಳಲ್ಲಿ ದೇಶದಲ್ಲಿ ವಹಿವಾಟು ನಡೆಸುವ ಸಂಸ್ಥೆಗಳ ಗಡಿಯಾಚೆಗಿನ ವಾಣಿಜ್ಯ ಚಟುವಟಿಕೆಗಳಿಗೂ ತೆರಿಗೆ ವಿಧಿಸುವ ತಿದ್ದುಪಡಿಗಳನ್ನು ಜಾರಿಗೆ ತರುವುದರ ಅನಿವಾರ್ಯತೆ ಈಗ ಎದುರಾಗಿದೆ.

ನ್ಯಾಯಬದ್ಧವಾಗಿ ಬರಬೇಕಾದ ತೆರಿಗೆ ವಸೂಲಿಗೆ ಸರ್ಕಾರವು ಆದಾಯ ತೆರಿಗೆ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕಾಗಿದೆ. ಮುಂದಿನ ವರ್ಷದ ಹಣಕಾಸು ವರ್ಷದಿಂದ ಜಾರಿಗೆ ಬರಲಿರುವ  `ನೇರ ತೆರಿಗೆ ನೀತಿ ಸಂಹಿತೆ~ (ಡಿಟಿಸಿ) ಮಸೂದೆಯಲ್ಲಿ, ಸಾಗರೋತ್ತರ ವಹಿವಾಟುಗಳನ್ನೂ ಆದಾಯ ತೆರಿಗೆ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ.

ಹೀಗಾಗಿ ಕೋರ್ಟ್‌ನ ಈ ತೀರ್ಪು ಸೀಮಿತ ಅವಧಿಗೆ ಮಾತ್ರ ಪ್ರಭಾವ ಬೀರಲಿದೆ. `ಡಿಟಿಸಿ~ ಜಾರಿಗೆ ಬಂದರೆ ಸರ್ಕಾರದ ದೊಡ್ಡ ತಲೆನೋವು ದೂರವಾದೀತು.

ಆದಾಯ ತೆರಿಗೆ ಸಂಪತ್ತು ಕೂಡ ಹೆಚ್ಚಿಗೆ ಹರಿದು ಬಂದೀತು. ತೆರಿಗೆ ತಪ್ಪಿಸುವ ಏಕೈಕ ಉದ್ದೇಶಕ್ಕೆ ವಿದೇಶಿ ನೆಲದಲ್ಲಿ ಸ್ವಾಧೀನ ಮತ್ತು ವಿಲೀನ ಒಪ್ಪಂದಕ್ಕೆ ಮುಂದಾಗುವ ಬಹುರಾಷ್ಟ್ರೀಯ ಉದ್ದಿಮೆ ಸಂಸ್ಥೆಗಳ ಪ್ರಯತ್ನಕ್ಕೆ ತಣ್ಣೀರೆರಚಿ ವರಮಾನ ಸಂಗ್ರಹಿಸಲು ಇಂತಹ ಕ್ರಮ ಅನಿವಾರ್ಯ.

ತೆರಿಗೆ ಕಾಯ್ದೆಗಳು ಇನ್ನಷ್ಟು ಪಾರದರ್ಶಕವಾಗಿರಬೇಕಾಗಿದೆ ಎನ್ನುವುದೂ ಈಗ ಸ್ಪಷ್ಟಗೊಂಡಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಯಾವುದೇ ಧಕ್ಕೆ ಬರದಂತೆಯೂ ಸರ್ಕಾರ ಎಚ್ಚರವಹಿಸಲು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.