ADVERTISEMENT

ದುರುಪಯೋಗ ತಪ್ಪಲಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ವೃದ್ಧರು, ಅಂಗವಿಕಲರು, ವಿಧವೆಯರು ಸೇರಿದಂತೆ ದುರ್ಬಲ ವರ್ಗಗಳ ಜನರಿಗೆ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ನೆರವಾಗಲು ರಾಜ್ಯ ಸರ್ಕಾರ ರೂಪಿಸಿರುವ ಅನೇಕ ಕಾರ್ಯಕ್ರಮಗಳು ಅನರ್ಹರ ಪಾಲಾಗುತ್ತಿವೆ ಎಂಬ ವಿಷಯ ಆತಂಕಕಾರಿ. ಬಡವರಿಗೆ ನೀಡುವ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಳ್ಳುವವರು ಎಲ್ಲ ಕಾಲದಲ್ಲೂ ಇರುತ್ತಾರೆ. ಆದರೆ ದುರುಪಯೋಗಕ್ಕೂ ಒಂದು ಮಿತಿ ಇದೆ. ದುರದೃಷ್ಟದ ಬೆಳವಣಿಗೆ ಎಂದರೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ ಎಂಬುದು. ಅಷ್ಟೇ ಅಲ್ಲ, ಪ್ರತಿ ವರ್ಷವೂ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ 175 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತಿದೆ. ಗುಲ್ಬರ್ಗ, ದಾವಣಗೆರೆ, ಬೆಳಗಾವಿ, ತುಮಕೂರು, ರಾಯಚೂರು ಜಿಲ್ಲೆಗಳಲ್ಲಿ ಶೇ 20ರಷ್ಟು ಅನರ್ಹರು ಸೌಲಭ್ಯಗಳನ್ನು ಕಬಳಿಸುತ್ತಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸ ಸರಿಯಾಗಿ ನಡೆದಿಲ್ಲ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲೇ  ಸಾಕಷ್ಟು ಲೋಪಗಳಿವೆ. ಅನರ್ಹರನ್ನು ಫಲಾನುಭವಿಗಳ ಪಟ್ಟಿಗೆ ಸೇರಿಸುವ ಮಧ್ಯವರ್ತಿಗಳ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದೆ. ಅವರಿಗೆ ಸರ್ಕಾರಿ ನೌಕರರು, ಅಧಿಕಾರಿಗಳು, ರಾಜಕೀಯ ಮುಖಂಡರ ಕುಮ್ಮಕ್ಕಿದೆ. ಇದು ಹೊಸ ಬೆಳವಣಿಗೆ ಅಲ್ಲ. ಇದು ಸರ್ಕಾರಕ್ಕೂ ಗೊತ್ತಿದೆ. ದುರ್ಬಲರ ಹೆಸರಿನಲ್ಲಿ ಅಸಂಖ್ಯಾತ ಮೈಗಳ್ಳರು ಕುಳಿತು ಉಣ್ಣುತ್ತಿರುವುದಕ್ಕೆ ಪರೋಕ್ಷವಾಗಿ ಸರ್ಕಾರವೇ ಹೊಣೆ. ಒಟ್ಟಾರೆ ಈ ಬೆಳವಣಿಗೆ ದುರದೃಷ್ಟಕರ ಹಾಗೂ ನಾಚಿಕೆಗೇಡಿನ ಸಂಗತಿ.

ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಿಗೆ ಫಲಾನುಭವಿಗಳ ಆಯ್ಕೆ ಮಾಡಲು ಸರ್ಕಾರ ಕಠಿಣ ನಿಯಮಗಳನ್ನು ರೂಪಿಸಿದರೆ ಸಾಲದು. ನಿಯಮಗಳಿಗೆ ಅನುಗುಣವಾಗಿ ಫಲಾನುಭವಿಗಳ ಆಯ್ಕೆ ನಡೆದಿದೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಇರಬೇಕು. ಅಷ್ಟೇ ಅಲ್ಲ, ಕಾಲ ಕಾಲಕ್ಕೆ ಫಲಾನುಭವಿಗಳ ಮರುಪರಿಶೀಲನೆ ನಡೆಯುತ್ತಿರಬೇಕು. ಅನರ್ಹರನ್ನು ಫಲಾನುಭವಿಗಳ ಪಟ್ಟಿಗೆ ಸೇರಿಸಲು ಸಹಕರಿಸಿದ ಸರ್ಕಾರಿ ಸಿಬ್ಬಂದಿ ಮತ್ತು ಮಂಜೂರಾತಿ ನೀಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವ ವ್ಯವಸ್ಥೆ ಇರಬೇಕು. ಫಲಾನುಭವಿ ಅನರ್ಹ ಎನ್ನುವುದು ಗೊತ್ತಾದ ಕೂಡಲೇ ಅವನಿಗೆ ಸೌಲಭ್ಯ ನಿರಾಕರಿಸುವುದರ ಜತೆಗೆ ಭವಿಷ್ಯದಲ್ಲಿ ಯಾವುದೇ ಸೌಲಭ್ಯ ಪಡೆಯಲು ಅನರ್ಹನೆಂದು ಪರಿಗಣಿಸಬೇಕು. ಸಾಮಾಜಿಕ ಭದ್ರತೆ ಕಾರ್ಯಕ್ರಮಗಳಷ್ಟೇ ಅಲ್ಲ, ಸರ್ಕಾರದ ಬಹುತೇಕ ಕಾರ್ಯಕ್ರಮಗಳು ಅನರ್ಹರ ಪಾಲಾಗುತ್ತಿವೆ. ಅರ್ಹರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವ್ಯವಹಾರಗಳನ್ನು ತಡೆಯುವುದು ಸರ್ಕಾರದ ಕೆಲಸ. ಆದರೆ ಅದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಅನರ್ಹ ಫಲಾನುಭವಿಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಸಾರ್ವಜನಿಕರ ಮಾಹಿತಿಗಳ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದಾದರೆ ಜನರೇ ಮಾಹಿತಿ ನೀಡಿ ಸಹಕರಿಸುತ್ತಾರೆ. ಇದು ತುರ್ತಾಗಿ ಆಗಬೇಕಾದ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT