ADVERTISEMENT

ನಿರಪರಾಧಿ ಅಲ್ಲ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಹಲವು ಹತ್ಯಾಕಾಂಡಗಳಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಖುದ್ದು ವಿಚಾರಣೆಯಿಂದ ಹಿಂದೆ ಸರಿದಿದೆ. ಕಾಂಗ್ರೆಸ್ಸಿನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 68ಮಂದಿ ಕ್ರೂರವಾಗಿ ಹತ್ಯೆಗೀಡಾದ ಗುಲ್‌ಬರ್ಗ್ ಸೊಸೈಟಿಯ ಪ್ರಕರಣದ ಬಗ್ಗೆ ವಿಚಾರಣಾ ನ್ಯಾಯಾಲಯ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಪ್ರಕರಣದಲ್ಲಿ ಶಂಕಿತರಾದವರನ್ನು ಬಿಡುಗಡೆ ಮಾಡಿದಂತಲ್ಲ.
 
ಅವರ ವಿರುದ್ಧ ಆರೋಪಪಟ್ಟಿಯನ್ನು ಹಾಕುವ ಅವಕಾಶವನ್ನು ವಿಚಾರಣಾ ನ್ಯಾಯಾಲಯಕ್ಕೆ ಮುಕ್ತಗೊಳಿಸಿದ ಈ ತೀರ್ಪು ವಾಸ್ತವವಾಗಿ ನೈಜ ಆರೋಪಿಗಳನ್ನು ಕಾನೂನು ವ್ಯಾಪ್ತಿಗೆ ತರುವುದರಲ್ಲಿ ನೆರವಿಗೆ ಬರಲಿದೆ.
 
ಹತ್ಯಾಕಾಂಡ ನಡೆಯುವುದಕ್ಕೆ ಕುಮ್ಮಕ್ಕು ನೀಡಿದ ಹಾಗೂ ಹಂತಕರ ವಿರುದ್ಧ ಕ್ರಮ ಕೈಗೊಳ್ಳದಂತೆ ಪೊಲೀಸರನ್ನು ತಡೆದ ಆರೋಪ ಕುರಿತಾಗಿ ತಮ್ಮ ವಿರುದ್ಧ ಸಾಕ್ಷ್ಯಗಳಿಲ್ಲ ಎಂದು ವಾದಿಸುತ್ತ ಬಂದಿದ್ದ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರು, ಪ್ರಕರಣವು ಹೊಸದಾಗಿ ಆರಂಭವಾದರೆ ಆರೋಪಪಟ್ಟಿಯಲ್ಲಿ ನಮೂದಾಗುವ ಸಾಧ್ಯತೆಯೂ ಸೃಷ್ಟಿಯಾಗಿದೆ.

ಇದರ ವಿಚಾರಣೆಗೆ ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡದ (ಸಿಟ್) ವರದಿ ಮತ್ತು ಆ ವರದಿಯನ್ನು ಅಧ್ಯಯನ ಮಾಡಿ ಅಭಿಪ್ರಾಯ ತಿಳಿಸಲು ಸುಪ್ರೀಂ ಕೋರ್ಟ್ ನಿಯೋಜಿಸಿದ ಅಮ್ಯುಕಸ್ ಕ್ಯೂರಿ ರಾಜು ರಾಮಚಂದ್ರನ್ ವರದಿಗಳೂ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಕೆ ಆಗಬೇಕಿದೆ. ಆದ್ದರಿಂದ ಈ ಪ್ರಕರಣದಲ್ಲಿ ಬಿಡುಗಡೆಯಾಗಿರುವ ನಿರಾಳತೆಯನ್ನು ನರೇಂದ್ರ ಮೋದಿ ಪ್ರಕಟಿಸುತ್ತಿರುವುದು ಆತ್ಮವಂಚನೆ.

ಈ ಪ್ರಕರಣದಲ್ಲಿ ನರೇಂದ್ರ ಮೋದಿ `ಆರೋಪಮುಕ್ತ~ ಎಂದು ಬಿಜೆಪಿ ಬೀಗುತ್ತಿರುವುದಕ್ಕೂ ಆಧಾರವಿಲ್ಲ. ಮುಂದಿನ ಲೋಕಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಕಳಂಕರಹಿತ ಮುಖಂಡರ ಹುಡುಕಾಟದಲ್ಲಿರುವ ಬಿಜೆಪಿಗೆ ನರೇಂದ್ರ ಮೋದಿ ಕುರಿತಾಗಿ ನ್ಯಾಯಾಲಯ ಹೆಸರಿಸದೆ ಇರುವುದನ್ನೇ ದೊಡ್ಡದನ್ನಾಗಿ ಬಿಂಬಿಸುವ ರಾಜಕೀಯ ಅನಿವಾರ್ಯತೆ ಇದ್ದಂತೆ ತೋರುತ್ತದೆ. ಇದು ಆ ಪಕ್ಷ ಮುಟ್ಟಿರುವ ದಿವಾಳಿತನಕ್ಕೆ ಸಾಕ್ಷಿ.

ಗುಲ್‌ಬರ್ಗ್ ಸೊಸೈಟಿ ಹತ್ಯಾಕಾಂಡ ಕುರಿತಾಗಿ ವಿಚಾರಣಾ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಕೆಯ ಹಂತದಿಂದ ಪ್ರಕರಣ ಆರಂಭವಾಗಬೇಕಾದ ಅವಕಾಶ ಸುಪ್ರೀಂ ಕೋರ್ಟ್ ತೀರ್ಪಿನಿಂದ ಪ್ರಾಪ್ತವಾಗಿದೆ.

ಆದರೆ, ಗುಜರಾತ್‌ನಲ್ಲಿ ಕೋಮು ಹಿಂಸಾಚಾರಕ್ಕೆ ಸಂಬಂಧಪಟ್ಟ ಯಾವುದೇ  ಪ್ರಕರಣಗಳಲ್ಲಿ ಸಾಕ್ಷಿಗಳು ನಿರ್ಭೀತಿಯಿಂದ ಇರುವ ಸನ್ನಿವೇಶ ಇಲ್ಲವೆಂಬುದು ಕಳೆದ ಕೆಲವು ವರ್ಷಗಳಿಂದ ನಡೆದಿರುವ ವಿಚಾರಣೆಗಳಿಂದ ದೃಢಪಟ್ಟಿದೆ.
 
ಇದೇ ಸರಣಿಯ ಬೆಸ್ಟ್ ಬೇಕರಿ ಪ್ರಕರಣದ ವಿಚಾರಣೆ ಗುಜರಾತ್‌ನಲ್ಲಿ ನಡೆದರೆ ಸತ್ಯ ಬಯಲಾಗುವುದು ಕಷ್ಟವೆಂದು ಸುಪ್ರೀಂ ಕೋರ್ಟ್ ಆ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಬೇಕಾಗಿತ್ತು.

ಆದ್ದರಿಂದ ಈ ಪ್ರಕರಣವನ್ನು ಸ್ವತಂತ್ರವಾಗಿ, ನಿರ್ಭೀತಿಯಿಂದ ವಿಚಾರಣೆಗೆ ಕೈಗೆತ್ತಿಕೊಳ್ಳುವಂತಹ ವಾತಾವರಣ ಗುಜರಾತ್‌ನಲ್ಲಿ ಏರ್ಪಡುವುದು ಅವಶ್ಯಕ. ಹತ್ಯಾಕಾಂಡಕ್ಕೆ ಕಾರಣರಾದ ಆರೋಪಿಗಳು ಪತ್ತೆಯಾಗುವಂತೆ ನ್ಯಾಯಾಲಯಕ್ಕೆ ಸಹಕಾರ ನೀಡುವುದು ಅಲ್ಲಿನ ಆಡಳಿತಾರೂಢ ಬಿಜೆಪಿಯ ಕರ್ತವ್ಯ.
 
ವಿಚಾರಣಾ ನ್ಯಾಯಾಲಯ ಕಾಯ್ದೆ ಪ್ರಕಾರ ಎಲ್ಲ ಪ್ರಕ್ರಿಯೆ ನಡೆಸಿದ ನಂತರ ನರೇಂದ್ರ ಮೋದಿ ಆರೋಪ ಮುಕ್ತರಾದರೆ ಅದನ್ನು ಸತ್ಯಕ್ಕೆ ಸಂದ ಜಯವೆಂದು ಬಣ್ಣಿಸಲು ಅಡ್ಡಿ ಇಲ್ಲ. ಸದ್ಯಕ್ಕಂತೂ ಮೋದಿ ನಿರಪರಾಧಿ ಎಂದು ಸಾಬೀತಾಗಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.