ADVERTISEMENT

ನೀರಿನ ರಾಜಕೀಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 19:30 IST
Last Updated 7 ಆಗಸ್ಟ್ 2012, 19:30 IST

ನದಿನೀರು ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ನೆರೆರಾಜ್ಯಗಳ ಜತೆ ಜಗಳ ಮಾಡುತ್ತಲೇ ಬಂದಿರುವ ಕರ್ನಾಟಕ, ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಆ ರಾಜ್ಯಗಳನ್ನು ಎಂದೂ ಮಾದರಿಯಾಗಿ ಸ್ವೀಕರಿಸಿಲ್ಲ.

ಕಾವೇರಿ ಮತ್ತು ಕೃಷ್ಣಾ ಕೊಳ್ಳಗಳಲ್ಲಿ ನೆನೆಗುದಿಗೆ ಬಿದ್ದಿರುವ ಹಲವಾರು ಯೋಜನೆಗಳೇ ಇದಕ್ಕೆ ಸಾಕ್ಷಿ. ಬಚಾವತ್ ನ್ಯಾಯಮಂಡಳಿ `ಎ~ಸ್ಕೀಮ್‌ನಲ್ಲಿ ಹಂಚಿಕೆ ಮಾಡಿದ್ದ ಕೃಷ್ಣಾ ನದಿಯ 734 ಟಿಎಂಸಿ ನೀರನ್ನು 37 ವರ್ಷಗಳ ನಂತರವೂ ಪೂರ್ಣವಾಗಿ ಬಳಸಿಕೊಳ್ಳಲು ಕರ್ನಾಟಕಕ್ಕೆ ಸಾಧ್ಯವಾಗಿಲ್ಲ.
 
ಆ ಸ್ಕೀಮ್‌ನಲ್ಲಿ ಸುಮಾರು 100 ಟಿಎಂಸಿ ನೀರು ಬಳಕೆಯಾಗದೆ ಆಂಧ್ರಪ್ರದೇಶಕ್ಕೆ ಈಗಲೂ ಹರಿದುಹೋಗುತ್ತಿದೆ. ಕೃಷ್ಣಾ ಮೇಲ್ದಂಡೆಯ ಎರಡನೆ ಹಂತದ ನೀರಾವರಿ ಯೋಜನೆಗಳು ಕೂಡಾ ಪೂರ್ಣಗೊಂಡಿಲ್ಲ. ಹೀಗಿರುವಾಗ ಕೃಷ್ಣಾಮೇಲ್ದಂಡೆ ಮೂರನೆ ಹಂತದ ಯೋಜನೆಗಳಿಗೆ ತರಾತುರಿಯಿಂದ ಅನುಮೋದನೆ ನೀಡುವ ಅಗತ್ಯ ಸರ್ಕಾರಕ್ಕೆ ಏನಿತ್ತೋ ಗೊತ್ತಿಲ್ಲ.

ನಿರೀಕ್ಷೆಯಂತೆ ಅನುಮೋದನೆಗೆ ತೋರಿದ ಆಸಕ್ತಿಯನ್ನು ಅನುಷ್ಠಾನಕ್ಕೆ ಬೇಕಾದ ಹಣವನ್ನು ನೀಡಲು ಸರ್ಕಾರ ತೋರಿಸಿಲ್ಲ. ಸ್ಥಳೀಯ ಶಾಸಕರು ಹೇಳಿರುವಂತೆ ಕೃಷ್ಣಾ ಮೇಲ್ದಂಡೆಯ ಮೂರನೆ ಹಂತದ ಕಾಮಗಾರಿ ಪೂರ್ಣಗೊಳಿಸಲು ಬೇಕಾಗಿರುವುದು 25ರಿಂದ 30 ಸಾವಿರ ಕೋಟಿ ರೂಪಾಯಿ, ಆದರೆ ಕಳೆದ ಬಜೆಟ್‌ನಲ್ಲಿ ನೀಡಿರುವ ಹಣ ಕೇವಲ 1250 ಕೋಟಿ ರೂಪಾಯಿ.

ಮುಳವಾಡ ಏತ ನೀರಾವರಿ ಯೋಜನೆಯ ವೆಚ್ಚವೇ 4610 ಕೋಟಿ ರೂಪಾಯಿ. ಇದಕ್ಕೆ ಸಂಬಂಧಿಸಿದಂತೆ 981 ಕೋಟಿ ರೂಪಾಯಿ ಮೊತ್ತದ ಟೆಂಡರ್ ಕರೆಯಲಾಗಿದ್ದರೂ ಇದಕ್ಕೆ ನೀಡಲಾಗಿರುವ ಹಣ ಕೇವಲ 342 ಕೋಟಿ ರೂಪಾಯಿ.

ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಕರ್ನಾಟಕ ಹಿಂದುಳಿಯಲು ಕಾರಣಗಳು ಮುಖ್ಯವಾಗಿ ಎರಡು. ಮೊದಲನೆಯದು ಭ್ರಷ್ಟಾಚಾರ, ಎರಡನೆಯದು ಸ್ವಾರ್ಥ ರಾಜಕೀಯದ ಲೆಕ್ಕಾಚಾರ. ಇಲ್ಲಿಯವರೆಗೆ ಅಧಿಕಾರ ಅನುಭವಿಸಿದ ಎಲ್ಲ ರಾಜಕೀಯ ಪಕ್ಷಗಳು ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿವೆ.  ಸರ್ಕಾರ ಬಜೆಟ್‌ನಲ್ಲಿ ನೀಡುವ ಹಣದ ಬಹುಪಾಲು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನೊಳಗೊಂಡ ದುಷ್ಟಕೂಟದ ಪಾಲಾಗಿ ಹೋಗುತ್ತಿರುವುದು ಸುಳ್ಳಲ್ಲ.

ಇದನ್ನು ತಡೆದು ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸುವ ಪ್ರಯತ್ನ ಕರ್ನಾಟಕದಲ್ಲಿ ಯಶಸ್ಸು ಕಂಡಿಲ್ಲ. ಕೃಷ್ಣಾಕೊಳ್ಳದ ಯೋಜನೆಗಳಿಗೆ ಸಂಬಂಧಿಸಿದ ತುಂಡು ಗುತ್ತಿಗೆಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ  ನಡೆಸಿದ ಸಿಐಡಿ ಮೊಕದ್ದಮೆ ದಾಖಲಿಸಿದ ನಂತರ ನಡೆದ ರಾಜಕೀಯ ಕೋಲಾಹಲವೇ ಇದಕ್ಕೆ ಸಾಕ್ಷಿ.

ಇದೇ ರೀತಿ ಒಂದೆಡೆ ನದಿನೀರು ಹಂಚಿಕೆಯ ವಿವಾದವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆದರೆ, ಇನ್ನೊಂದೆಡೆ ಸುಳ್ಳು ಆಶ್ವಾಸನೆಗಳ ಮೂಲಕ ರೈತರಿಗೆ ಮೋಸ ಮಾಡುವ ಪ್ರಯತ್ನಗಳು ನಡೆದಿವೆ. ಮುಳವಾಡ ಏತ ನೀರಾವರಿ ಯೋಜನೆಯ ಕಾಮಗಾರಿಗೆ 1986ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದರೂ ಈಗ ರಾಜ್ಯದ ಬಿಜೆಪಿ ಸರ್ಕಾರ ಮತ್ತೊಮ್ಮೆ ಭೂಮಿ ಪೂಜೆ ನಡೆಸಲು ಮುಂದಾಗಿರುವುದು ಈ ಮೋಸಕ್ಕೆ ಇತ್ತೀಚಿನ ಉದಾಹರಣೆ. ಈ ರೀತಿಯ ಕ್ಷುಲ್ಲಕ ರಾಜಕೀಯ ಸಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.