ADVERTISEMENT

ನೇಮಕಾತಿ ನಿಯಮಾವಳಿ ಕಗ್ಗಂಟು ಪರಿಹಾರವಾಗಲಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ನೇಮಕಾತಿ ನಿಯಮಾವಳಿ ಕಗ್ಗಂಟು ಪರಿಹಾರವಾಗಲಿ
ನೇಮಕಾತಿ ನಿಯಮಾವಳಿ ಕಗ್ಗಂಟು ಪರಿಹಾರವಾಗಲಿ   

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ನ್ಯಾಯಾಂಗ ಮತ್ತು ಸರ್ಕಾರದ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಕೊನೆಗೂ ಒಂದು ಮುಕ್ತಾಯ ಸಿಗುವ ಸೂಚನೆಗಳು ಕಂಡು ಬರುತ್ತಿವೆ.

ಸುಮಾರು 22 ತಿಂಗಳಿಂದ ಕೊಳೆಯುತ್ತಿರುವ ‘ನ್ಯಾಯಾಂಗ ನೇಮಕಾತಿ ನಿಯಮಾವಳಿ’ಯನ್ನು (ಎಂಒಪಿ) ಸಾರ್ವಜನಿಕ ಹಿತದ ದೃಷ್ಟಿಯಿಂದ ತ್ವರಿತವಾಗಿ ಅಂತಿಮಗೊಳಿಸಿ ಜಾರಿಗೆ ತರಬೇಕು ಎಂಬ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠ ಒಪ್ಪಿರುವುದು ಈ ದಿಸೆಯಲ್ಲಿ ಒಂದು ಸಕಾರಾತ್ಮಕ ಬೆಳವಣಿಗೆ.

ವಾಸ್ತವವಾಗಿ, ನಿಯಮಾವಳಿಯನ್ನು ಅಂತಿಮಗೊಳಿಸಲು ಯಾವುದೇ ಕಾಲಮಿತಿ ಇಲ್ಲ. ಆದರೆ ನಿಯಮಾವಳಿ ಇಲ್ಲದ ಕಾರಣ ನ್ಯಾಯಮೂರ್ತಿಗಳ ನೇಮಕಾತಿ, ಬಡ್ತಿ ಮತ್ತು ವರ್ಗಾವಣೆಗಳು ತಡ ಆಗುತ್ತಿವೆ. ಸಕಾಲಕ್ಕೆ ನಿರ್ಧಾರ ಹೊರ ಬೀಳುತ್ತಿಲ್ಲ. ಈ ವಿಳಂಬದಿಂದ ನ್ಯಾಯದಾನದಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಪೀಠ ಗಮನ ಹರಿಸಿದೆ.

ADVERTISEMENT

ಈ ಕಗ್ಗಂಟು ಬೇಗ ತೀರ್ಮಾನ ಆಗಬೇಕು. ಏಕೆಂದರೆ ಇದರಲ್ಲಿ ಕಕ್ಷಿದಾರರ ಹಿತ ಮಾತ್ರವಲ್ಲ ನ್ಯಾಯಾಂಗದ ಹಿತವೂ ಅಡಗಿದೆ. ಅದು ಪೀಠಕ್ಕೂ ಮನವರಿಕೆ ಆಗಿದೆ ಎನ್ನುವುದೇ ಸಂತೋಷದ ಸಂಗತಿ.

ನ್ಯಾಯಾಧೀಶರ ನೇಮಕಕ್ಕೆ ಸಂಸತ್ತು ರಚಿಸಿದ್ದ ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ’ ಕಾಯ್ದೆ ಮತ್ತು ಅದಕ್ಕೆ ಸಾಂವಿಧಾನಿಕ ರಕ್ಷಣೆ ನೀಡುವ 99ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದ ಬಳಿಕ ಸಂವಿಧಾನದ ಎರಡು ಪ್ರಮುಖ ಅಂಗಗಳಾದ ಕಾರ್ಯಾಂಗ, ನ್ಯಾಯಾಂಗದ ಮಧ್ಯೆ ಸಂಘರ್ಷ ಪ್ರಾರಂಭವಾಗಿತ್ತು.

ಸುಪ್ರೀಂ ಕೋರ್ಟ್ ಸ್ವತಃ ರಚಿಸಿಕೊಂಡಿರುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ಸಮಾಧಾನ ಇಲ್ಲ. ಹೀಗಾಗಿ ನ್ಯಾಯಾಂಗ ನೇಮಕಾತಿಗಳು ದೀರ್ಘಕಾಲದಿಂದ ನನೆಗುದಿಗೆ ಬಿದ್ದಿವೆ. ನಂತರದ ಬೆಳವಣಿಗೆಗಳಲ್ಲಿ, ನ್ಯಾಯಮೂರ್ತಿಗಳ ನೇಮಕಾತಿ ನಿಯಮಾವಳಿ (ಎಂಒಪಿ) ಸಿದ್ಧಪಡಿಸುವಂತೆ ಕೋರ್ಟ್‌, ಕೇಂದ್ರಕ್ಕೆ ಸೂಚಿಸಿತ್ತು.

ಕೇಂದ್ರ ಸರ್ಕಾರ 2015ರ ಡಿಸೆಂಬರ್‌ನಲ್ಲಿಯೇ ರೂಪಿಸಿ ಸಲ್ಲಿಸಿದ್ದ ನಿಯಮಾವಳಿಗಳ ಕೆಲವು ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಆಕ್ಷೇಪ ಇದೆ. ಆದರೆ ತನ್ನ ನಿಲುವು ಬದಲಿಸಿಕೊಳ್ಳುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ಇದುವೇ ಬಿಕ್ಕಟ್ಟಿಗೆ ಮುಖ್ಯ ಕಾರಣ.

‘ತೀರ್ಪು ತಡವಾದರೆ ನ್ಯಾಯದಾನವನ್ನೇ ನಿರಾಕರಿಸಿದಂತೆ’ ಎನ್ನುವ ಮಾತುಗಳನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ ಈ ವಿಳಂಬವನ್ನು ತಪ್ಪಿಸುವ ಪ್ರಯತ್ನಗಳು ಮಾತ್ರ ಜನರ ನಿರೀಕ್ಷೆಯಷ್ಟು ಚುರುಕಾಗಿ ನಡೆಯುತ್ತಿಲ್ಲ. ಬಹಳಷ್ಟು ನ್ಯಾಯಾಲಯಗಳು ಮೂಲ ಸೌಕರ್ಯದ ಕೊರತೆ ಅನುಭವಿಸುತ್ತಿವೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಮಟ್ಟದಲ್ಲಂತೂ, ನ್ಯಾಯಮೂರ್ತಿಗಳ ಖಾಲಿ ಹುದ್ದೆಯನ್ನು ಭರ್ತಿ ಮಾಡದೇ ಇರುವುದೇ ತ್ವರಿತ ನ್ಯಾಯದಾನದ ಹಾದಿಯಲ್ಲಿನ ಅತಿದೊಡ್ಡ ಅಡಚಣೆ.

ಲಭ್ಯ ಅಂಕಿಅಂಶಗಳ ಪ್ರಕಾರ, ಸುಪ್ರೀಂ ಕೋರ್ಟ್‌ನ 31 ನ್ಯಾಯಮೂರ್ತಿಗಳ ಪೈಕಿ 5 ಸ್ಥಾನಗಳು ಖಾಲಿ ಇವೆ. ದೇಶದ 24 ಹೈಕೋರ್ಟ್‌ಗಳ ಪರಿಸ್ಥಿತಿಯಂತೂ ಮತ್ತಷ್ಟು ಗಂಭೀರವಾಗಿದೆ. ಕರ್ನಾಟಕವೂ ಸೇರಿದಂತೆ 7 ಹೈಕೋರ್ಟ್‌ಗಳಲ್ಲಿ ಪೂರ್ಣಾವಧಿ ಮುಖ್ಯ ನ್ಯಾಯಮೂರ್ತಿಗಳು ಇಲ್ಲ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸ್ಥಾನದಲ್ಲಿ ಒಂದು ತಿಂಗಳಲ್ಲಿಯೇ ಕಾಯಂ ಮುಖ್ಯ ನ್ಯಾಯಮೂರ್ತಿಯ ನೇಮಕ ಆಗಬೇಕು. ಆ ನಿಯಮವೂ ಪಾಲನೆ ಆಗುತ್ತಿಲ್ಲ. ಹೈಕೋರ್ಟ್‌ಗಳಲ್ಲಿ ಮಂಜೂರಾದ ನ್ಯಾಯಮೂರ್ತಿಗಳ ಹುದ್ದೆ 1079. ಅದರಲ್ಲಿಯೇ 388 ಹುದ್ದೆಗಳು ಖಾಲಿ ಇವೆ.

ಕರ್ನಾಟಕದ ವಿಷಯಕ್ಕೆ ಬಂದರೆ 62 ನ್ಯಾಯಮೂರ್ತಿಗಳು ಇರಬೇಕು. ಆದರೆ ಬರೀ 25 ಜನ ಇದ್ದಾರೆ. ಹೀಗಾದರೆ ತ್ವರಿತ ನ್ಯಾಯದಾನ ಹೇಗೆ ಸಾಧ್ಯ? ವ್ಯಾಜ್ಯಗಳು ವಿಳಂಬವಿಲ್ಲದೆ ಇತ್ಯರ್ಥವಾಗಬೇಕು, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಉಳಿಯಬೇಕು ಎಂದರೆ ತೀರ್ಪುಗಳು ಬೇಗ ಬರಬೇಕು. ಜನಕ್ಕೆ ಬೇಕಿರುವುದು ಅದು. ಅವರ ಈ ಅಪೇಕ್ಷೆಗೆ ಅನುಗುಣವಾಗಿ ನಡೆದುಕೊಳ್ಳುವ ಹೊಣೆ ಕೋರ್ಟ್ ಮತ್ತು ಸರ್ಕಾರ ಎರಡರ ಮೇಲೂ ಇದೆ. ನೇಮಕಾತಿ ನಿಯಮಾವಳಿ ಜಾರಿಯಲ್ಲಿನ ಅಡೆತಡೆಗಳನ್ನು ಬೇಗ ನಿವಾರಿಸುವುದೇ ಅದಕ್ಕಿರುವ ಪರಿಣಾಮಕಾರಿ ಪರಿಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.