ADVERTISEMENT

ಪ್ರತಿಪಕ್ಷಗಳ ಶಕ್ತಿಪ್ರದರ್ಶನ ಅತಿ ನಿರೀಕ್ಷೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 25 ಮೇ 2018, 3:04 IST
Last Updated 25 ಮೇ 2018, 3:04 IST
ಪ್ರತಿಪಕ್ಷಗಳ ಶಕ್ತಿಪ್ರದರ್ಶನ  ಅತಿ ನಿರೀಕ್ಷೆ ಸಲ್ಲದು
ಪ್ರತಿಪಕ್ಷಗಳ ಶಕ್ತಿಪ್ರದರ್ಶನ ಅತಿ ನಿರೀಕ್ಷೆ ಸಲ್ಲದು   

ಕರ್ನಾಟಕದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯು ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಹೊಳಹುಗಳನ್ನು ಪ್ರಕಟಿಸಿದೆ. 2019ರ ಲೋಕಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ- ಅಮಿತ್ ಶಾ ಜೋಡಿಯ ದೈತ್ಯ ರಥಯಾತ್ರೆಯನ್ನು ತಡೆದು ನಿಲ್ಲಿಸಲು ಪ್ರತಿಪಕ್ಷಗಳು ಕೈ ಕಲೆಸುವ ಮಾತುಗಳು ಮತ್ತೊಮ್ಮೆ ಚಲಾವಣೆಗೆ ಬಂದಿವೆ.

ಮೊನ್ನೆ ಬೆಂಗಳೂರಿನಲ್ಲಿ ನಡೆದ ಮೈತ್ರಿ ಸರ್ಕಾರದ ಪ್ರಮಾಣವಚನ ಸಮಾರಂಭ ‘ಮೋದಿ-ಶಾ’ ವಿರುದ್ಧ ಪ್ರತಿಪಕ್ಷಗಳ ಶಕ್ತಿಪ್ರದರ್ಶನವಾಗಿ ವಿಜೃಂಭಿಸಿದ್ದು ವಾಸ್ತವ. ‘2019ರಲ್ಲಿ ದೊಡ್ಡ ಬದಲಾವಣೆ ನಡೆಯಲಿದೆಯೆಂದು ಸಾರಲು ಪ್ರತಿಪಕ್ಷಗಳ ಹೇಮಾಹೇಮಿಗಳು ಇಲ್ಲಿ ನೆರೆದಿದ್ದಾರೆಯೇ ವಿನಾ ನನ್ನನ್ನು ಬೆಂಬಲಿಸಲು ಅಲ್ಲ’ ಎಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತುಗಳಲ್ಲಿ ಹುರುಳಿತ್ತು.

ಬಿಜೆಪಿಯನ್ನು ವಿರೋಧಿಸುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳ ತಾರಾಗಣವೇ ವಿಧಾನಸೌಧದ ಪಾವಟಿಗೆಗಳ ಮೇಲೆ ನೆರೆದಿತ್ತು. ಒಡಿಶಾದ ಬಿಜು ಜನತಾದಳ ಈ ಮಾತಿಗೆ ಅಪವಾದ ಆದವು. ಇಂತಹ ಒಗ್ಗಟ್ಟು ಈ ಹಿಂದೆ ಇಂದಿರಾ ಗಾಂಧಿ ಮತ್ತು ಅವರ ಮಗ ರಾಜೀವ್ ಗಾಂಧಿ ವಿರುದ್ಧ ಭಿನ್ನ ಹಂತಗಳಲ್ಲಿ ಕಂಡು ಬಂದಿತ್ತು. ಆದರೆ ಗಾಳಿಗೆ ಸಿಲುಕಿದ ಮಳೆಗಾಲದ ಮೋಡಗಳಂತೆ ಚದುರಿ ಹೋಯಿತು. ಜನತಂತ್ರದ ‘ಅಪಹರಣ’ದ ಆಪಾದನೆಯನ್ನು ಒಂದೊಮ್ಮೆ ಬಲಿಷ್ಠ ಕಾಂಗ್ರೆಸ್ ಎದುರಿಸಿತ್ತು. ಇದೀಗ ಅದೇ ಜಾಗದಲ್ಲಿ ಬಿಜೆಪಿ ನಿಂತಿದೆ.

ADVERTISEMENT

ಬೆಂಗಳೂರಿನ ಮಹಾ ಪ್ರದರ್ಶನದ ಒಡಲಲ್ಲಿ ಹಲವು ಬಗೆಯ ಅಂತರ್‌ ವಿರೋಧಗಳು ಅವಿತಿವೆ. ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಪ್ರಾದೇಶಿಕ ಪಕ್ಷಗಳ ಫೆಡರಲ್ ಫ್ರಂಟ್ ಕಟ್ಟಬೇಕೆಂಬುದು ಮಮತಾ ಬ್ಯಾನರ್ಜಿ ಅವರ ಹವಣಿಕೆ. ಆದರೆ ಕಾಂಗ್ರೆಸ್ ಅನ್ನು ಹೊರಗೆ ಇರಿಸಿ ಯಾವುದೇ ಬಿಜೆಪಿ ವಿರೋಧಿ ರಂಗವನ್ನು ಕಟ್ಟುವುದು ಅವಾಸ್ತವ ಎಂಬದು ತೃತೀಯ ರಂಗ ರಾಜಕಾರಣದ ಪ್ರಮುಖ ಹುದ್ದರಿ ಎಚ್.ಡಿ.ದೇವೇಗೌಡ ಹೇಳಿಕೆ.

ಈ ವೇದಿಕೆಯ ಮೇಲೆ ನೆರೆದ ಹಲವು ಪಕ್ಷಗಳು ರಾಜ್ಯಮಟ್ಟದಲ್ಲಿ ಒಂದು ಮತ್ತೊಂದರ ನೇರ ವಿರೋಧಿ ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಬಿಜೆಪಿಯ ವಿರುದ್ಧ ರಾಷ್ಟ್ರಮಟ್ಟದ ಏಕಶಿಲೆಯ ಮಹಾಮೈತ್ರಿ ಮೈತಳೆವ ಸಾಧ್ಯತೆ ವಿರಳ. ಪಕ್ಷಗಳ ರಾಜಕೀಯ ಅನುಕೂಲ- ಅನನುಕೂಲ, ಲೆಕ್ಕಾಚಾರಗಳು, ರಣತಂತ್ರಗಳನ್ನು ಅನುಸರಿಸಿ ಆಯಾ ರಾಜ್ಯಮಟ್ಟದಲ್ಲಿ ಬಿಜೆಪಿ ವಿರೋಧಿ ಮೈತ್ರಿಗಳು ರೂಪು ತಳೆಯಬಹುದು ಅಥವಾ ತಳೆಯದೆ ಇರಬಹುದು.

ಕೇವಲ ಉತ್ತರಪ್ರದೇಶದಲ್ಲಿ ಬಹುಜನಸಮಾಜ ಪಾರ್ಟಿ- ಸಮಾಜವಾದಿ ಪಾರ್ಟಿ- ಕಾಂಗ್ರೆಸ್ ಹತ್ತಿರ ಬರುವುದರಿಂದಷ್ಟೇ ಬಿಜೆಪಿಯನ್ನು ಸೋಲಿಸುವುದು ಸಾಧ್ಯವಿಲ್ಲ. ಈ ಗೆಳೆತನ ಕೇವಲ ಮೇಲ್ಪದರದ ಅವಕಾಶವಾದಿ ಮೈತ್ರಿ ಎಂದು ಕಂಡು ಬಂದರೆ ಅದರ ವಿರುದ್ಧ ಇತರೆ ಪ್ರತಿಶಕ್ತಿಗಳು ಒಗ್ಗೂಡಬಹುದು. ಯಾದವ ಜನಾಂಗಕ್ಕೆ ಸೇರಿಲ್ಲದ ಹಿಂದುಳಿದ ವರ್ಗಗಳು ಬಿಜೆಪಿ ಛತ್ರಿಯಡಿ ಒಟ್ಟಿಗೆ ಬರಬಹುದು.

ಮೋದಿ-ಶಾ ಜೋಡಿಯ ಅಬ್ಬರದಡಿ ಜಜ್ಜಿ ಹೋಗಿ ದಿಕ್ಕೆಟ್ಟು ದಿವಾಳಿಯ ಅಂಚು ತಲುಪಿರುವ ಕಾಂಗ್ರೆಸ್ ಸರಣಿ ಸೋಲುಗಳಿಂದ ಕೊಂಚವಾದರೂ ಪಾಠ ಕಲಿತಂತಿದೆ. ಎತ್ತರೆತ್ತರದ ಅಗ್ರಾಸನದಿಂದ ಕೆಳಗಿಳಿದು ಬಂದು ಪ್ರಾದೇಶಿಕ ಪಕ್ಷಗಳ ಭುಜಕ್ಕೆ ಭುಜ ನೀಡಿ ರಾಜಕಾರಣ ಮಾಡದೆ ಹೋದರೆ ತನಗೆ ಉಳಿಗಾಲವಿಲ್ಲ ಎಂಬ ಕಟು ವಾಸ್ತವವನ್ನು ಕಾಂಗ್ರೆಸ್ ಪಕ್ಷ ಕಡೆಗೂ ಅರ್ಥ ಮಾಡಿಕೊಂಡಂತೆ ತೋರುತ್ತಿದೆ. ಕಾಂಗ್ರೆಸ್ ಕೆಳಗಿಳಿದು ಬರತೊಡಗಿದೆ ಎಂಬ ಸತ್ಯ ಪ್ರಾದೇಶಿಕ ಪಕ್ಷಗಳ ಅರಿವಿಗೂ ಬರತೊಡಗಿದೆ.

ಒಂದಾಗಿ ಎದುರಿಸಿ ನಿಲ್ಲದೆ ಹೋದರೆ ಮೋದಿ-ಶಾ ಜೋಡಿ ತಮ್ಮನ್ನು ನುಂಗುವುದು ನಿಶ್ಚಿತ ಎಂಬ ಆತಂಕ ಅವುಗಳನ್ನು ಕಾಡಿದೆ. ಪ್ರಬಲ ಬಿಜೆಪಿಗಿಂತ ದುರ್ಬಲ ಕಾಂಗ್ರೆಸ್ ಸಹವಾಸ ಮೇಲು ಎಂಬ ಅವುಗಳ ಲೆಕ್ಕಾಚಾರ ಸರ್ವಥಾ ಸ್ವಾಭಾವಿಕ.

ಕೇವಲ ಚುನಾವಣಾ ಯುಕ್ತಿಗಳಿಂದ ಬಿಜೆಪಿಯನ್ನು ಸೋಲಿಸಲು ಬರುವುದಿಲ್ಲ. ಗುಜರಾತ್ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಹಿನ್ನಡೆ ಎದುರಿಸಿದ್ದರೂ, ದೇಶದ ಉದ್ದಗಲಕ್ಕೆ ಈ ಪಕ್ಷ ರೂಢಿಸಿಕೊಂಡಿರುವ ಬಲವನ್ನು ಕಡಿಮೆ ಅಂದಾಜು ಮಾಡುವುದು ಸರಿಯಲ್ಲ. ಬಿಜೆಪಿ ವಿರುದ್ಧ ಬೆಳೆಯುತ್ತಿರುವ ಅತೃಪ್ತಿಯನ್ನು ಜನಾಂದೋಲನಗಳ ಮೂಲಕ ಹರಿಸಬೇಕು ಎಂದು ಸಿಪಿಎಂ ನೇತಾರ ಪ್ರಕಾಶ್ ಕಾರಟ್ ನೀಡಿರುವ ಎಚ್ಚರ ಅರ್ಥಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.