ADVERTISEMENT

ಬೆಂಗಳೂರಿನಲ್ಲೊಂದು ಬಿಳಿ ಆನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಬೆಂಗಳೂರಿನಲ್ಲಿ ತುಂಡು ಭೂಮಿ ಪಡೆದರೆ ಜೀವನವೇ ಸಾರ್ಥಕ ಎನ್ನುವುದೇ ಬಹಳ ಜನರ ಭಾವನೆ. ಬೆಂಗಳೂರಿನ ಭೂವ್ಯವಹಾರ ಹಲವು ಘೋರ ಘಟನೆಗಳಿಗೆ ಸಾಕ್ಷಿಯಾಗಿದೆ. ಬೆಂಗಳೂರಿನ ಮಣ್ಣಿನ ಗುಣವೇ ಹಾಗೆ. ಒಂದು ಚೂರು ಭೂಮಿ ಇದ್ದವರಿಗೆ ಭೂದಾಹದ ತಹತಹ. ಹೀಗಾಗಿ  ಇಲ್ಲಿನ ಭೂವ್ಯವಹಾರದ ಸುತ್ತ ಪಾತಕ ಲೋಕವೇ ಬಾಯ್ತೆರೆದುಕೊಂಡಿದೆ.

ರಿಯಲ್ ಎಸ್ಟೇಟ್ ದಂಧೆ ಮಾಡುತ್ತಾ, ಕೃಷಿ ಭೂಮಿಯನ್ನು ಕಡಿಮೆಬೆಲೆಗೆ ವಶಪಡಿಸಿಕೊಂಡು ದುಬಾರಿ ಬೆಲೆಗೆ ನಿವೇಶನ, ಫ್ಲಾಟುಗಳನ್ನು ಮಾರುತ್ತಿರುವ `ವ್ಯಾಪಾರ' ಬೆಂಗಳೂರಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಜನಸಾಮಾನ್ಯರ ಕೈಗೆಟುಕದ ಇಂಥ ನಿವೇಶನಗಳು ಹೊರರಾಜ್ಯದವರಿಗೆ, ಉಳ್ಳವರಿಗೆ ಮಾತ್ರ ಎನ್ನುವಂತಾಗಿದೆ. ಬಡವರು ಬಿಡಿಎ, ಹೌಸಿಂಗ್‌ಬೋರ್ಡ್‌ಗಳ ಪ್ರಕಟಣೆಯನ್ನು ಕಾಯುತ್ತಾ, ಅರ್ಜಿ ಹಾಕಿ ಕಾಯುತ್ತಾ ಕುಳಿತಿದ್ದಾರೆ.

ಬೆಂಗಳೂರಿನಲ್ಲೊಂದು ಮನೆ ಮಾಡಿಯೇ ಬಿಡಬೇಕು ಎಂದು ಕಾದು ಕುಳಿತಿರುವ ಶ್ರೀಸಾಮಾನ್ಯನ ಪಾಲಿಗೆ ನಿವೇಶನ ಎನ್ನುವುದು ಮರೀಚಿಕೆ. ಬೆಂಗಳೂರಿಗೊಂದೇ ಬಿಡಿಎ. ಅದಕ್ಕೆ ಅದರ ವ್ಯಾಪ್ತಿಯೇ ತಿಳಿಯದು. ಇದೆಂಥಾ ಚೋದ್ಯ! ಬೆಂಗಳೂರಿನ ಬಿಡಿಎ ಎಂದರೆ ಕಬಳಿಕೆಗೆ ಸೂಕ್ತ ಸ್ಥಳ  ಎಂದೇ ಅಧಿಕಾರಿಗಳು ತಿಳಿದುಕೊಂಡಂತಿದೆ. ಇಲ್ಲದಿದ್ದರೆ 24,075 ಕೋಟಿ ರೂಪಾಯಿ ಮೊತ್ತದ ಬಿಡಿಎ ನೆಲ ಅತಿಕ್ರಮಣವಾದರೂ ಜಾಣಕುರುಡು ಪ್ರದರ್ಶಿಸುತ್ತಿರುವುದಕ್ಕೆ ಅರ್ಥವಿಲ್ಲ.

ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದರಲ್ಲಿಯೇ ಅಕ್ರಮಗಳ ಸರಮಾಲೆ ನಡೆದಿರುವುದನ್ನು ಸಿಎಜಿ ಪತ್ತೆ ಹಚ್ಚಿ ನೀಡಿರುವ ವರದಿ ಬಿಡಿಎ ಭ್ರಷ್ಟಾಚಾರಕ್ಕೆ ಹಿಡಿದಿರುವ ಕನ್ನಡಿಯಂತಿದೆ. 1969ರಿಂದ 2002ರವರೆಗೆ ನಿರ್ಮಿಸಿರುವ 13 ಬಡಾವಣೆಗಳಲ್ಲಿ ಈ ಅವ್ಯವಹಾರವಾಗಿದೆ. ಬಿಡಿಎ ಆಸ್ತಿ ರಕ್ಷಿಸಲು ಇರುವ ಸಮಿತಿ ಏನು ಮಾಡುತ್ತಿದೆ? ಇತ್ತೀಚೆಗೆ ಮೂರು ಹೊಸ ಬಡಾವಣೆ ನಿರ್ಮಿಸುವುದಾಗಿ ಬಿಡಿಎ ಪ್ರಕಟಿಸಿತ್ತು. ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯೂ ನಡೆಯಿತು.

ADVERTISEMENT

ನಡೆಯುತ್ತಲೇ ಇದೆ. ಉದ್ದೇಶಿತ ಕೆಂಪೇಗೌಡ ಬಡಾವಣೆಯಲ್ಲಿ  ಈಗಾಗಲೇ ಭೂವ್ಯವಹಾರ ಜೋರಾಗಿಯೇ ನಡೆಯುತ್ತಿದೆ. ಸಚಿವರಿಗೆ ಸಂಬಂಧಪಟ್ಟವರು, ಶಾಸಕರು ಇಲ್ಲಿನ ಭೂಮಿಯನ್ನು ಡೀನೋಟಿಫೈ ಮಾಡಿಸಿ, ಬಿಡಿಎ ಹಂಚಿಕೆ ಮಾಡುವುದಕ್ಕಿಂತಲೂ ಮುನ್ನವೇ ಇಂದಿನ ಮಾರುಕಟ್ಟೆ ದರದಲ್ಲಿ ರಾಜಾರೋಷವಾಗಿ ಮಾರುತ್ತಿದ್ದಾರೆ. ಬಿಡಿಎ ಬೆಂಬಲವಿಲ್ಲದೆ ಈ ಕೆಲಸ ಹೇಗೆ ಸಾಧ್ಯ? ಬಿಡಿಎಗೆ ಸೇರಿದ 56 ಉದ್ಯಾನವನಗಳಲ್ಲಿ ಅಕ್ರಮವಾಗಿ ದೇವಸ್ಥಾನಗಳು ನಿರ್ಮಾಣಗೊಂಡಿವೆ.

ಅಕ್ರಮ ಕಟ್ಟಡಗಳಿವೆ. ಕೆಲವೆಡೆ ರೆಸಾರ್ಟ್‌ಗಳೂ ಇವೆ. ನಾಗರಿಕರ ಸೌಲಭ್ಯಕ್ಕೆಂದು ಮೀಸಲಿಟ್ಟ ಜಾಗಗಳೆಲ್ಲಾ ಪ್ರಭಾವಿಗಳ ನೆರವಿನಿಂದ ಕಬಳಿಕೆಯಾಗಿವೆ. ಇನ್ನೂ ವಿಸ್ಮಯವೆಂದರೆ ಕಳೆದ ಹತ್ತುವರ್ಷಗಳಿಂದ ಶ್ರೀಸಾಮಾನ್ಯನಿಗೆ ಬಿಡಿಎ ಒಂದು ನಿವೇಶನವನ್ನೂ ನೀಡಿಲ್ಲ. ಆದರೆ ಇದೇ ವೇಳೆಯಲ್ಲಿ ನೂರಾರು ಖಾಸಗಿ ಬಡಾವಣೆಗಳು ತಲೆಎತ್ತಿವೆ. ರಿಯಲ್‌ಎಸ್ಟೇಟ್ ದಂಧೆ ಮುಗಿಲಿಗೇರಿದೆ.

ಖಾಸಗಿಯವರಿಗೆ ಸಾಧ್ಯವಾದದ್ದು ಬಿಡಿಎಗೆ ಏಕೆ ಸಾಧ್ಯವಾಗುತ್ತಿಲ್ಲ? `ಜಿ' ಕೆಟಗರಿಯಲ್ಲಿ ಪ್ರಭಾವಿಗಳಿಗೆ ನಿವೇಶನ ಕೊಡಲು ಮಾತ್ರ ಬಿಡಿಎ ಇದೆಯೇ? ಎಲ್ಲ ಶಾಸಕರಿಗೆ, ಸಂಸದರಿಗೆ ಕಣ್ಣುಮುಚ್ಚಿಕೊಂಡು ನಿವೇಶನಗಳನ್ನು ಹಂಚುವುದಕ್ಕೆ ಬಿಡಿಎ ಇದೆಯೇ? ನಿಷ್ಕ್ರಿಯವಾಗಿರುವ ಬಿಡಿಎ ಭ್ರಷ್ಟಾಚಾರದ ಕೇಂದ್ರವೇ ಆದಂತಿದೆ. ಸಾರ್ವಜನಿಕರ ಒಂದು ಸಣ್ಣ ಆಸೆಯನ್ನೂ ಈಡೇರಿಸಲು ಸಾಧ್ಯವಾಗದ ಬಿಡಿಎ ಮುಚ್ಚುವುದೇ ಲೇಸಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.