ADVERTISEMENT

ಭ್ರಷ್ಟರಿಗೆ ತಕ್ಕಪಾಠ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಆರ್.ಬಾಲಕೃಷ್ಣನ್ ಪಿಳ್ಳೈ ಹಾಗೂ ಇನ್ನಿಬ್ಬರಿಗೆ ಸುಪ್ರೀಂಕೋರ್ಟ್ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಪಿಳ್ಳೈ ಅವರು 1982ರಲ್ಲಿ ವಿದ್ಯುತ್ ಸಚಿವರಾಗಿದ್ದಾಗ ಇಡಮಲಯಾರ್ ಜಲಾಶಯದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಗುತ್ತಿಗೆಯನ್ನು ತಮಗೆ ಬೇಕಾದವರಿಗೆ ಹೆಚ್ಚಿನ ದರಕ್ಕೆ ನೀಡಿದ್ದರು. ಇದರಿಂದ ವಿದ್ಯುತ್ ಮಂಡಳಿಗೆ 2 ಕೋಟಿ ರೂಪಾಯಿ ನಷ್ಟವಾಗಿತ್ತು. ಗುತ್ತಿಗೆದಾರರಿಂದ ಪಿಳ್ಳೈ ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿತ್ತು.

ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ವಿಶೇಷ  ನ್ಯಾಯಾಲಯ ಪಿಳ್ಳೈ ಅವರ ಮೇಲಿನ ಆರೋಪವನ್ನು ಎತ್ತಿ ಹಿಡಿದಿತ್ತು. ಆದರೆ ಈ ತೀರ್ಪನ್ನು ಕೇರಳ  ಹೈಕೋರ್ಟ್ ತಳ್ಳಿಹಾಕಿ ಪಿಳ್ಳೈ ಹಾಗೂ ಇತರ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ಪ್ರಕರಣದ ವಿರುದ್ಧ ಈಗಿನ ಮುಖ್ಯಮಂತ್ರಿ ಹಾಗೂ ಹಿಂದಿನ ವಿರೋಧ ಪಕ್ಷದ ನಾಯಕ ಅಚ್ಯುತಾನಂದನ್ ಅವರು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.
 
ಭ್ರಷ್ಟಾಚಾರ ಮಾಡಿದ ರಾಜಕಾರಣಿಗಳು ತಮ್ಮ ಅಧಿಕಾರ ಬಳಸಿ ಶಿಕ್ಷೆ ತಪ್ಪಿಸಿಕೊಳ್ಳುತ್ತಾರೆ ಎಂಬ ಜನರ ನಂಬಿಕೆಯನ್ನು ಸುಪ್ರೀಂಕೋರ್ಟಿನ ಈ ತೀರ್ಪು ಹುಸಿಗೊಳಿಸಿದೆ. ತೀರ್ಪು ಪ್ರಕಟವಾಗುವುದು ತಡವಾದರೂ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ತೀರ್ಪು ಸಾರಿದೆ. ಇದು ಅತ್ಯಂತ ಸ್ವಾಗತಾರ್ಹ ತೀರ್ಪು.

 ಭ್ರಷ್ಟಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗಬೇಕು ಎಂದು ಜನರು ಬಯಸುತ್ತಾರೆ. ಸರ್ಕಾರಗಳೂ ಭ್ರಷ್ಟರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದೇ ಹೇಳುತ್ತವೆ. ದುರದೃಷ್ಟದ ಸಂಗತಿ ಎಂದರೆ ಇಂತಹ ಪ್ರಕರಣಗಳ ವಿಚಾರಣೆ ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಮುಗಿಯುವುದೇ ಇಲ್ಲ.  ಅಂತಿಮ ತೀರ್ಪು ಪ್ರಕಟವಾಗುವ ವೇಳೆಗೆ ಜನರಿಗೆ ಅದರಲ್ಲಿ ಆಸಕ್ತಿ ಉಳಿದಿರುವುದಿಲ್ಲ. ಅನೇಕ ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಫಿರ್ಯಾದುದಾರರು ಇಬ್ಬರೂ ಬದುಕಿರುವುದಿಲ್ಲ. ಭ್ರಷ್ಟಾಚಾರ ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದಾದರೆ ಉಳಿದವರು ಅದಕ್ಕೆ ಕೈಹಾಕಲು ಹಿಂಜರಿಯುತ್ತಾರೆ.

ಈ ಹಿನ್ನೆಲೆಯಲ್ಲಿಯೇ ಪಿಳ್ಳೈ ಪ್ರಕರಣದ ತೀರ್ಪು ನೀಡುವಾಗ ಸುಪ್ರೀಂಕೋರ್ಟ್ ಭ್ರಷ್ಟಾಚಾರದ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು. ಹೈಕೋರ್ಟುಗಳು ಇದರ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ವಿಚಾರಣೆಯ ಪ್ರಗತಿ ಕುರಿತ ವರದಿಯನ್ನು ಸುಪ್ರೀಂಕೋರ್ಟಿಗೆ ನೀಡಬೇಕು ಎಂದು ನಿರ್ದೇಶನ ನೀಡಿದೆ. ಈ ನಿರ್ಧಾರವೂ ಸ್ವಾಗತಾರ್ಹ. ಕರ್ನಾಟಕ ಸೇರಿದಂತೆ ದೇಶದ ಉದ್ದಗಲದಲ್ಲಿ ಸಾವಿರಾರು ಭ್ರಷ್ಟಾಚಾರದ ಪ್ರಕರಣಗಳು ನ್ಯಾಯಾಲಯಗಳ ಮುಂದೆ ಇವೆ. ಈ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡಿ ಮುಗಿಸಬೇಕು. ಭ್ರಷ್ಟಾಚಾರಿ ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಅವನಿಗೆ ಶಿಕ್ಷೆ ತಪ್ಪಿದ್ದಲ್ಲ ಎನ್ನುವಂತಾದರೆ ಭ್ರಷ್ಟಾಚಾರ ನಿಯಂತ್ರಣಕ್ಕೆ   ಬಂದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.