ADVERTISEMENT

ಮರುಪರಿಶೀಲನೆ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ಕೋಮು ಹಿಂಸೆ ನಿಗ್ರಹಿಸಲು ಅವಶ್ಯಕವಾದ ಪ್ರಬಲ ಕಾನೂನು ರೂಪಿಸುವುದಕ್ಕೆ ರಾಜ್ಯಗಳ ಅಭಿಪ್ರಾಯ ಕ್ರೋಡೀಕರಿಸುವ ಯತ್ನದಲ್ಲಿ ಕೇಂದ್ರದ ಯುಪಿಎ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡಿಲ್ಲ.

ರಾಷ್ಟ್ರೀಯ ಭಾವೈಕ್ಯ ಮಂಡಲಿ ಸಭೆಯನ್ನು ಮೂರು ವರ್ಷಗಳ ನಂತರ ಕರೆದಿದ್ದರೂ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲು ಉದ್ದೇಶಿಸಿದ್ದ ಕೋಮು ಹಿಂಸೆ ಹಾಗೂ ಯೋಜಿತ ದಾಳಿ ತಡೆ ಮಸೂದೆಯ ಕರಡಿನ ಕುರಿತಾಗಿ ಯಾವೊಂದು ಮಾಹಿತಿಗಳನ್ನು ರಾಜ್ಯಗಳಿಗೆ ನೀಡದೆ ಇರುವ ಕಾರಣ ಪ್ರತಿಪಕ್ಷಗಳ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ.

ಸರ್ಕಾರದಲ್ಲಿ ಭಾಗಿಯಾಗಿರುವ ತೃಣಮೂಲ ಕಾಂಗ್ರೆಸ್ ಕೂಡ ಕರಡು ಮಸೂದೆ ಒಕ್ಕೂಟ ವ್ಯವಸ್ಥೆಯನ್ನು ಭಗ್ನ ಗೊಳಿಸುವ ದುಷ್ಟ ಉದ್ದೇಶ ಹೊಂದಿದೆ ಎಂದು ಉಗ್ರವಾಗಿ ಖಂಡಿಸಿದೆ.
 
ವಿಭಿನ್ನ ರಾಜಕೀಯ ಪಕ್ಷಗಳಿಗೆ ಸೇರಿದ ಆರು ಮಂದಿ ಮುಖ್ಯಮಂತ್ರಿಗಳು ಸಭೆಗೆ ಗೈರು ಹಾಜರಾಗಿರುವುದು ಕೇಂದ್ರ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಆಗಿರುವ ಮುಖಭಂಗ.

ಭಯೋತ್ಪಾದನೆ ಮತ್ತು ಕೋಮುವಾದದ ತೀವ್ರ ಪರಿಣಾಮಗಳನ್ನು ಸಂಘಟಿತವಾಗಿ ಎದುರಿಸುವುದಕ್ಕೆ ಕಾಯ್ದೆಯನ್ನು ರೂಪಿಸುವ ಜವಾಬ್ದಾರಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕರ್ತವ್ಯದಲ್ಲಿ ಸರ್ಕಾರ ವಿಫಲವಾಗಿದೆ. ಅಷ್ಟೇ ಅಲ್ಲ, ಸರ್ಕಾರದಲ್ಲಿ ಸೇರಿಕೊಂಡಿರುವ ಮಿತ್ರಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.

ಯಾರನ್ನೋ ತೃಪ್ತಿಪಡಿಸಲು ರೂಪಿಸಿದಂತೆ ತೋರುವ ಕರಡು ಮಸೂದೆಯ ರಚನೆಯಲ್ಲಿ ಬಹುಸಂಖ್ಯಾತರನ್ನು ಸಂಶಯದಿಂದ ನೋಡುವ ಅಪಾಯಕಾರಿ ಧೋರಣೆ ವ್ಯಕ್ತವಾಗುತ್ತಿದೆ ಎಂದು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಎತ್ತಿರುವ ಆಕ್ಷೇಪ ಸರಿಯಾಗಿಯೇ ಇದೆ. ಇದು ಸಮಾಜದಲ್ಲಿ ಒಡಕನ್ನು ತರುವಂಥ ಯತ್ನ ಎಂಬುದರಲ್ಲಿ ಸಂಶಯವಿಲ್ಲ.

ಕಾನೂನು ವ್ಯವಸ್ಥೆಯ ಪಾಲನೆ ರಾಜ್ಯಗಳ ಹೊಣೆಗಾರಿಕೆ. ಹಿಂಸಾಚಾರ ತಡೆಯುವುದರಲ್ಲಿ ಅವುಗಳ ಪಾತ್ರ ಹೆಚ್ಚು ಮಹತ್ವದ್ದಾಗಿದೆ. ಭಯೋತ್ಪಾದನೆ ನಿಗ್ರಹಕ್ಕಾಗಿ ಕೇಂದ್ರವು ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ತಂದಾಗಲೇ ಈ ಕ್ರಮ ರಾಜ್ಯಗಳ ಸ್ವಾತಂತ್ರ್ಯವನ್ನು ಮೊಟಕು ಮಾಡುತ್ತದೆ ಎಂಬ ಸಂಶಯವನ್ನು ವ್ಯಕ್ತಪಡಿಸಲಾಗಿತ್ತು.
 
ಕೋಮು ಹಿಂಸೆ ನಿಗ್ರಹ ಕುರಿತ ಈ ಕರಡಿನಲ್ಲಿ ಕೇಂದ್ರವು ಕೋಮು ಸಂಬಂಧಿತ ಗಲಭೆಯ ಸಂದರ್ಭಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಅವಕಾಶದ ದುಷ್ಟ ಹುನ್ನಾರವನ್ನು ಇಟ್ಟುಕೊಂಡಿದೆ ಎಂಬ ಸಂಶಯಕ್ಕೆ ಆಸ್ಪದ ಕೊಟ್ಟಿದೆ.

ಯಾವುದೇ ಪೂರ್ವಯೋಜಿತ ಗಲಭೆ ನಿರ್ದಿಷ್ಟ ಜಾತಿ, ಕೋಮಿಗೆ ಮಾತ್ರ ಸೀಮಿತವಾಗಿರುತ್ತದೆ ಎಂಬ ಸರ್ಕಾರದ ಕಲ್ಪನೆಯೇ ಅಪಾಯಕಾರಿಯಾದದ್ದು. ಕಾನೂನು ಉಲ್ಲಂಘನೆಯ ಪ್ರಕರಣಗಳನ್ನು, ಸಮುದಾಯವನ್ನು ಆಧರಿಸಿ ನೋಡುವಂಥ ಚಿಂತನೆ ಬಾಲಿಶವಾದದ್ದು.

ಹಿಂಸಾಚಾರ ನಿಯಂತ್ರಣ ಕಾನೂನು ನಿರ್ದಿಷ್ಟ ವರ್ಗದ ರಕ್ಷಣೆಗಾಗಿ ಎಂಬ ಕಲ್ಪನೆಯೂ ಅತ್ಯಂತ ಸಂಕುಚಿತ ಸ್ವರೂಪದ್ದಾಗಿದೆ.  ಸಂವಿಧಾನದ ಆಶಯಗಳಿಗೆ ಮತ್ತು ದೇಶದ ಒಕ್ಕೂಟ ವ್ಯವಸ್ಥೆಗೆ ಯಾವ ಧಕ್ಕೆಯೂ ಉಂಟಾಗದಂತೆ ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳ ಜೊತೆ ಮುಕ್ತವಾಗಿ ಚರ್ಚೆ ನಡೆಸಿ ಸಮರ್ಪಕ ಕಾಯ್ದೆಯನ್ನು ರೂಪಿಸುವ ಪ್ರಬುದ್ಧತೆಯನ್ನು ಕೇಂದ್ರವು ತೋರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.