ADVERTISEMENT

ಮಹತ್ವದ ಮೈಲಿಗಲ್ಲು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST

ದೆಹಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ  ಹಾಗೂ ಕೊಲೆ ಪ್ರಕರಣದಲ್ಲಿ ನಾಲ್ವರಿಗೆ ದೆಹಲಿಯ ತ್ವರಿತ ನ್ಯಾಯಾಲಯ ಗಲ್ಲುಶಿಕ್ಷೆಯನ್ನು ಪ್ರಕಟಿಸಿದೆ. ಒಬ್ಬ ಬಾಲಾರೋಪಿ ಸೇರಿದಂತೆ ಆರು ಮಂದಿ ಯಿಂದ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರಕ್ಕೊಳಗಾಗಿ, ಸಿಂಗಪುರದ ಆಸ್ಪತ್ರೆ ಯಲ್ಲಿ ಮೃತಪಟ್ಟ ದೆಹಲಿ ವಿದ್ಯಾರ್ಥಿನಿಯ ಈ ಪ್ರಕರಣದ ತೀರ್ಪಿಗಾಗಿ ಇಡೀ ರಾಷ್ಟ್ರದ ಕಣ್ಣು ನ್ಯಾಯಾಲಯದತ್ತ ನೆಟ್ಟಿತ್ತು.

‘ಅಪರೂಪದಲ್ಲಿ ಅಪರೂಪದ’ ಈ ಪ್ರಕರಣಕ್ಕೆ ಈಗಿರುವ ಕಾನೂನಿನ ಚೌಕಟ್ಟಿನಲ್ಲಿ ಗಲ್ಲು ಶಿಕ್ಷೆಯಾಗಿದೆ. ವಿಚಾರಣೆಯನ್ನು ಶೀಘ್ರವಾಗಿ ಪೂರೈಸಿ ಒಂಬತ್ತು ತಿಂಗಳೊಳಗೇ ತೀರ್ಪು ನೀಡಿರುವುದು ಇಲ್ಲಿ ಮಹತ್ವದ ಅಂಶ. ಆರೋಪಿಗಳ ವಿರುದ್ಧದ ಮೊಕದ್ದಮೆಯನ್ನು ಬಲಪಡಿಸುವಲ್ಲಿ ಪ್ರಾಸಿಕ್ಯೂಷನ್ ಹಾಗೂ ಪೊಲೀಸ್ ತನಿಖಾ ತಂಡದ ಕಾರ್ಯವೈಖರಿ ಶ್ಲಾಘನಾರ್ಹ.

ಸಾಕ್ಷ್ಯ ಸಂಗ್ರಹ ಹಾಗೂ ವಿಶ್ಲೇಷಣೆಗಳಿಗೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ  ವಹಿಸಿದ ಮುತುವರ್ಜಿ ಮಾದರಿ ಎನಿಸುವಂತಹದ್ದು. ಈ ನಿಟ್ಟಿನಲ್ಲಿ ದೆಹಲಿ ಪೊಲೀಸರ ವೃತ್ತಿಪರತೆ ಹಾಗೂ ವೈಜ್ಞಾನಿಕ ಸಾಧನಗಳ ಸೂಕ್ತ  ಬಳಕೆ ಬಗ್ಗೆ ಕೋರ್ಟ್‌ನಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಬಹುಶಃ ದೊಡ್ಡ ಪ್ರಮಾಣ ದಲ್ಲಿ ಗಮನ ಸೆಳೆಯದೆ, ರಾಷ್ಟ್ರದ ಎಲ್ಲೆಡೆಯಿಂದ ವರದಿಯಾಗುತ್ತಿರುವ ಎಲ್ಲಾ ಅತ್ಯಾಚಾರ ಪ್ರಕರಣಗಳ ತನಿಖೆಗಳಲ್ಲೂ ಇಂತಹದೇ ವೃತ್ತಿಪರತೆಯ ಪ್ರದರ್ಶನ ಹಾಗೂ ತ್ವರಿತ ಗತಿಯ ನ್ಯಾಯದಾನ ಸದ್ಯದ ತುರ್ತು.   

‘ಮಹಿಳೆ ವಿರುದ್ಧದ ಲೈಂಗಿಕ ಹಿಂಸೆ ಪ್ರಕರಣಗಳು ಹೆಚ್ಚಾಗುತ್ತಿರುವ ಸದ್ಯದ ಸಂದರ್ಭದಲ್ಲಿ   ನ್ಯಾಯಾಲಯ ಕುರುಡಾಗಿರುವುದು ಸಾಧ್ಯವಿಲ್ಲ. ಇಂತಹದನ್ನು ಸಹಿಸುವುದು ಅಸಾಧ್ಯ ಎಂಬಂತಹ  ಬಲವಾದ ಸಂದೇಶ ನೀಡುವಂತಾಗಬೇಕು’ ಎಂದು ಗಲ್ಲುಶಿಕ್ಷೆಯ ತೀರ್ಪು ನೀಡಿದ ನ್ಯಾಯಾ ಧೀಶರು ಹೇಳಿದ್ದಾರೆ.

ಪೈಶಾಚಿಕ ರೀತಿಯಲ್ಲಿ ಅತ್ಯಾಚಾರ ಎಸಗಿ, ಯುವತಿಯ ಸಾವಿಗೆ ಕಾರಣವಾದ ಸದ್ಯದ ಪ್ರಕರಣದಲ್ಲಂತೂ ಗಲ್ಲುಶಿಕ್ಷೆಯಾಗಬೇಕೆಂಬ ನಿರೀಕ್ಷೆ ಅನೇಕ ವಲಯಗಳಿಂದ ವ್ಯಕ್ತವಾಗಿತ್ತು. ಭಾವನಾತ್ಮಕವಾಗಿ ಪ್ರತಿಕ್ರಿಯಿ ಸಿದಲ್ಲಿ ಇದು ಸರಿ. ಆದರೆ ಅತ್ಯಾಚಾರ ಪ್ರಕರಣಗಳ ತಡೆಗೆ ಗಲ್ಲು ಶಿಕ್ಷೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ಬಗ್ಗೆ  ನಡೆಯುತ್ತಿರುವ ಚರ್ಚೆಗಳನ್ನು ಇದೇ ಸಂದರ್ಭದಲ್ಲಿ ಗಮನಿಸಬೇಕು.

ಕ್ರಿಮಿನಲ್ ಕಾನೂನುಗಳ ತಿದ್ದುಪಡಿಗೆ ಶಿಫಾರಸುಗಳನ್ನು ಮಾಡಲು ನೇಮಕಗೊಂಡಿದ್ದ  ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವರ್ಮಾ ಸಮಿತಿಯೂ, ಅತ್ಯಾಚಾರ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಶಿಫಾರಸು ಮಾಡಿಲ್ಲ. ಶಿಕ್ಷೆಯ ತೀವ್ರತೆಗಿಂತ ಶಿಕ್ಷೆಯ ಖಚಿತತೆ ಅಪ ರಾಧಗಳ ನಿಯಂತ್ರಣದಲ್ಲಿ ಪರಿಣಾಮಕಾರಿ ಎಂಬುದು ಸಾಬೀತಾಗಿರುವ ಸಂಗತಿ. ಗಲ್ಲುಶಿಕ್ಷೆಯ ಭೀತಿ ಅಡ್ಡಪರಿಣಾಮಗಳಿಗೂ ಕಾರಣವಾಗಬಹುದು ಎಂಬುದನ್ನು ಗಮನಿಸಬೇಕು.

ಅತ್ಯಾಚಾರಕ್ಕೊಳಗಾಗುವ ವ್ಯಕ್ತಿ ಪ್ರಮುಖ ಸಾಕ್ಷಿಯಾಗುವುದರಿಂದ, ಸಾಕ್ಷ್ಯ ನಾಶಕ್ಕಾಗಿ ಆಕೆಯನ್ನು ಅತ್ಯಾಚಾರಿಗಳೇ ಕೊಲೆ ಮಾಡುವ ಸಾಧ್ಯತೆ ಇರುತ್ತದೆ ಎಂಬುದನ್ನು ಅಲ್ಲಗಳೆಯ ಲಾಗುವುದಿಲ್ಲ. ದೆಹಲಿ ವಿದ್ಯಾರ್ಥಿನಿ ವಿರುದ್ಧದ ಸಾಮೂಹಿಕ ಅತ್ಯಾಚಾರ ಪ್ರಕರಣ, ಲೈಂಗಿಕ ಅಪರಾಧಗಳ ಅನೇಕ ಮಗ್ಗುಲುಗಳನ್ನು ಸಾರ್ವಜನಿಕ ಚರ್ಚಾ ವಲಯಕ್ಕೆ ತಂದಿದೆ ಎಂಬುದು ಮುಖ್ಯ. ಈ ಪ್ರಕರಣದ ಒಬ್ಬ ಆರೋಪಿ ಸೆರೆಯಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡರೆ ಮತ್ತೊಬ್ಬ ಬಾಲಾರೋಪಿಗೆ ಮೂರು ವರ್ಷಗಳ ಶಿಕ್ಷೆಯನ್ನು ಕಳೆದ ತಿಂಗಳು ಬಾಲ ನ್ಯಾಯ ಮಂಡಳಿ ವಿಧಿಸಿದೆ. ಆದರೆ ಅತ್ಯಾಚಾರ ಅಥವಾ ಕೊಲೆಯಂತಹ ಹೀನ ಅಪರಾಧಗಳನ್ನು ಎಸಗುವ ಬಾಲಾರೋಪಿಗಳಿಗೆ ವಿಧಿಸುವ ಈ ಅಲ್ಪ ಶಿಕ್ಷೆ ಎಷ್ಟರಮಟ್ಟಿಗೆ ಸರಿ ಎಂಬ ಬಗೆಗೂ ಚರ್ಚೆಗಳಾಗುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT