ADVERTISEMENT

ಮುಗ್ಗರಿಸಿದ ಕಿಂಗ್‌ಫಿಷರ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

`ಮದ್ಯದ ದೊರೆ~ ವಿಜಯ ಮಲ್ಯ ಒಡೆತನದ ಕಿಂಗ್‌ಫಿಷರ್ ವಿಮಾನಯಾನ ಸಂಸ್ಥೆಯ `ಹಾರಾಟ ಪರವಾನಗಿ~ ಅಮಾನತುಗೊಂಡಿರುವುದು ಒಟ್ಟಾರೆ ದೇಶಿ ವಿಮಾನಯಾನ ರಂಗ ಎದುರಿಸುತ್ತಿರುವ ಬಿಕ್ಕಟ್ಟಿಗೆ ಕನ್ನಡಿ ಹಿಡಿಯುತ್ತದೆ.
 
ನಷ್ಟ ಮತ್ತು ಸಾಲದ ಸುಳಿಗೆ ಸಿಲುಕಿರುವ ವಿಮಾನಯಾನ  ಸಂಸ್ಥೆಯನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸಲು  ಪ್ರಯತ್ನಗಳು ನಡೆಯದಿರುವುದು ಮತ್ತು ಎಂಜಿನಿಯರ್‌ಗಳ ಮುಷ್ಕರದಿಂದ ವಿಮಾನಗಳು ಹಾರಾಟಕ್ಕೆ ಸನ್ನದ್ಧ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಪ್ರಯಾಣಿಕರ ಸುರಕ್ಷತೆ  ಪರಿಗಣಿಸಿ  ಕೈಗೊಂಡಿರುವ ಈ ನಿರ್ಧಾರ ಸರಿಯಾಗಿದೆ.

ವಹಿವಾಟು ನಷ್ಟ, ಬ್ಯಾಂಕ್ ಸಾಲ, ವೇತನ ಪಾವತಿ ವಿಳಂಬ, ಸಿಬ್ಬಂದಿ ಮುಷ್ಕರ, ಬೀಗಮುದ್ರೆ ಮತ್ತಿತರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಸಂಸ್ಥೆಗೆ ಪುನಶ್ಚೇತನ ನೀಡಲು  ಮನಸ್ಸೇ ಮಾಡದ ಪ್ರವರ್ತಕರು ಈಗ ಅದಕ್ಕೆ ಬೆಲೆ ತೆತ್ತಿದ್ದಾರೆ. ಆಡಂಬರದ ವ್ಯಕ್ತಿತ್ವದ ಖ್ಯಾತಿಯ ಮಲ್ಯ, ತಮ್ಮ ವರ್ಣರಂಜಿತ ವ್ಯಕ್ತಿತ್ವದಂತೆಯೇ, ದೇಶಿ ವಿಮಾನ ಯಾನದಲ್ಲಿ ಈ ಹಿಂದೆ ಎಂದೂ ಕಾಣದ ಬಗೆಯಲ್ಲಿ ವಿಲಾಸಿ ಸೌಲಭ್ಯ ಪರಿಚಯಿಸಿದ್ದರು.
 
ಈ ಥಳುಕಿನ ವಹಿವಾಟಿನಲ್ಲಿ ನಷ್ಟದ ಹುಳಗಳು ತುಂಬಿಕೊಂಡಿರುವುದೇ ಸದ್ಯದ ಬಿಕ್ಕಟ್ಟಿಗೆ ಕಾರಣ.  ಸಾಮ್ರಾಜ್ಯ ವಿಸ್ತರಿಸಲು ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಒಡೆತನದ `ಏರ್ ಡೆಕ್ಕನ್~ ವಿಮಾನ ಯಾನ ಸಂಸ್ಥೆ ಖರೀದಿಸಿ ಹಲವು ಪ್ರಯೋಜನ ಪಡೆದರೂ, ನಷ್ಟ ಮಲ್ಯ ಅವರನ್ನು ಬೆನ್ನಟ್ಟಿತು. ಪೂರ್ಣ ಪ್ರಮಾಣದ ವಿಲಾಸಿ ಕಿಂಗ್‌ಫಿಷರ್ ಜತೆಗೆ,  ಅಗ್ಗದ - ಕಡಿಮೆ ಸೌಲಭ್ಯದ `ಕಿಂಗ್‌ಫಿಷರ್ ರೆಡ್~ ಬ್ರಾಂಡ್ ಸೇವೆ ಆರಂಭಿಸಿ ಅದರಲ್ಲೂ ಕೈಸುಟ್ಟುಕೊಂಡರು.

ಮಲ್ಯ ಅವರ ವರ್ತನೆ ಗಮನಿಸಿದರೆ, ವಿಮಾನ ಯಾನ ಸೇವೆಯನ್ನು ಉದ್ಯಮ ಎಂದು ಗಂಭೀರವಾಗಿ ಪರಿಗಣಿಸುವ ಬದಲಿಗೆ ಭಾವನಾತ್ಮಕ ಕಾರಣಗಳಿಗಾಗಿಯೇ ಸ್ಥಾಪಿಸ್ದ್ದಿದರೇ ಎಂಬ ಅನುಮಾನ ಮೂಡುತ್ತದೆ. ಈ ವಹಿವಾಟು  ಸಾಲ- ನಷ್ಟದ ಸುಳಿಗೆ ಸಿಲುಕಿರುವುದು ಗೊತ್ತಾಗಿಯೂ ಅದರಿಂದ ಹೊರ ಬರಲು ಪ್ರಾಮಾಣಿಕ ಪ್ರಯತ್ನವನ್ನೇ ನಡೆಸಿಲ್ಲ.

ಸಂಸ್ಥೆಯ ಆರ್ಥಿಕ ಪುನಶ್ಚೇತನಕ್ಕೆ 17 ಬ್ಯಾಂಕ್ ಒಳಗೊಂಡ `ಆರ್ಥಿಕ ಒಕ್ಕೂಟ~ ಮುಂದೆ ಬಂದರೂ  ಅದನ್ನು ಕಾರ್ಯಗತಗೊಳಿಸಲೂ  ಉತ್ಸಾಹ ತೋರಿಸಲಿಲ್ಲ. ಮಲ್ಯ ಅವರ ಮದ್ಯದ ವಹಿವಾಟಿನ ಮೇಲೆಯೂ ಇದರ ಪರಿಣಾಮಗಳು ಉಂಟಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕು.

ದೇಶಿ ವಿಮಾನ ಯಾನ ರಂಗದಲ್ಲಿ ಸದ್ಯಕ್ಕೆ 7 ವಿಮಾನ ಯಾನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಸ್ಪರ್ಧೆ ತೀವ್ರಗೊಂಡಿದೆ. ಸ್ಪರ್ಧಾತ್ಮಕ ಬೆಲೆಗಳಿಂದಾಗಿ  ಪ್ರಯಾಣ ದರ ಕೈಗೆಟುಕುವಂತಾಗಿದ್ದರೂ, ಪ್ರಯಾಣಿಕರನ್ನು ಸೆಳೆಯಲು ದರ ಹೆಚ್ಚಿಸಲಾಗುತ್ತಿಲ್ಲ. ವಿಮಾನ ಯಾನ ನಿರ್ವಹಣಾ ವೆಚ್ಚವೂ ಹೆಚ್ಚುತ್ತಿದೆ.

ಕಾರ್ಯಾಚರಣೆ ವೆಚ್ಚದಲ್ಲಿ ಶೇ 50ರಷ್ಟಿರುವ ಇಂಧನ ವೆಚ್ಚದ ಪಾಲು ದೊಡ್ಡ ಹೊರೆಯಾಗಿದೆ. ಖಾಸಗಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ವಿಮಾನ ನಿಲ್ದಾಣಗಳು ದುಬಾರಿ ಶುಲ್ಕ ವಿಧಿಸುತ್ತಿವೆ. ಪ್ರಯಾಣಿಕರ ಸಂಖ್ಯೆ, ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಿದ್ದರೂ ವಿಮಾನ ಯಾನ ಸಂಸ್ಥೆಗಳು ನಷ್ಟದಲ್ಲಿವೆ. 

ಈಗ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನಾನುಕೂಲ ಆಗದ ರೀತಿಯಲ್ಲಿ, ಕಿಂಗ್‌ಫಿಷರ್‌ನ `ಚಳಿಗಾಲದ ಹಾರಾಟ~ದ ವೇಳಾಪಟ್ಟಿಯನ್ನು  ಬೇರೆ ವಿಮಾನ ಯಾನ ಸಂಸ್ಥೆಗಳಿಗೆ  ಆದ್ಯತೆ ಮೇರೆಗೆ ವರ್ಗಾಯಿಸಬೇಕು.

ಪ್ರಯಾಣ ದರ ದುಬಾರಿಗೊಳ್ಳದಂತೆಯೂ ಸರ್ಕಾರ ಎಚ್ಚರವಹಿಸಬೇಕು. ಈ ಬಿಕ್ಕಟ್ಟಿನಿಂದ ಹೊರ ಬರುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ವಿಜಯ್ ಮಲ್ಯ ಪ್ರಾಮಾಣಿಕ ಪ್ರಯತ್ನ ಮಾಡಿ ಮತ್ತೆ  `ರಂಗ ಪ್ರವೇಶ~ ಮಾಡಬಹುದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.