ADVERTISEMENT

ಮೌಲ್ಯಮಾಪನ ಅಗತ್ಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಕೇಂದ್ರದ ಐದು ಪ್ರಮುಖ ಯೋಜನೆಗಳಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ, ಸಮಗ್ರ ಶಿಶು  ಅಭಿವೃದ್ಧಿ  ಕಾರ್ಯಕ್ರಮ ಮತ್ತು ಗ್ರಾಮೀಣ ಕುಡಿಯುವ ನೀರು ಯೋಜನೆಗಳ  ಅನುಷ್ಠಾನ ಮತ್ತು ಅವುಗಳಿಂದ ಆಗಿರುವ ಪರಿಣಾಮಗಳ ಕುರಿತು ಖಾಸಗಿ ಪರಿಣತ ಸಂಸ್ಥೆಗಳಿಂದ  ಮೌಲ್ಯ ಮಾಪನ ಮಾಡಿಸಲು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ (ಕೆಇಎ) ನಿರ್ಧರಿಸಿದೆ. ಈ ಯೋಜನೆಗಳ ಸಮರ್ಪಕ ಅನುಷ್ಠಾನದ ದೃಷ್ಟಿಯಿಂದ ಇದೊಂದು ಸ್ವಾಗತಾರ್ಹ ನಿರ್ಧಾರ.

ಯೋಜನೆಗಳ ಅನುಷ್ಠಾನವನ್ನು ಮೌಲ್ಯಮಾಪನ ಮಾಡುವ ಖಾಸಗಿ ಸಂಸ್ಥೆಗಳನ್ನು ಕೆಇಎ ಆಯ್ಕೆ ಮಾಡ ಲಿದೆ. ಈ ಸಂಸ್ಥೆಗಳು ರಾಜ್ಯದ ಎಲ್ಲ  176 ತಾಲ್ಲೂಕುಗಳಲ್ಲಿಯೂ ಅಧ್ಯಯನ ನಡೆಸಬೇಕು. ಅಲ್ಲದೇ ವಲಯವಾರು ಕಚೇರಿಗಳನ್ನು ತೆರೆದು ಪ್ರತೀ ಮೂರು ತಿಂಗಳಿಗೊಮ್ಮೆ ವರದಿ ನೀಡಬೇಕು. ಕಳೆದ ಎರಡು ವರ್ಷಗಳಲ್ಲಿ ಈ ಯೋಜನೆಗಳ ಅನುಷ್ಠಾನದ ಬಗ್ಗೆ ಮೌಲ್ಯಮಾಪನ ಮಾಡಬೇಕು ಹಾಗೂ ಅಗತ್ಯವಾದ ಸುಧಾರಣೆಗಳ ಬಗ್ಗೆಯೂ ಶಿಫಾರಸು ಮಾಡಬೇಕು ಎಂದು ಪ್ರಾಧಿಕಾರ ಹೇಳಿದೆ. ಸರ್ಕಾರಿ ಯೋಜನೆಗಳನ್ನು  ಸ್ವತಂತ್ರ ಸಂಸ್ಥೆಗಳು ಮೌಲ್ಯ ಮಾಪನ ಮಾಡುವಂತಹ ವ್ಯವಸ್ಥೆ ಉತ್ತಮವಾದುದು. ಇದು ಮುಂದಿನ ಯೋಜನೆಗಳಿಗೆ ದಾರಿದೀಪವಾಗಬೇಕು.

ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಹೆಸರಿನಲ್ಲಿ ರಾಜ್ಯಗಳಿಗೆ ಕೋಟ್ಯಂತರ ರೂಪಾಯಿ ನೀಡುತ್ತದೆ. ಆದರೆ ಇಂತಹ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ವಾಗುತ್ತಿರುವುದನ್ನು ಪರಿಶೀಲಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ. ಹಲವಾರು ಯೋಜನೆಗಳಲ್ಲಿ ಅಕ್ರಮ ನಡೆದಿರುವುದು, ಹಣ ದುರುಪ ಯೋಗ, ಹಣ ವ್ಯರ್ಥ ಮಾಡಿರುವ ಉದಾಹರಣೆಗಳೂ ಇವೆ. ಈ ಬಗ್ಗೆ ಹಲವಾರು ಬಾರಿ ಮಹಾಲೇಖಪಾಲರ ವರದಿ ಆಕ್ಷೇಪ ವ್ಯಕ್ತಪಡಿಸಿದ್ದೂ ಇದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವ ಹಾರ ನಡೆದಿರುವುದು ಜಗಜ್ಜಾಹೀರಾಗಿದೆ. ಮೌಲ್ಯಮಾಪನ ವ್ಯವಸ್ಥೆಯಿಂದ ಇದನ್ನು ಸ್ವಲ್ಪಮಟ್ಟಿಗಾದರೂ ತಡೆಯ ಬಹುದಾಗಿದೆ.

ಯೋಜನೆಯ ಲಾಭ ಕಟ್ಟಕಡೆಯ ವ್ಯಕ್ತಿಗೆ ಸಿಗುತ್ತಿದೆಯೇ? ಯೋಜನೆಯ ಗುರಿಯನ್ನು ಮುಟ್ಟಲು ಸಾಧ್ಯವಾಗಿದೆಯೇ ಎನ್ನುವುದನ್ನೂ ಮೌಲ್ಯಮಾಪನದಿಂದ ಪತ್ತೆ ಮಾಡಬಹುದು. ಎರಡು ವರ್ಷದಲ್ಲಿ ಮೌಲ್ಯಮಾಪನವನ್ನು ಪೂರ್ಣಗೊಳಿಸಲು ನಿರ್ಧರಿಸಿರುವುದು ಕೂಡ ಸೂಕ್ತವಾಗಿದೆ.

ಆದರೆ ಈ ಮೌಲ್ಯಮಾಪನವೂ ಕಾಟಾಚಾರದ ವ್ಯವಸ್ಥೆ ಯಾಗಬಾರದು. ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಶಕ್ತಿಗಳು ಮೌಲ್ಯ ಮಾಪಕರ ಮೇಲೂ ಪ್ರಭಾವ ಬೀರದಂತೆ ತಡೆಯುವುದು  ಅತೀ ಮುಖ್ಯ. ಯಾವುದೇ  ವ್ಯವಸ್ಥೆ ಜಾರಿಗೆ ಬಂದರೂ ಅದನ್ನು ಸಡಿಲ ಗೊಳಿಸುವ ಶಕ್ತಿಗಳು ನಮ್ಮಲ್ಲಿ ಪ್ರಬಲವಾಗಿಯೇ ಇವೆ. ಇದನ್ನು ತಪ್ಪಿಸಬೇಕು.

ನಮ್ಮ ಯೋಜನೆ ಗಳೆಲ್ಲಾ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ ಎಂದು ಸರ್ಕಾರ ಪ್ರಮಾಣ ಪತ್ರ ಪಡೆದುಕೊಳ್ಳಲು ಈ ಮೌಲ್ಯಮಾಪನ ವ್ಯವಸ್ಥೆ ದಾರಿಯಾಗಬಾರದು. ಒಂದಿಷ್ಟು ಎಚ್ಚರಿಕೆ, ಪ್ರಾಮಾಣಿಕತೆ ಇದ್ದರೆ ಯಾವುದೇ ಯೋಜನೆಯನ್ನು ಯಶಸ್ವಿಗೊಳಿಸಬಹುದು. ಇದಕ್ಕೆ ಬೇಕಿರುವುದು ಇಚ್ಛಾಶಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.