ADVERTISEMENT

ರಸ್ತೆಗಳ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಬೆಂಗಳೂರು ಸೇರಿದಂತೆ ರಾಜ್ಯದ ಎಂಟು ನಗರಗಳಲ್ಲಿರುವ ಒಟ್ಟು 50 ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ರಾಜ್ಯ ಸರ್ಕಾರದ ಯೋಜನೆ ಸ್ವಾಗತಾರ್ಹ. ಬೆಂಗಳೂರಿನಲ್ಲಿ ಕೆಲವು ಪ್ರಮುಖ ರಸ್ತೆಗಳನ್ನು ಮಹಾನಗರ ಪಾಲಿಕೆ,  ಬಿಡಿಎ ಮತ್ತು ಇನ್ನೆರಡು ಸಂಸ್ಥೆಗಳ ಜೊತೆ ಸೇರಿ ಅಭಿವೃದ್ಧಿಪಡಿಸುವ ಯೋಜನೆ ಮೆಚ್ಚುಗೆಯ ಸಂಗತಿ. ರಾಜ್ಯ ಸರ್ಕಾರ ಈ ಕಾಮಗಾರಿಗಳಿಗಾಗಿ 131 ಕೋಟಿ ರೂಪಾಯಿಯನ್ನು ಕಾಯ್ದಿರಿಸಿರುವುದಾಗಿ ಹೇಳಿಕೊಂಡಿದೆ.
 

ಸ್ಥಳೀಯ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ಜಂಟಿ ಒಡಂಬಡಿಕೆಯ ಮೂಲಕ ಈ ಮೇಲ್ದರ್ಜೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದು ನಗರಗಳ ಅಭಿವೃದ್ಧಿಯ ದೃಷ್ಟಿಯಿಂದ ಅವಶ್ಯ. ವಾಸ್ತವವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ನಗರವೂ ಯೋಜನಾಬದ್ಧವಾಗಿ ನಿರ್ಮಾಣಗೊಂಡಿಲ್ಲ.

ಬೆಂಗಳೂರಂತೂ ನೂರಾರು ಹಳ್ಳಿಗಳು ಸೇರಿ ವಿಸ್ತರಣೆಗೊಂಡಿರುವ ಮಹಾನಗರ. ಇರುವ ಇಕ್ಕಟ್ಟಿನ ರಸ್ತೆಗಳನ್ನೇ ಹತ್ತಾರು ಬಾರಿ ಅಗೆದು ಬಗೆದು ಅಭಿವೃದ್ಧಿಪಡಿಸಲಾಗಿದೆ.
 
ಹಾಗಾಗಿ ರಸ್ತೆಗಳು ಅಂಕುಡೊಂಕಾಗಿ, ವಾಹನಗಳಾಗಲಿ ಪಾದಚಾರಿಗಳಾಗಲಿ ಸುರಕ್ಷಿತವಾಗಿ ಓಡಾಡುವಂತಹ ಸ್ಥಿತಿಯಲ್ಲಿಲ್ಲ. ವಾಹನ ನಿಲುಗಡೆಗೆ ಸೂಕ್ತವಾದ ಜಾಗವಂತೂ ಇಲ್ಲ. ಬೆಂಗಳೂರು ಬೇರೆ ಬೇರೆ ಕ್ಷೇತ್ರಗಳಲ್ಲಿನ ಸಾಧನೆಯಿಂದ ಎಷ್ಟೇ ಹೆಸರು ಗಳಿಸಿದ್ದರೂ ರಸ್ತೆ ವಿಷಯದಲ್ಲಿ ಮಾನ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.

ADVERTISEMENT


ಇಷ್ಟೇ ಅಲ್ಲದೆ, ಇರುವ ರಸ್ತೆಗಳಲ್ಲಿಯೇ ಒಳಚರಂಡಿ, ಕುಡಿಯುವ ನೀರು ಪೂರೈಸುವ ಪೈಪುಗಳು, ಹಲವು ಬಗೆಯ ಕೇಬಲ್‌ಗಳು ಹಾದು ಹೋಗಿರುವ ಕಾರಣ ರಸ್ತೆ ಅಗಲಗೊಳಿಸುವುದಾಗಲೀ, ವಿಸ್ತರಣೆ ಮಾಡುವುದಾಗಲಿ ಕಷ್ಟದ ಕೆಲಸವಾಗಿದೆ. ಇಂತಹ ಅವ್ಯವಸ್ಥೆಯಲ್ಲಿ ಮೆಟ್ರೊ ಕಾಮಗಾರಿಗಳಿಂದ ಇದ್ದ ಪ್ರಮುಖ ರಸ್ತೆಗಳೂ ಕುಲಗೆಟ್ಟು ಹೋಗಿವೆ.
 
ಪಾಲಿಕೆಯಾಗಲಿ ಅಥವಾ ಬಿಎಂಆರ್‌ಸಿಯಾಗಲಿ ಅವುಗಳನ್ನು ಅಲ್ಲಿಲ್ಲಿಯೆ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಈ ನಿರ್ಲಕ್ಷ್ಯದಿಂದ ಜನರಿಗೆ ಈಗಾಗಲೇ ನರಕಸದೃಶ ಅನುಭವವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈಗ ಗುರುತಿಸಿರುವ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿಯನ್ನು ಕೈಗೊಳ್ಳುವ ಮುನ್ನ ತಾತ್ಕಾಲಿಕವಾಗಿ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ರಸ್ತೆಗಳನ್ನು ಅಗಲಗೊಳಿಸುವ ಹಲವು ಯೋಜನೆಗಳು ಈಗಾಗಲೇ ನೆನೆಗುದಿಗೆ ಬಿದ್ದಿವೆ.
 
ಕತ್ತರಿಗುಪ್ಪೆ- ಬನಶಂಕರಿ ಮತ್ತು ಮಾಗಡಿ-ಮೈಸೂರು ರಸ್ತೆಗಳ ನಡುವೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆಗಳನ್ನು ಅಗಲ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡ ಆಡಳಿತ ವ್ಯವಸ್ಥೆ ಕೊನೆಗೆ ಕೆಲವು ಹಿತಾಸಕ್ತಿಗಳ ಒತ್ತಡಕ್ಕೆ ಬಲಿಯಾಗಿ ಆ ಯೋಜನೆಗಳನ್ನು ಕೈಬಿಟ್ಟಿದೆ.

ಅಧಿಕಾರಸ್ಥರು ತಮ್ಮ ಜೇಬುಗಳನ್ನು ತುಂಬಿಸಿಕೊಂಡು ಈ ಯೋಜನೆಗಳನ್ನು ಅಲ್ಲಿಗೇ ಮರೆತುಬಿಟ್ಟಿದ್ದಾರೆ. ಈಗ ಕೈಗೆತ್ತಿಕೊಳ್ಳುತ್ತಿರುವ ಮೇಲ್ದರ್ಜೆ ಕಾಮಗಾರಿಗಳಿಗೂ ಈ ಸ್ಥಿತಿ ಬರಬಾರದು.

ಹಿಡಿದ ಕೆಲಸವನ್ನು ಗುಣಮಟ್ಟಕ್ಕೆ ಆದ್ಯತೆ ನೀಡಿ ಒಂದು ನಿರ್ದಿಷ್ಟ ಅವಧಿಯಲ್ಲಿ ಮುಗಿಸಬೇಕು. ವಿಳಂಬಕ್ಕೆ ಅವಕಾಶ ಇರಬಾರದು. ಸ್ಥಳೀಯ ಆಡಳಿತ ಮತ್ತು ಸರ್ಕಾರ ಈ ಯೋಜನೆಯಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ತೋರಬೇಕು.
 
ರಸ್ತೆ ಸಂಪರ್ಕ ವ್ಯವಸ್ಥೆ ಸುಗಮವಾದಷ್ಟು ನಗರಗಳ ಆರ್ಥಿಕ ಚಟುವಟಿಕೆಯ ಜೊತೆಗೆ ಇತರೆ ಅಭಿವೃದ್ಧಿಗೆ ಅವಕಾಶವಾಗುವ ಸಾಧ್ಯತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.