ADVERTISEMENT

ವರ್ಚಸ್ಸು ವೃದ್ಧಿಸಲಿದೆಯೇ?

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST
ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರವನ್ನು ಹಿರಿಯ ನಾಯಕ ಮುರಳಿಮನೋಹರ ಜೋಷಿ ಅವರಿಂದ ಕಸಿದುಕೊಳ್ಳು­ವಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕೊನೆಗೂ ಸಫಲರಾಗಿ­ದ್ದಾರೆ. ಈ ಮೂಲಕ ಪಕ್ಷದ ಮತ್ತೊಬ್ಬ ಹಿರಿಯ ನಾಯಕನನ್ನು ಮೂಲೆಗೆ ತಳ್ಳಿ, ತಮ್ಮ ಪ್ರಾಬಲ್ಯ ನಿರೂಪಿಸಿದ್ದಾರೆ.

ಗೋವಾದಲ್ಲಿ ನಡೆದ ಪಕ್ಷದ  ಕಾರ್ಯ­ಕಾರಿಣಿಯಲ್ಲಿ ಎಲ್.ಕೆ.ಅಡ್ವಾಣಿ ಅವರ ಪ್ರತಿಭಟನೆ ಲೆಕ್ಕಿಸದೆ ಮೋದಿ ಅವರಿಗೆ ಪಕ್ಷದ ಪ್ರಚಾರ ಸಮಿತಿ ನೇತೃತ್ವ ವಹಿಸಲಾಯಿತು. ಆ ಬಳಿಕ   ಅನೇಕರ ಅಪಸ್ವರ ಬದಿಗೊತ್ತಿ ಪ್ರಧಾನಿ ಅಭ್ಯರ್ಥಿ ಎಂದು ಅವರನ್ನು ಘೋಷಿ­ಸ­ಲಾಯಿತು. ತತ್ವ, ಸಿದ್ಧಾಂತ  ಮುಖ್ಯ ಎಂದು ಪ್ರತಿಪಾದಿಸುತ್ತಿರುವ ಪಕ್ಷ­ವೊಂದು ಹೇಗೆ ನಾಯಕನೊಬ್ಬನ ವರ್ಚಸ್ಸಿಗೆ ಜೋತು ಬೀಳುತ್ತಿದೆ ಎನ್ನುವುದಕ್ಕೆ ಈಚಿನ ದಿನಗಳಲ್ಲಿ ಹೀಗೆ ಹತ್ತಾರು ನಿದರ್ಶನಗಳು ಸಿಗುತ್ತವೆ.
 
ಗುಜರಾತ್‌ ಮಾಜಿ ಸಚಿವ ಅಮಿತ್ ಷಾ ಅವರಿಗೆ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿದಾಗಲೇ, ದೇಶದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ರಾಜ್ಯಕ್ಕೆ  ಮೋದಿ ವಲಸೆ ಬರಲಿದ್ದಾರೆ ಎಂಬ ನಿರೀಕ್ಷೆ ಮೂಡಿತು. ಆ ಬಗ್ಗೆ ಸುದ್ದಿ ಕೂಡ ಹರಡಿತ್ತು. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಎಂಬ ಪ್ರಶ್ನೆ ಮಾತ್ರವೇ ಉಳಿದಿತ್ತು. ಈಗ ಅದಕ್ಕೂ ಉತ್ತರ ಸಿಕ್ಕಿದೆ.  ಹಿಂದೂಗಳ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮುಖವಾಗಿರುವ ವಾರಾಣಸಿಯಿಂದ ಮೋದಿ ಅದೃಷ್ಟ ಪರೀಕ್ಷೆಗೆ ಇಳಿಯುವುದರಿಂದ ಹಿಂದೂ ಮತಗಳು  ಒಗ್ಗೂಡಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ.

ಒಗ್ಗೂಡಿ­ಸುವ  ಕೆಲಸವನ್ನು ಅಮಿತ್‌ ಷಾ ಈಗಾಗಲೇ ಮಾಡುತ್ತಿದ್ದಾರೆ.  ಮೋದಿ ವರ್ಚಸ್ಸು ಹೆಚ್ಚಿಸಲು ಮತ್ತು ಅವರನ್ನು  ರಾಷ್ಟ್ರ ನಾಯಕರಾಗಿ ಬಿಂಬಿಸುವ ಉದ್ದೇಶದಿಂದ ಅವರನ್ನು ಉತ್ತರ ಪ್ರದೇಶದಲ್ಲಿ ಕಣಕ್ಕಿಳಿಸಲಾಗುತ್ತಿದೆ. ಎಂಬತ್ತು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಈ ರಾಜ್ಯದಲ್ಲಿ  ಹೆಚ್ಚು ಸ್ಥಾನ ಪಡೆಯುವ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ ಎನ್ನುವುದು ಸಾಮಾನ್ಯ ನಂಬಿಕೆ. ಮೋದಿ ಸ್ಪರ್ಧೆಯಿಂದ ಬಿಜೆಪಿ ಅಧಿಕ ಸ್ಥಾನಗಳನ್ನು ಗೆಲ್ಲಬಹುದು ಎಂದು ಭಾವಿಸಲಾಗಿದೆ. ಉತ್ತರ ಪ್ರದೇಶದಿಂದ ಮೋದಿ ಸ್ಪರ್ಧೆ ಹಿಂದಿರುವುದು ರಾಜಕೀಯ ಲಾಭದ ಲೆಕ್ಕಾಚಾರ.  ಅವರ ಸ್ಪರ್ಧೆ ಪೂರ್ವಾಂಚಲ ಮತ್ತು ವಾರಾಣಸಿಗೆ ಹೊಂದಿಕೊಂಡಿರುವ ಬಿಹಾರದ ಗಡಿ ಜಿಲ್ಲೆಗಳ ಸುಮಾರು 50 ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.  

ಜೋಷಿ ಒಲ್ಲದ ಮನಸ್ಸಿನಿಂದಲೇ ಮೋದಿ ಅವರಿಗೆ ಕ್ಷೇತ್ರ ಬಿಟ್ಟಿದ್ದಾರೆ. ಅವರು ಕಾನ್ಪುರಕ್ಕೆ ಸ್ಥಳಾಂತರಗೊಂಡಿದ್ದಾರೆ. ಬಿಜೆಪಿ ಒಳಗೆ ಎಲ್ಲವೂ ಸರಿಯಿಲ್ಲ ಎನ್ನು­ವುದನ್ನು ಇದು ಸಾಬೀತುಪಡಿಸಿದೆ. ಬಿಎಸ್‌ಆರ್‌ ಕಾಂಗ್ರೆಸ್‌ ಮುಖಂಡ ಬಿ. ಶ್ರೀರಾಮುಲು ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಂಡು ಬಳ್ಳಾರಿ ಲೋಕ­ಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ವಿಷಯದಲ್ಲೂ ಹಿರಿಯ ನಾಯಕರಾದ  ಸುಷ್ಮಾ ಸ್ವರಾಜ್‌ ಮತ್ತು ಅರುಣ್‌ ಜೇಟ್ಲಿ  ನಡುವೆ ಜಟಾಪಟಿ ನಡೆದಿದೆ. ಬಿಜೆಪಿ ನಾಯಕರ ಮಧ್ಯೆ ಒಡಕು  ಇದೆ ಎಂದು ಹೇಳಲು ಇಷ್ಟು ಸಾಕಲ್ಲವೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.