ADVERTISEMENT

ವಾಮಾಚಾರ ತನಿಖೆ ಆಗಲಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಈ ಆಧುನಿಕ ಕಾಲದಲ್ಲೂ ನರಬಲಿ, ವಾಮಾಚಾರಗಳಂತಹ ವಿಕೃತ ಆಚರಣೆಗಳ ಮೂಲಕ ಮನಸ್ಸಿನ ಶಾಂತಿ, ಮನೆಯ ನೆಮ್ಮದಿ, ನೆಲದಡಿ ಹೂತಿಟ್ಟ ನಿಧಿಯನ್ನು ಪಡೆಯುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಜೀವ ಬಲಿ ಕೊಟ್ಟು ಮನಸ್ಸಿನ ನೆಮ್ಮದಿ ಗಳಿಸಲು ಸಾಧ್ಯವಿಲ್ಲ.
 
ಆದರೆ ಕೆಲವು ದುಷ್ಟರು  ಇಂತಹ ಸಲಹೆಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಬಲಿ ಕೊಡುವ ಪ್ರಕರಣಗಳು ಅನೇಕ ಸಂದರ್ಭಗಳಲ್ಲಿ ಬೆಳಕಿಗೆ ಬರುವುದಿಲ್ಲ. ಕೆಲವು ತಿಂಗಳ ಹಿಂದೆ ವಾಮಾಚಾರಿಯೊಬ್ಬ ನೆರೆ ಮನೆಯ ಮಗುವೊಂದನ್ನು ನಿಧಿಗಾಗಿ ಬಲಿಕೊಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿತ್ತು.

ಈಗ ರಾಣೆಬೆನ್ನೂರು ತಾಲ್ಲೂಕಿನ ತಿರುಮಲದೇವರಕೊಪ್ಪ ಎಂಬ ಗ್ರಾಮದಲ್ಲಿ ದಲಿತ ಯುವಕನೊಬ್ಬನನ್ನು ಮನೆಯ ಶಾಂತಿಗಾಗಿ ಬಲಿಕೊಟ್ಟ ಅಮಾನವೀಯ ಘಟನೆ ನಡೆದಿದೆ. ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಈ ಘಟನೆ ಒಂದೂವರೆ ತಿಂಗಳ ನಂತರ ಇದೀಗ ಬೆಳಕಿಗೆ ಬಂದಿದೆ.

ಟ್ರ್ಯಾಕ್ಟರ್ ಚಾಲಕನಾಗಿದ್ದ ಹದಿನೆಂಟು ವರ್ಷದ ಬಸವರಾಜ ಕಡೇಮನಿ ಎಂಬುವರನ್ನು ಕೆಲಸಕ್ಕೆ ಇರಿಸಿಕೊಂಡಿದ್ದ ವ್ಯಕ್ತಿ, ಅವನ ಮಗ ಹಾಗೂ ಸಹಚರು ಸೇರಿಕೊಂಡು ಮನೆಯಲ್ಲೇ ಬಲಿ ಕೊಟ್ಟು ನಂತರ ಎಲ್ಲ ವಾಮಾಚಾರದ ಆಚರಣೆಗಳನ್ನು ನಡೆಸಿ ಶವವನ್ನು ಸುಟ್ಟುಹಾಕುವ ಪ್ರಯತ್ನ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಬಲಿಯಾದ ಯುವಕನ ಹಣೆಗೆ ರಂಧ್ರ ಮಾಡಿ, ಅವನ ಒಂದು ಕಣ್ಣು ಹಾಗೂ ಎರಡು ಹಲ್ಲುಗಳನ್ನು ಕಿತ್ತು ಹಾಕಿದ್ದಾರೆಂಬ ಆರೋಪಗಳಿವೆ. ಯುವಕನ ಸಾವಿನ ಕಾರಣಗಳು ನಿಗೂಢವಾಗಿವೆ.

ಸಾವಿನ ಹಿನ್ನೆಲೆಯನ್ನು ಪತ್ತೆ ಹಚ್ಚುವ ಬದಲು ಆರೋಪಿಗಳ ಹೇಳಿಕೆಯನ್ನೇ ಪರಿಗಣಿಸಿದ ಪೊಲೀಸರು ಇದು ಕೊಲೆಯ ಪ್ರಕರಣ ಎಂದು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮಗಳನ್ನು ಜರುಗಿಸಿದ್ದಾರೆ.
 
ಮೃತನ ತಂದೆ, ತಾಯಿಗಳ ದೂರಿನ ಆಧಾರದ ಮೇಲೆ ಪೊಲೀಸರು ಹೊಸದಾಗಿ ತನಿಖೆ ನಡೆಸಿ ಸಾವಿನ ಕಾರಣಗಳನ್ನು ಪತ್ತೆಹಚ್ಚಿ ತಪ್ಪಿತಸ್ತರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

ಇಲ್ಲವಾದರೆ ಅಮಾಯಕರು ಜೀವ ಕಳೆದುಕೊಳ್ಳುತ್ತಲೇ ಇರುತ್ತಾರೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು, ಗಣ್ಯರು, ರಾಜಕೀಯ ಧುರೀಣರು ಮೂಢನಂಬಿಕೆಗಳಿಗೆ ಮೊರೆಹೋಗುತ್ತಿದ್ದಾರೆ.

ರಾಜಕೀಯ ಅಧಿಕಾರ, ಲೌಕಿಕ ಸುಖ ಸಂಪತ್ತಿನ ಗಳಿಕೆಗೆ ವಾಮಾಚಾರದ ಬೆನ್ನು ಹತ್ತಿ ಕಂದಾಚಾರದ ಆಚರಣೆಗಳನ್ನು ಬಹಿರಂಗವಾಗಿಯೇ ಮಾಡುತ್ತಿದ್ದಾರೆ. ಬಹುತೇಕ ರಾಜಕಾರಣಿಗಳು ಅಧಿಕಾರ ವಹಿಸಿಕೊಳ್ಳುವ ಮೊದಲು ತಮ್ಮ ಕಚೇರಿಯಲ್ಲೇ ಹೋಮ, ಹವನ ಮಾಡಿಸುವ, ಕೂರುವ ಕುರ್ಚಿಗೆ ಪೂಜೆ ಸಲ್ಲಿಸುವ ಪರಿಪಾಠ ಬೆಳೆಯುತ್ತಿದೆ.

ಮೌಢ್ಯದ ಆಚರಣೆಗಳನ್ನು ನಿಲ್ಲಿಸಬೇಕಾದ ಅಧಿಕಾರಸ್ಥ ರಾಜಕಾರಣಿಗಳೇ ವಿರೋಧಿಗಳನ್ನು ಮಟ್ಟಹಾಕಲು ವಾಮಾಚಾರದ ಆಚರಣೆಗಳಲ್ಲಿ ಮುಳುಗಿದ್ದಾರೆ.

ವಿಚಾರಶಕ್ತಿ ಮರೆಯಾಗಿ ಮೂಢನಂಬಿಕೆಗೆ ಅನೇಕರು ಬಲಿಯಾಗುತ್ತಿದ್ದಾರೆ. ಇಂಥ ಜೀವ ಬಲಿಯ ಅನುಮಾನ ಇರುವ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ತರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT