ADVERTISEMENT

ಶಾಂತಿ ನೆಲೆಸಲಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ಉಕ್ರೇನ್‌ನಲ್ಲಿ ಉಂಟಾಗಿರುವ ಅಶಾಂತಿ  21ನೇ ಶತಮಾನದ ದೊಡ್ಡ ಬಿಕ್ಕಟ್ಟಾಗಿ ಬೆಳೆಯುತ್ತಿದೆ.  ನೂರಾರು  ಯೋಧರನ್ನು ಒಳಗೊಂಡ  ರಷ್ಯಾ ಸೇನೆಯ ತುಕಡಿಗಳು ಉಕ್ರೇನ್‌ನ ಕ್ರಿಮಿಯಾ ಪ್ರಾಂತ್ಯದಲ್ಲಿ ಬೀಡು ಬಿಟ್ಟಿವೆ.  ಉಕ್ರೇನ್ ಸಂಸತ್ ಈ ಬಗ್ಗೆ ಚರ್ಚೆ ನಡೆಸಿದೆ. ಆದರೆ ರಷ್ಯಾ ಆಕ್ರಮ­ಣ­ಕ್ಕೆ ಪ್ರತಿರೋಧ ಒಡ್ಡುವ ಸಾಮರ್ಥ್ಯ ಉಕ್ರೇನ್‌ಗೆ ಇಲ್ಲ. ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಅಮೆರಿಕ ಸೇರಿದಂತೆ ಪಶ್ಚಿಮ ದೇಶಗಳು  ಒತ್ತಡ ಹಾಕುತ್ತಿದ್ದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಣನೆಗೆ ತೆಗೆ­ದು­­­ಕೊಂಡಿಲ್ಲ.

ಹೀಗಾಗಿ ಈ ಪೂರ್ವ ಯೂರೋಪಿಯನ್ ರಾಷ್ಟ್ರದಲ್ಲಿ  ಉದ್ವಿ­ಗ್ನತೆ ಹೆಚ್ಚಾಗಿದೆ.  ಯುದ್ಧದಂಚಿಗೆ ರಾಷ್ಟ್ರ ಬಂದು ನಿಂತಂತಾಗಿದೆ. ರಷ್ಯಾದ ಈ ಸೇನಾ ಕಾರ್ಯಾಚರಣೆ, ಶೀತಲ ಸಮರದ ನಂತರದ  ಈ ದಿನ­ಗಳಲ್ಲಿ ರಷ್ಯಾ ಹಾಗೂ ಪಶ್ಚಿಮ ರಾಷ್ಟ್ರಗಳ ನಡುವಿನ ಅತಿದೊಡ್ಡ ಬಿಕ್ಕಟ್ಟಾಗಿ ಮಾರ್ಪ­ಡುವ ಭೀತಿ ಎದುರಾಗಿದೆ.  ಇದು ವಿಶ್ವ ಶಾಂತಿಯ ದೃಷ್ಟಿಯಿಂದ ಅಪೇ­ಕ್ಷಣೀಯವಲ್ಲ.   ಈ ಬಿಕ್ಕಟ್ಟು ಎದುರಿಸಲು ತನ್ನದೇ ಮಿಲಿಟರಿಯನ್ನು  ಉಕ್ರೇನ್‌ ಸನ್ನದ್ಧ ಸ್ಥಿತಿಯಲ್ಲಿರಿಸಿದೆ.

ಜೊತೆಗೆ ನೆರವಿಗಾಗಿ ‘ನ್ಯಾಟೊ’ಗೆ ಮೊರೆ ಹೋಗಿದೆ. ಮೊದಲೇ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟುಗಳಿಂದ ಉಕ್ರೇನ್‌ ತತ್ತರಿಸಿಹೋಗಿದೆ.  ಜನ ಬಂಡೆದ್ದ ನಂತರ, ರಷ್ಯಾ ಪರ ನಿಲುವು­ಗಳನ್ನು ಹೊಂದಿದ್ದ ಉಕ್ರೇನ್ ಅಧ್ಯಕ್ಷ ವಿಕ್ಟರ್ ಯಾನುಕೊವಿಚ್ ರಷ್ಯಾಗೆ ಪಲಾಯನ ಮಾಡಿದ್ದಾರೆ.  ರಾಷ್ಟ್ರದ ಪಶ್ಚಿಮ ಭಾಗದಲ್ಲಿರುವ ರಾಷ್ಟ್ರೀಯ­ವಾದಿ  ಉಕ್ರೇನ್ ಜನರು ಹಾಗೂ ಪೂರ್ವ ಭಾಗದಲ್ಲಿರುವ ರಷ್ಯಾ ಪರ ಬೆಂಬ­ಲಿ­ಗರ ಮಧ್ಯೆ ಉಕ್ರೇನ್ ವಿಭಜನೆಗೊಂಡಿದ್ದು ಜಾಗತಿಕ ಶಕ್ತಿಗಳ ನಡುವಿನ ಸಂಘರ್ಷಕ್ಕೆ ನೆಲೆಯಾಗುತ್ತಿರುವುದು ದುರಂತ.

ಹಣಕಾಸು ಕಷ್ಟಗಳೊಂದಿಗೆ ಉಕ್ರೇನ್‌ನಲ್ಲಿ ಈಗಿನ ಬಿಕ್ಕಟ್ಟು ಸೃಷ್ಟಿಯಾ ಯಿತು. ಇದರಿಂದಾಗಿ ಯೂರೋಪಿಯನ್ ಒಕ್ಕೂಟದೊಂದಿಗೆ ಉಕ್ರೇನ್  ಒಪ್ಪಂದ ಮಾಡಿಕೊಳ್ಳಲು ಹೊರಟಿದ್ದು  ರಷ್ಯಾ ಅಸಮಾಧಾನ­ವನ್ನು ಹೆಚ್ಚಿಸಿದೆ. ಉಕ್ರೇನ್ ಹಾಗೂ ಅದರ ಭವಿಷ್ಯದ ಬಗ್ಗೆ  ರಷ್ಯಾಗಿರು­ವಂತೆಯೇ  ಪಶ್ಚಿಮ ರಾಷ್ಟ್ರಗಳಿಗೂ ಅವುಗಳದ್ದೇ ಹಿತಾಸಕ್ತಿಗಳಿವೆ. ಉಕ್ರೇನ್ ನಲ್ಲಿ ಇರುವ ರಷ್ಯನ್ ಜನಾಂಗೀಯ ಸಮೂಹದ ಬಗ್ಗೆ ಮಾಸ್ಕೊಗೆ ಇರುವ ಕಾಳಜಿ ನ್ಯಾಯಬದ್ಧವಾದುದೇ ಇರಬಹುದು.

  ಆದರೆ ರಷ್ಯನ್ ಪರ ಇರುವ ಮಿಲಿಟರಿಗೆ ನೆರವು ನೀಡುವುದಾಗಲೀ,  ಕ್ರಿಮಿಯಾ ಪ್ರಾಂತ್ಯದತ್ತ ರಷ್ಯನ್ ಪಡೆ­ಗಳನ್ನು ರವಾನಿಸುವುದಾಗಲೀ ಉಕ್ರೇನ್‌ನ ಸಾರ್ವಭೌಮಾಧಿ­ಕಾರವನ್ನು ಉಲ್ಲಂಘಿಸಿದಂತೆ  ಎಂಬುದನ್ನು ರಷ್ಯಾ ನೆನಪಿಡಬೇಕು. ಅಲ್ಲದೆ ಇಂತಹ ಕಾರ್ಯಾ­ಚರಣೆ, ಅಂತರರಾಷ್ಟ್ರೀಯ ಒಪ್ಪಂದಗಳ ಉಲ್ಲಂಘನೆಯೂ ಹೌದು.

ಈಗಾಗಲೇ ಹೊತ್ತಿ ಉರಿಯುತ್ತಿರುವ ಅಶಾಂತಿ ಎಂಬ ಅಗ್ನಿಗೆ ಮತ್ತಷ್ಟು ತುಪ್ಪ ಸುರಿಯುವುದು ಯಾರಿಗೂ ಒಳಿತು ತರದು. ಕ್ರಿಮಿಯಾ ಪ್ರಾಂತ್ಯ ಹಾಗೂ ಉಕ್ರೇನ್‌ನ ಉಳಿದ ಭಾಗಗಳ ನಡುವೆ ಶಾಶ್ವತ ಒಡಕು ತಂದಿ­ಡುವುದೂ ಸರಿಯಲ್ಲ. ಉಕ್ರೇನ್‌ನಲ್ಲಿ ರಾಜಕೀಯ  ಸ್ಥಿರತೆ ಹಾಗೂ ಆರ್ಥಿಕ ಸುಭದ್ರತೆ  ನೆಲೆಸುವಂತೆ ಮಾಡಲು ರಷ್ಯಾ ಹಾಗೂ ಪಶ್ಚಿಮ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.