ADVERTISEMENT

ಸಂವೇದನಾಶೀಲತೆಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ತ  ಮ್ಮ ವಿರುದ್ಧ ನಡೆಯುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಹಿಳೆಯರು ಮುಕ್ತವಾಗಿ ಮಾತನಾಡುವ ಅಗತ್ಯವನ್ನು ಬೆಂಗಳೂರು ಪೊಲೀಸರು ಪ್ರತಿಪಾದಿಸಿದ್ದಾರೆ. `ಅತ್ಯಾಚಾರಕ್ಕೊಳಗಾದ ಅನೇಕ ಮಹಿಳೆಯರು ದೂರು ನೀಡಲು ಹಿಂಜರಿಯುತ್ತಾರೆ;

ಇದು ಅಪರಾಧಿಗಳನ್ನು ಸೆರೆ ಹಿಡಿಯಲು ದೊಡ್ಡ ತಡೆಯಾಗುತ್ತದೆ' ಎಂಬುದು ಪೊಲೀಸರ ವಾದ. `ಲೈಂಗಿಕ ಕಿರುಕುಳ ಅಥವಾ ಗುಪ್ತವಾಗಿ ಹಿಂಬಾಲಿಸುವಂತಹ ( ಸ್ಟಾಕಿಂಗ್) ಪ್ರಕರಣಗಳನ್ನೂ ವರದಿ ಮಾಡಬೇಕು. ಮೊಳಕೆಯಲ್ಲೇ ಇಂತಹ ಪ್ರವೃತ್ತಿಗಳನ್ನು ಚಿವುಟದಿದ್ದಲ್ಲಿ ಇವರುಗಳು ಮುಂದೆ ದೊಡ್ಡ ಅಪರಾಧಿಗಳಾಗಿ ಬೆಳೆಯುತ್ತಾರೆ' ಎಂಬುದು ಪೊಲೀಸರ ವಿವರಣೆ.

ಆದರೆ ದೂರು ನೀಡಲು ಹೋಗುವ ಮಹಿಳೆಯರ ಅನುಭವಗಳೇ ಬೇರೆ ರೀತಿಯದು. ದೂರು ನೀಡಿದಾಕೆಯನ್ನೇ ಅಪರಾಧಿಗಳಂತೆ ಪೊಲೀಸರು ನಡೆಸಿಕೊಳ್ಳುವುದು ಮಾಮೂಲು. ಈ ಹಿನ್ನೆಲೆಯಲ್ಲೇ, ಅತ್ಯಾಚಾರ ಪ್ರಕರಣಗಳ ನಿರ್ವಹಣೆಯ ಕುರಿತಂತೆ ಪೊಲೀಸರಲ್ಲಿನ ಸಂವೇದನಾಶೀಲತೆಯ ಕೊರತೆ ಬಗ್ಗೆ ಅನೇಕ ಬಾರಿ ಚರ್ಚೆಗಳೂ ನಡೆದಿವೆ. `

ADVERTISEMENT

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅತ್ಯಾಚಾರ'ಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದ ಕಾರ್ಯಾಗಾರವೊಂದರ್ಲ್ಲಲೂ ಈ  ವಿಚಾರ ಮತ್ತೆ ಪ್ರಸ್ತಾಪವಾಗಿದೆ. ಮಹಿಳೆ ವಿರುದ್ಧದ ಪೂರ್ವಗ್ರಹಗಳ ಈ ಸವಾಲನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಪೊಲೀಸ್ ಜಂಟಿ ಆಯುಕ್ತ (ಅಪರಾಧ) ಪ್ರಣಬ್ ಮೊಹಂತಿ ಅವರೇನೋ ಹೇಳಿದ್ದಾರೆ.

ಜೊತೆಗೆ, ಇದಕ್ಕಾಗಿಯೇ ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ತೆರೆಯಲಾಗಿರುವ ಮಹಿಳೆಯರು ಮತ್ತು ಮಕ್ಕಳ ಸಹಾಯವಾಣಿಯ ನೆರವು ಪಡೆಯಬೇಕೆಂಬ ಸಲಹೆಯನ್ನೂ ಅವರು ನೀಡಿದ್ದಾರೆ. ಆದರೆ ಎಷ್ಟರ ಮಟ್ಟಿಗೆ ಸಂವೇದನಾಶೀಲತೆಯಿಂದ ಇಂತಹ ದೂರುಗಳನ್ನು ನಿರ್ವಹಿಸಲಾಗುತ್ತದೆ ಎಂಬುದೇ ಇಲ್ಲಿ ಮುಖ್ಯ.

ಈ ನಿಟ್ಟಿನಲ್ಲಿ ಸಮಾಜದ ಧೋರಣೆಗಳು ಬದಲಾಗಬೇಕು. ಅತ್ಯಾಚಾರ ಪ್ರಕರಣಗಳಲ್ಲಿ ಬೆಂಗಳೂರು ನಗರ ನಾಲ್ಕನೇ ಸ್ಥಾನ ಪಡೆದುಕೊಂಡಿದೆ ಎಂಬುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ ಇತ್ತೀಚಿನ ವರದಿಯಿಂದ ಬಹಿರಂಗವಾಗಿದೆ. ಇಂತಹ ಸಂದರ್ಭದಲ್ಲಿ ಈ ಅಪರಾಧದ ನಿಯಂತ್ರಣಕ್ಕೆ ಎಲ್ಲಾ  ವಲಯಗಳಿಂದಲೂ ಪ್ರಯತ್ನ ಅಗತ್ಯ. 

ರಾಷ್ಟ್ರದಲ್ಲಿ ಪ್ರತಿ 20 ನಿಮಿಷಗಳಿಗೆ ಒಬ್ಬಳು ಮಹಿಳೆ ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದಾಳೆ. ಅದರಲ್ಲೂ ಪ್ರತಿ ಮೂರನೇ ಬಲಿಪಶು ಇನ್ನೂ ಚಿಕ್ಕವಯಸ್ಸಿನ ಬಾಲೆಯರಾಗಿರುತ್ತಾರೆ ಎಂಬುದಂತೂ ಇನ್ನೂ ಆತಂಕಕಾರಿ. ಇತ್ತೀಚೆಗೆ ಕೇರಳದಲ್ಲಿ ತಂದೆ, ಸೋದರರಿಂದ ಮನೆಯೊಳಗೇ ನಿರಂತರವಾಗಿ ಅತ್ಯಾಚಾರಕ್ಕೊಳಗಾಗುತ್ತಿದ್ದಂತಹ ಹೆಣ್ಣುಮಕ್ಕಳ ಪ್ರಕರಣಗಳೂ ವರದಿಯಾಗಿವೆ.

ಇಂತಹ ಪ್ರಕರಣಗಳು, ಶಾಲಾ ಶಿಕ್ಷಕರು ಈ ಸಂಬಂಧದಲ್ಲಿ ನೀಡುವ ದೂರುಗಳಿಂದ ಮಾತ್ರವೇ ಸಾಮಾನ್ಯವಾಗಿ ಬೆಳಕು ಕಾಣುತ್ತವೆ ಎನ್ನುತ್ತಾರೆ ಮಕ್ಕಳ ಹಕ್ಕುಗಳ ರಕ್ಷಣಾ ಕಾರ್ಯಕರ್ತರು. ಕುಟುಂಬದ ಗೌರವ ಉಳಿಸಿಕೊಳ್ಳುವ ದೃಷ್ಟಿಯಿಂದ ತಾಯಂದಿರು ಇಂತಹ ಪ್ರಕರಣಗಳಲ್ಲಿ ದೂರು ನೀಡುವುದು ಕಡಿಮೆಯೇ.

ದೂರನ್ನು ಹಿಂತೆಗೆದುಕೊಳ್ಳಬೇಕೆಂಬ ಸಾಮಾಜಿಕ ಒತ್ತಡಗಳು ಇದ್ದೇ ಇರುತ್ತವೆ. ಇಷ್ಟೆಲ್ಲಾ ಸೂಕ್ಷ್ಮಗಳನ್ನು ಒಳಗೊಂಡ ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ವಾಸ್ತವಾಂಶ ಆಧರಿಸಿ ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಲು ಪೊಲೀಸ್ ಸಿಬ್ಬಂದಿಗೆ ಸಂವೇದನಾಶೀಲತೆ ಹಾಗೂ ತರಬೇತಿ ಅಗತ್ಯ.

ದೂರು ನೀಡುವವರನ್ನೇ ಸಂದೇಹಿಸುವ, ಕೀಳಾಗಿ ಕಾಣುವ ಮನೋಧರ್ಮ ಪೊಲೀಸ್ ವ್ಯವಸ್ಥೆಯಲ್ಲಿ ಮೊದಲಿಗೆ ಬದಲಾಗಬೇಕಿದೆ. ಹಾಗಾದಾಗ ಮಾತ್ರ, ವರದಿಯಾಗದೇ ಹೋಗುವ ಲೈಂಗಿಕ ಅಪರಾಧಗಳ ವಿರುದ್ಧದ `ಮೌನ'ವನ್ನು ಮುರಿಯುವುದು ಸಾಧ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.