ADVERTISEMENT

ಸದನ ಸಮಿತಿಯಿಂದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ವಿಧಾನಸಭೆ ಕಲಾಪ ನಡೆಯುತ್ತಿರುವಾಗ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪ ಹೊತ್ತ ಮೂವರು ಸಚಿವರ ವಿರುದ್ಧ ವಿಚಾರಣೆಗೆ ನೇಮಿಸಿದ್ದ ಸದನ ಸಮಿತಿಯಿಂದ ವಿಶೇಷ ಸಾಧನೆಯೇನೂ ಆಗಿಲ್ಲ. ಸಮಿತಿಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಬಹಿಷ್ಕರಿಸಿದ್ದವು.

ಆಡಳಿತ ಪಕ್ಷದ ಸದಸ್ಯರೇ ಇದ್ದ ಸಮಿತಿ ಮೂವರು ಸಚಿವರ ವಿರುದ್ಧ ನಡೆಸಿದ ವಿಚಾರಣೆಯಲ್ಲಿ ಕೃಷ್ಣ ಪಾಲೇಮಾರ್ ಮತ್ತು ಸಿ.ಸಿ.ಪಾಟೀಲರ ವಿರುದ್ಧ ಆರೋಪ ಸಾಬೀತುಪಡಿಸುವ ಸಾಕ್ಷ್ಯಾಧಾರ ಇಲ್ಲವೆಂದು ಅಭಿಪ್ರಾಯಪಟ್ಟು, ಇನ್ನೊಬ್ಬ ಸಚಿವ, ಲಕ್ಷ್ಮಣ ಸವದಿ ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪ ದೃಢಪಟ್ಟಿರುವುದನ್ನು ಖಚಿತಪಡಿಸಿದೆ. ಸವದಿ ಅವರನ್ನು `ಸದನಕ್ಕೆ ಕರೆಸಿ ಎಚ್ಚರಿಕೆ ನೀಡುವಂತೆ~ ಸಲಹೆ ಮಾಡಿದೆ.
 
ಅಂದರೆ, ವಿಧಾನಸಭೆಯಲ್ಲಿ, ಶಾಸಕರು ಮತ್ತು ಸರ್ಕಾರದ ಪ್ರತಿನಿಧಿಗಳು ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ, ಸರ್ಕಾರದ ಅಂಗವಾಗಿ ಸಚಿವ ಸ್ಥಾನದ ಜವಾಬ್ದಾರಿ ಹೊತ್ತ ವ್ಯಕ್ತಿಗಳು ತಮ್ಮ ಕಾಮವಿಕೃತಿಯನ್ನು ತಣಿಸಿಕೊಳ್ಳುವುದಕ್ಕೆ ಅಶ್ಲೀಲ ಚಿತ್ರಗಳ ದೃಶ್ಯಾವಳಿಯನ್ನು ನೋಡಿದ್ದು ಗಂಭೀರವಾಗಿ ಪರಿಗಣಿಸುವ ವಿಷಯವೇನೂ ಅಲ್ಲ ಎಂಬುದು ಸಮಿತಿಯ ಅಭಿಪ್ರಾಯವಿರುವಂತೆ ತೋರುತ್ತದೆ.
 
ಇದು ವಿಧಾನಸಭೆಯನ್ನು ಮೋಜಿನ ತಾಣವನ್ನಾಗಿ ಪರಿಗಣಿಸಿದ್ದನ್ನು ಲಘುವಾಗಿ ಪರಿಗಣಿಸಿದ ತೀರ್ಮಾನ. ಇದು ತಪ್ಪು ಮಾಡಿದವರನ್ನು ರಕ್ಷಿಸುವ ತಂತ್ರ.

ಕಲಾಪ ನಡೆಯುತ್ತಿರುವಾಗ ಸಚಿವರು ಅಕ್ಕಪಕ್ಕ ಕುಳಿತು ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತ ಇದ್ದುದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಅದನ್ನು ಸಾರ್ವಜನಿಕರು ನೋಡಿರುವಾಗ ಅದಕ್ಕಾಗಿ ಸದನ ಸಮಿತಿ ರಚನೆ ಆರೋಪಿಗಳನ್ನು ರಕ್ಷಿಸುವ ಸಂಚು ಎಂದು ಭಾವಿಸಿದ್ದು  ಈಗ ನಿಜವಾಗಿದೆ. ಆಡಳಿತ ಪಕ್ಷದ ಸದಸ್ಯರಷ್ಟೇ ಇದ್ದ ಸಮಿತಿಯ ವರದಿಯೇ ಏಕಪಕ್ಷೀಯವಾದದ್ದು.
 
ಸಂಸತ್ತು ಮತ್ತು ರಾಜ್ಯ ವಿಧಾನಮಂಡಲಗಳಲ್ಲಿ ಜನಪ್ರತಿನಿಧಿಗಳ ವರ್ತನೆ ಈಚಿನ ದಶಕಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಕೂಗಾಟ, ಕೈಕೈ ಮಿಲಾಯಿಸಿ ಎದುರಾಳಿಗಳನ್ನು ಬಗ್ಗುಬಡಿಯುವ ವರ್ತನೆ ಸಂಸದೀಯ ನಡವಳಿಕೆಯಲ್ಲಿ ಜನ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ.

ಅರ್ಥಪೂರ್ಣವಾದ ಚರ್ಚೆ, ಸಂವಾದಗಳಿಗೆ ವೇದಿಕೆಯಾಗಬೇಕಾದ ವಿಧಾನ ಮಂಡಲಗಳಲ್ಲಿ ಬೈಗುಳ, ಕಿರಿಚಾಟಗಳೇ ಮೇಲುಗೈ ಪಡೆದಿರುವುದು ಅನಿವಾರ್ಯ ಸ್ಥಿತಿ ಎನ್ನುವಂತಾಗಿದೆ.
 
ಜನರ ಪ್ರತಿನಿಧಿಯಾಗಿ ಪಡೆದ ಶಾಸಕ ಸ್ಥಾನ, ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವ, ಕಾನೂನನ್ನು ಸ್ವಂತಕ್ಕಾಗಿ ತಿರುಚುವ ಸ್ವೇಚ್ಛಾವರ್ತನೆಗೆ ಪರವಾನಗಿ ಎಂಬಂತೆಯೇ ಹೆಚ್ಚಿನವರ ವರ್ತನೆ ಇದೆ.

ಸಚಿವ ಸ್ಥಾನ ರಾಜ್ಯದ ಜನತೆಯ ಸೇವೆಗೆ ಲಭಿಸಿದ ಅವಕಾಶ ಎಂಬುದಕ್ಕಿಂತ ಅಧಿಕಾರ ಚಲಾಯಿಸುವುದಕ್ಕೆ ಸಿಕ್ಕ ಆಯುಧ ಎಂದೇ ಭಾವಿಸುವವರಿದ್ದಾರೆ. ಪ್ರಜಾಸತ್ತೆಯ ಗರ್ಭಗುಡಿಯಾಗಿರುವ ವಿಧಾನಸಭೆಯಲ್ಲಿ ಕಾಮವಿಕೃತಿಯನ್ನು ಪ್ರದರ್ಶಿಸಿದ ಅನೈತಿಕ ನಡವಳಿಕೆ `ಕರೆದು ಎಚ್ಚರಿಸುವಷ್ಟು~ ಲಘು ಸ್ವರೂಪದ್ದಲ್ಲ.

ವಿಧಾನಸಭೆ ಒಳಗೆ ತಮ್ಮ ವಿಕಾರಗಳನ್ನು ಪ್ರದರ್ಶಿಸುವುದು ದುಬಾರಿಯಾಗಲಿದೆ ಎಂಬ ಸಂದೇಶ ಮುಟ್ಟುವಂತೆ ಅಧಿವೇಶನದ ಅವಧಿಗೆ ಸದಸ್ಯತ್ವ ಅಮಾನತುಪಡಿಸುವ ಕ್ರಮಕ್ಕೆ ಶಿಫಾರಸು ಮಾಡಿದ್ದರೆ ಸಮಿತಿಯ ರಚನೆಗೆ ಬೆಲೆ ಬರುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.