ADVERTISEMENT

ಸಾಕು ಇಂಥ ಕ್ರೌರ್ಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ನಮ್ಮ ಸುತ್ತಲಿನ ಜಗತ್ತಿನಲ್ಲಿ ಎಷ್ಟೆಲ್ಲ ಬದಲಾವಣೆ ಆಗುತ್ತಿದೆ. ಆದರೆ ನಮ್ಮ ಶಾಲೆಗಳು, ಅಲ್ಲಿನ ಅಧ್ಯಾಪಕ ವರ್ಗ ಮಾತ್ರ ಯಾಕೋ ಬದಲಾಗುತ್ತಿಲ್ಲ. ಇವರಲ್ಲಿ ಹೆಚ್ಚಿನವರು ಓಬೀರಾಯನ ಕಾಲದ ಮನಸ್ಥಿತಿಗೆ ಇನ್ನೂ ಜೋತು ಬಿದ್ದಿದ್ದಾರೆ. ಹೆದರಿಸಿದರೆ, ಹೊಡೆದು ಬಡಿದರೆ ಮಾತ್ರ ಮಕ್ಕಳು ಕಲಿಯುತ್ತವೆ ಎಂಬ ಭ್ರಮಾಲೋಕದಲ್ಲೇ ಇದ್ದಾರೆ. ಹೆಚ್ಚೂ ಕಡಿಮೆ ಪ್ರತಿ ದಿನ ಎಂಬಂತೆ ಅಲ್ಲಲ್ಲಿ `ಶಿಸ್ತು, ಶಿಕ್ಷಣದ' ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಅಮಾನವೀಯವಾಗಿ ಹಿಂಸೆ ನೀಡಿದ ಪ್ರಸಂಗಗಳು ಬೆಳಕಿಗೆ ಬರುತ್ತಲೇ ಇವೆ.

ಬೆಂಗಳೂರಿನ ನರ್ಸರಿ ಶಾಲೆಯೊಂದರ ಆಯಾ ಒಬ್ಬರು ವಯೋ ಸಹಜ ಸ್ವಭಾವದಿಂದ ತರಗತಿಯಲ್ಲಿ ಗದ್ದಲ ಮಾಡುತ್ತಿದ್ದ 6 ಪುಟ್ಟ ಮಕ್ಕಳಿಗೆ ಕಾದ ಸೌಟಿನಿಂದ ಬರೆ ಹಾಕಿದ, ಇನ್ನೊಂದು ಶಾಲೆಯಲ್ಲಿ ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ಮೂರನೇ ತರಗತಿಯ ಬಾಲಕನ ಕೆನ್ನೆಗೆ ಹೊಡೆದು ಹಲ್ಲು ಮುರಿಯುವಂತೆ ಮಾಡಿದ ಘಟನೆ ಈಗ ವರದಿಯಾಗಿದೆ. ಪುಟಾಣಿ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಇಂಥ ಶಿಕ್ಷಕ/ ಶಿಕ್ಷಕಿಯರು, ಆಯಾಗಳು ಇಂದಿನ ಕಾಲದಲ್ಲಿ ಎಷ್ಟು ಪ್ರಸ್ತುತ ಎನ್ನುವ ಪ್ರಶ್ನೆಯನ್ನು ಇದು ಮುಂದಿಡುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ ಪೋಷಕರ ಧಾವಂತ, ಮಕ್ಕಳನ್ನು ಶಾಲೆಗೆ ಸಾಗಹಾಕಿದರೆ ಸಾಕು ಎಂಬ ಮನೋಭಾವ, ಗುಣಮಟ್ಟ ಇಲ್ಲದ ಮತ್ತು ನಾಯಿಕೊಡೆಯಂತೆ ತಲೆ ಎತ್ತುತ್ತಿರುವ ಶಾಲೆಗಳು, ಸೂಕ್ಷ್ಮ ಸಂವೇದನೆಯೇ ಇಲ್ಲದ ಕೆಲ ಶಿಕ್ಷಕರಿಂದಾಗಿ ಶಾಲೆಗಳಲ್ಲಿ ದೌರ್ಜನ್ಯ ವಿಜೃಂಭಿಸುತ್ತಿದೆ. ನರ್ಸರಿ ಶಾಲೆಗಳಂತೂ ಗಲ್ಲಿಗೊಂದು ಎಂಬಂತೆ ತಲೆ ಎತ್ತುತ್ತಿವೆ. ಇಂಥ ಶಾಲೆಗಳನ್ನು ತೆರೆಯಲು ಮಾನದಂಡಗಳನ್ನು ನಿಗದಿಪಡಿಸಿ ಕಟ್ಟುನಿಟ್ಟಾಗಿ ಅನುಸರಿಸಬೇಕು. ಮಗುವಿಗೆ ಸರಿ- ತಪ್ಪುಗಳ ಬಗ್ಗೆ ತಿಳಿಸಿಕೊಡಲು ಕೆಲವೊಮ್ಮೆ ಶಿಕ್ಷೆ ಅನಿವಾರ್ಯ ಎಂಬ ವಾದವೂ ಇದೆ. ಆದರೆ ಶಿಕ್ಷೆ ಎಂದರೆ ಹೊಡೆತ- ಬಡಿತವೇ ಆಗಬೇಕಿಲ್ಲ. ದೇಹ, ಮನಸ್ಸಿಗೆ ಗಾಯ ಮಾಡದಂತೆ ಮನಸ್ಸನ್ನು ಗೆದ್ದು ಬುದ್ಧಿಹೇಳುವ ಬೇಕಾದಷ್ಟು ವಿಧಾನಗಳಿವೆ.

ಶಿಕ್ಷಕರೂ ಕೂಡ ಹಿಂದೆಂದಿಗಿಂತ ಹೆಚ್ಚು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ದುಷ್ಪರಿಣಾಮವನ್ನು ಶಾಲೆಗೆ ಹೋಗುವ ಮಗು ಅನುಭವಿಸಬೇಕಾಗಿದೆ. ಈಗಿನ ಮಕ್ಕಳ ಬುದ್ಧಿಶಕ್ತಿ (ಐಕ್ಯೂ), ಅರಿವಿನ ವಿಸ್ತಾರ ಹಿಂದಿನ ಮಕ್ಕಳಿಗಿಂತ ಹಲವು ಪಟ್ಟು ಹೆಚ್ಚು ಎನ್ನುವುದು ಅನೇಕ ವೈಜ್ಞಾನಿಕ ಅಧ್ಯಯನಗಳಿಂದ ಸಾಬೀತಾಗಿದೆ. ಹೀಗಿರುವಾಗ ಅವರಿಗೆ ಕಲಿಸುವ ವಿಧಾನವೂ ಬದಲಾಗಬೇಕು, ಅದಕ್ಕೆ ತಕ್ಕಂತೆ ಅಧ್ಯಾಪಕ ವರ್ಗ ಕೂಡ ತನ್ನ ಮನೋಭಾವ ಬದಲಿಸಿಕೊಳ್ಳಬೇಕು.

ADVERTISEMENT

ತರಗತಿಗಳು ಮಕ್ಕಳ ಪಾಲಿಗೆ ಯಾತನಾ ಶಿಬಿರಗಳಾಗಬಾರದು. ಮಕ್ಕಳನ್ನು ಬಡಿಗೆಯ ಬದಲು ಮಾತಿನಿಂದ, ಪ್ರೀತಿಯಿಂದ ಗೆಲ್ಲುವುದು ಸುಲಭ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ತರಗತಿಯಲ್ಲಿ ನಡೆಯುವ ಹಿಂಸೆ ಮಗುವಿನ ಎಳೆ ಮನಸ್ಸಿನ ಮೇಲೆ ಮಾಡುವ ಅಪಾಯ ಅಪಾರ. ಕ್ರೌರ್ಯ ತುಂಬಿದ ದೈಹಿಕ, ಮಾನಸಿಕ ಶಿಕ್ಷೆಯೇ ಎಲ್ಲಕ್ಕೂ ಪರಿಹಾರವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.