ADVERTISEMENT

ಸುತ್ತೋಲೆ ಸರಿ: ಜಾರಿ ಯಾವಾಗ?

​ಪ್ರಜಾವಾಣಿ ವಾರ್ತೆ
Published 12 ಜನವರಿ 2014, 19:30 IST
Last Updated 12 ಜನವರಿ 2014, 19:30 IST

ಶಾಲಾ ಶಿಕ್ಷಣ, ಮಕ್ಕಳಿಗೂ ಮತ್ತು ಪೋಷಕರಿಗೂ ದೊಡ್ಡ ತಲೆಬೇನೆ ಆಗಿದೆ. ಮಗು ಮೂರು ವರ್ಷ ಪೂರೈಸುವ ಮೊದಲೇ ಹೆತ್ತವರಿಗೆ  ಶಾಲೆಯ ಚಿಂತೆ ಕಾಡಲಾರಂಭಿಸುತ್ತದೆ. ಕಂಡ ಕಂಡ ಶಾಲೆಗಳ ಗೇಟು ಕಾಯುವ ಕಾಯಕ ಅಲ್ಲಿಂದಲೇ ಶುರುವಾಗುತ್ತದೆ. ಅರ್ಜಿ ನಮೂನೆಗೆ ಪಾಳಿ ಹಚ್ಚುವುದರಿಂದ ಪ್ರವೇಶ ಗಿಟ್ಟಿಸುವವರೆಗೂ ತಳಮಳ ತಪ್ಪಿದ್ದಲ್ಲ.

ಪೋಷ­ಕ­­ರದು ಅಕ್ಷರಶಃ ‘ಕೋಲೆಬಸವ’ನ ಸ್ಥಿತಿ. ಶಾಲಾ ಆಡಳಿತ ಮಂಡಳಿ ಹೇಳಿದ್ದ­ಕ್ಕೆಲ್ಲ ತಲೆ ಆಡಿಸುವಂತಹ ಅಸಹಾಯಕ ಸ್ಥಿತಿಗೆ ಪೋಷಕರನ್ನು ನಮ್ಮ ಶಿಕ್ಷಣ ವ್ಯವಸ್ಥೆ ದೂಡಿದೆ. ಕೆಲವು ಶಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಇಂತಹ ‘ದಬ್ಬಾಳಿಕೆ ಧೋರಣೆ’ಗೆ ಕೊಂಚ ಮಟ್ಟಿಗಾದರೂ ಕಡಿವಾಣ ಹಾಕಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ. ಖಾಸಗಿ ಶಾಲೆಗಳಿಗೆ ಅನ್ವಯ ಆಗುವಂತೆ  ಪ್ರವೇಶ ವೇಳಾಪಟ್ಟಿ ಪ್ರಕಟಿಸಿದೆ.

ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಈ ವೇಳಾಪಟ್ಟಿ ಅನ್ವಯವಾಗಲಿದ್ದು, ಇದು ಕಟ್ಟುನಿಟ್ಟಾಗಿ ಜಾರಿಗೊಂಡರೆ ಅರ್ಧದಷ್ಟು ಗೊಂದಲ ನಿವಾರಣೆ ಆಗಲಿದೆ. ಪೋಷಕರು ವಿನಾಕಾರಣ ಶಾಲೆಯಿಂದ ಶಾಲೆಗೆ ಅಲೆಯುವುದು ತಪ್ಪುತ್ತದೆ. ಆದರೆ ಜಾರಿ ಅಂದುಕೊಂಡಷ್ಟು ಸುಲಭ ಅಲ್ಲ. ಶಾಸಗಿ ಶಾಲೆಗಳ ಲಾಬಿ ಎಷ್ಟು ಶಕ್ತಿಶಾಲಿ ಎಂಬುದು ಎಲ್ಲರೂ ಬಲ್ಲ  ಸಂಗತಿ. ಈ ಲಾಬಿಯನ್ನು  ಮಣಿಸಲು ಪ್ರಬಲ ಇಚ್ಛಾಶಕ್ತಿ ಬೇಕು. ಸರ್ಕಾರ ಅದನ್ನು  ಪ್ರದರ್ಶಿಸಬೇಕು ಎಂಬುದು ಪೋಷಕರ ಬಹುದಿನಗಳ ಬಯಕೆ.

ಕೆಲವು ಖಾಸಗಿ ಶಾಲೆಗಳು, ಪ್ರವೇಶ ನೀಡುವಾಗ ಮಕ್ಕಳಿಗೆ ಮೌಖಿಕ, ಲಿಖಿತ ಪರೀಕ್ಷೆ ಹಾಗೂ ಪೋಷಕರಿಗೆ ಸಂದರ್ಶನ ನಡೆಸುವ ಪರಿಪಾಠ ರೂಢಿ­ಸಿ­ಕೊಂಡಿವೆ. ಈ ಅನಿಷ್ಟವನ್ನು   ನಿಷೇಧಿಸಿರುವುದು  ಶ್ಲಾಘನೀಯ. ನಿಯಮ ಉಲ್ಲಂ­ಘಿಸಿದ ಶಾಲೆಗಳಿಗೆ ದಂಡ ವಿಧಿಸಿದರಷ್ಟೇ ಸಾಲದು. ಇನ್ನೂ ಕಠಿಣ ಕ್ರಮ ಅಗತ್ಯ. ಶಾಲಾ ಅಭಿವೃದ್ಧಿ ಹೆಸರಿನಲ್ಲಿ ವಂತಿಗೆ ವಸೂಲಿ ಮಾಡುವ ಸುಲಿ­ಗೆ­ಕೋರ ಪ್ರವೃತ್ತಿಗೂ ಕಡಿವಾಣ ಹಾಕಲು ಮುಂದಾಗಿರುವುದು ಒಳ್ಳೆಯದೇ.

‘ಮಕ್ಕಳಿಗೆ ಪ್ರವೇಶ ನೀಡುವ ಸಂದರ್ಭದಲ್ಲಿ  ಪಾಲಕರನ್ನು ನಾನಾ ಬಗೆಯ ಪರೀಕ್ಷೆಗಳಿಗೆ ಒಡ್ಡಬಾರದು’ ಎಂಬ ನಿಯಮವನ್ನು ಹೈಕೋರ್ಟ್‌ ಈ ಹಿಂದೆಯೇ ಎತ್ತಿಹಿಡಿದಿದೆ. ಪೋಷಕರನ್ನು ಪರೀಕ್ಷೆಗೆ ಒಳ­ಪಡಿ­ಸುವುದನ್ನು ನಿಷೇಧಿಸಿ ಕೇಂದ್ರ  ಮಾನವ ಸಂಪನ್ಮೂಲ ಸಚಿವಾಲಯ 2010ರ ನವೆಂಬರ್‌ನಲ್ಲೇ ನಿಯಮಾವಳಿ ರೂಪಿಸಿದೆ. ಹೀಗೆ ನಿಯಮ,  ಸುತ್ತೋಲೆಗಳಿವೆ. ಆದರೆ, ಜಾರಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಎಂಬುದು ದುಃಖದ ಸಂಗತಿ.

ADVERTISEMENT

ಮಕ್ಕಳನ್ನು ಒಳ್ಳೆಯ ಶಾಲೆಗಳಿಗೆ ಸೇರಿಸಬೇಕು ಎನ್ನುವ ಪೋಷಕರ ಹೆಬ್ಬಯಕೆ, ಶಾಲೆಗಳ ಪ್ರವೇಶ ಸಮಸ್ಯೆಯನ್ನು ಜಟಿಲ­ಗೊಳಿಸಿದೆ. ಪೋಷಕರ ಧಾವಂತವನ್ನು ಶಾಲೆಗಳ ಆಡಳಿತ ಮಂಡಳಿಗಳು ದುರು­ಪಯೋಗ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಶಿಕ್ಷಣದ ವ್ಯಾಪಾ­ರೀ­ಕರಣಕ್ಕೆ ಕಡಿವಾಣ ಹಾಕಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವಿವಿಧ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳು ಒಂದೇ ತರ­ಗತಿ­­ಯಲ್ಲಿ ಇರುವುದು ಮಕ್ಕಳ ಬುದ್ಧಿ ವಿಕಸನಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.