ADVERTISEMENT

ಹಗರಣಗಳ ಗದ್ದಲ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST

ಸಂಸತ್ತಿನ ಬಜೆಟ್ ಅಧಿವೇಶನದ ಉತ್ತರಾರ್ಧ ಗದ್ದಲದಲ್ಲೇ ಆರಂಭಗೊಂಡಿದೆ. ಕಲ್ಲಿದ್ದಲು ನಿಕ್ಷೇಪ ಮತ್ತು 2ಜಿ ತರಂಗಾಂತರ ಹಂಚಿಕೆ ಹಗರಣಗಳಲ್ಲಿ ಪ್ರಧಾನಿ ತಲೆದಂಡಕ್ಕೆ ಒತ್ತಾಯಿಸಿದ ಪ್ರಮುಖ ಪ್ರತಿಪಕ್ಷ ಬಿಜೆಪಿ, ಅಧಿವೇಶನದ ಮೊದಲೆರಡು ದಿನಗಳ ಕಲಾಪಕ್ಕೆ ತಡೆ ಒಡ್ಡಿತು.

ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ರಾಜೀನಾಮೆ ಆಗ್ರಹಕ್ಕೆ, ಸಿಕ್ಕ ಎಲ್ಲಾ ಅವಕಾಶಗಳನ್ನೂ ಬಿಜೆಪಿ ಬಳಸಿಕೊಂಡಿದೆ. ಈಗ ಈ ಕಲ್ಲಿದ್ದಲು ಹಾಗೂ ತರಂಗಾಂತರ ಹಗರಣಗಳು ಪ್ರಸಕ್ತ ಅಧಿವೇಶನವನ್ನೂ ನುಂಗಿಹಾಕುವಂತೆ ಕಾಣುತ್ತಿದೆ. 2ಜಿ ಹಗರಣ ತನಿಖೆ ಕುರಿತಾದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯಲ್ಲಿ ವಾಜಪೇಯಿ ಹೆಸರು ಪ್ರಸ್ತಾಪವಾಗಿರುವುದರ ವಿರುದ್ಧ ಬಿಜೆಪಿ ರಣಕಹಳೆಯನ್ನೇ ಮೊಳಗಿಸಿದೆ.

ಇಂತಹ ಸಂದರ್ಭದಲ್ಲೇ, ಆಹಾರದ ಹಕ್ಕು, ಭೂ ಸ್ವಾಧೀನ ಮಸೂದೆ ಹಾಗೂ ಪಿಂಚಣಿ, ವಿಮೆಯಂತಹ ಹಣಕಾಸು ವಲಯದ ಸುಧಾರಣೆಗಳಿಗೆ ಸಂಬಂಧಿಸಿದ ಬಹುಮುಖ್ಯ ಮಸೂದೆಗಳು ಸಂಸತ್ತಿನಲ್ಲಿ ಚರ್ಚೆಗಳಿಗಾಗಿ ಕಾದಿದೆ. ಆದರೆ ಸಂಸತ್ತು ಕದನ ಕಣವಾಗಿ ಪರಿವರ್ತಿತವಾಗಿದೆ. ಆಹಾರದ ಹಕ್ಕು, ಭೂ ಸ್ವಾಧೀನ ಮಸೂದೆಗಳಿಗೆ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಒಮ್ಮತ ಮೂಡುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಕಲಾಪಗಳಿಗೆ ಅಡ್ಡಿ ಒದಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.

ಪ್ರತಿಪಕ್ಷಗಳು ಹಾಗೂ ಮಿತ್ರ ಪಕ್ಷಗಳ ಮನ ಒಲಿಕೆಯಲ್ಲಿ ಯುಪಿಎ ಕೌಶಲಕ್ಕೆ ಈಗ ಈ ಅಧಿವೇಶನ ಸಾಕ್ಷಿಯಾಗಲಿದೆ. ಗುಣಮಟ್ಟದ ಚರ್ಚೆಗಳಿಗೆ ಅವಕಾಶವಿಲ್ಲದೆ ಅಬ್ಬರದ ಕೋಲಾಹಲಗಳಿಗೆ ಸಂಸತ್ತು ನೆಲೆಯಾಗುತ್ತಿರುವುದು ದುರದೃಷ್ಟಕರ. ಸಂಸತ್ತಿನ ಸಂಸದೀಯ ನಡವಳಿಕೆಗಳ ನಿಯಮಗಳನ್ನು ಗಾಳಿಗೆ ತೂರುವಂತಹದ್ದು ಸರಿಯಲ್ಲ.

ಕಲ್ಲಿದ್ದಲು ಹಾಗೂ 2ಜಿ ಹಗರಣಗಳ ಹಲವು ತಿರುವುಗಳು ಯುಪಿಎ ಸರ್ಕಾರದ ಪ್ರಾಮಾಣಿಕತೆಯನ್ನೂ ಪ್ರಶ್ನೆಗಳಿಗೆ ಒಡ್ಡಿವೆ ಎಂಬುದನ್ನು ಇಲ್ಲಿ ಪರಿಗಣಿಸಬೇಕು. 2ಜಿ ಹಗರಣದ ತನಿಖೆ ನಡೆಸಿದ ಜೆಪಿಸಿ ಯ ಕರಡು ವರದಿ ಮಾಧ್ಯಮಗಳಿಗೆ ಸೋರಿಕೆಯಾದುದು, ಹಾಗೆಯೇ 2 ಜಿ ಹಗರಣದ ಪ್ರಮುಖ ಆರೋಪಿ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಅವರ ಸಾಕ್ಷ್ಯಕ್ಕೆ ಜೆಪಿಸಿ ಕಿವಿಗೊಡದಿರುವುದು ಲೋಪಗಳೇ.

ಜೊತೆಗೆ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕಿದ್ದ ಸಿಬಿಐ ವರದಿಯನ್ನು ತಿದ್ದುಪಡಿ ಮಾಡಲು ಕೇಂದ್ರ ಕಾನೂನು ಸಚಿವರು ಹಸ್ತಕ್ಷೇಪ ನಡೆಸಿದ್ದಾರೆಂಬ ಆರೋಪ ಈಗ ಸಹಜವಾಗಿಯೇ ವಿವಾದದ ಕೇಂದ್ರವಾಗಿದೆ. ಇಂತಹ ವಿಚಾರಗಳಲ್ಲಿ ಯುಪಿಎ ಸರ್ಕಾರ ಪಾರದರ್ಶಕತೆಯನ್ನು ಪ್ರದರ್ಶಿಸುವುದು ಅಗತ್ಯ.

ಈಗಾಗಲೇ 2ಜಿ ಹಗರಣಕ್ಕೆ ಸಂಬಂಧಿಸಿದಂತೆ  ಸಿಬಿಐ ಪ್ರಾಸಿಕ್ಯೂಟರ್ ಎ.ಕೆ. ಸಿಂಗ್ ಹಾಗೂ ಆರೋಪಿಗಳಲ್ಲೊಬ್ಬರಾದ ಯೂನಿಟೆಕ್‌ನ  ವ್ಯವಸ್ಥಾಪಕ ನಿರ್ದೇಶಕ  ಸಂಜಯ್ ಚಂದ್ರ ನಡುವಣ ದೂರವಾಣಿ ಸಂಭಾಷಣೆಯೂ ಸಿಬಿಐ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡಿರುವುದನ್ನು ನೆನಪಿಸಿಕೊಳ್ಳಬಹುದು.

ಈ ಮಧ್ಯೆ 1993ರಿಂದ 2010ರವರೆಗೆ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ ಅಕ್ರಮವಾಗಿದ್ದು ಅಧಿಕಾರ ದುರ್ಬಳಕೆಯಾಗಿದೆ ಎಂದು ಕಲ್ಲಿದ್ದಲು ಹಾಗೂ ಉಕ್ಕು ಕುರಿತ ಸಂಸದೀಯ ಸ್ಥಾಯಿ ಸಮಿತಿ ನೀಡಿರುವ ವರದಿ ಯುಪಿಎ ಸರ್ಕಾರಕ್ಕೆ ಮತ್ತೊಂದು ಮುಜುಗರ ತಂದೊಡ್ಡುವಂತಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ತನ್ನ ಪ್ರಾಮಾಣಿಕತೆಯನ್ನು ಸರ್ಕಾರ ಪ್ರದರ್ಶಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.