ADVERTISEMENT

ಹಳ್ಳಿಯ ಬಾಳು ನಿಲ್ಲದ ಗೋಳು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ನಗರಕೇಂದ್ರಿತ ಬದುಕನ್ನೇ ಹೆಚ್ಚುಗಾರಿಕೆ ಎಂದು ಭಾವಿಸಿರುವ ಮನಸ್ಥಿತಿ ನಮ್ಮದು. ಶ್ರೀಮಂತಿಕೆಯೇ ಸಂಸ್ಕೃತಿ, ಅದೇ ನಾಗರಿಕತೆ ಎಂದೇ ಭಾವಿಸಿರುವ ನಾವು, ಬಹುಪಾಲು ಹಳ್ಳಿಗಳಿಂದ ಕೂಡಿದ ದೇಶದಲ್ಲಿಯೇ  ಜೀವಿಸುತ್ತಿದ್ದೇವೆ ಎನ್ನುವುದನ್ನು ಉಪೇಕ್ಷಿಸಿದ್ದೇವೆ. ನಮ್ಮ ಚುನಾಯಿತ ಪ್ರತಿನಿಧಿಗಳೂ ತಾವು ಪ್ರತಿನಿಧಿಸುವ ಗ್ರಾಮೀಣ ಪ್ರದೇಶವನ್ನು ಮರೆತು ರಾಜಧಾನಿಯಲ್ಲಿನ ವೈಭೋಗದಲ್ಲಿ ಮುಳುಗೇಳುತ್ತಿದ್ದಾರೆ.

ರಾಜಧಾನಿಗೆ ನೀಡುವ ಸೌಲಭ್ಯ, ಸವಲತ್ತುಗಳನ್ನು ನಮ್ಮ ಹಳ್ಳಿಗಳು ಕಾಣುವುದು ಎಂದೋ ? ರಾಜಧಾನಿಯೇ ಎಲ್ಲ ಅವಕಾಶಗಳು, ಸೌಲಭ್ಯಗಳನ್ನು ಕಬಳಿಸುತ್ತಿದೆ. ಇಷ್ಟೆಲ್ಲಾ ಪಡೆದ ರಾಜಧಾನಿ ಸಿಂಗಪುರವಾಗುವ ಬದಲು ಕಸದ ನಗರವಾಗಿರುವುದು ವಿಪರ್ಯಾಸ. ಇತ್ತ ನಗರಗಳು ಅಶುಚಿತ್ವದ ಗೂಡಾಗಿ ಪರಿಣಮಿಸಿದರೆ, ಮೊದಲೇ ನಿರ್ಲಕ್ಷ್ಯಕ್ಕೊಳಗಾಗಿರುವ ಹಳ್ಳಿಗಳೂ ಸಂಪೂರ್ಣ ಅನಾರೋಗ್ಯಪೀಡಿತವಾಗಿವೆ. ಗ್ರಾಮೀಣ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆಯಿಂದ ಸರ್ಕಾರ ವಿಮುಖವಾಗಿರುವುದು ನಮ್ಮ ಹಳ್ಳಿಗಳನ್ನು ಕಂಡರೆ ಸಾಕು ಸ್ಪಷ್ಟವಾಗುತ್ತದೆ.

ರಾಯಚೂರು, ಗುಲ್ಬರ್ಗ, ಯಾದಗಿರಿ ಜಿಲ್ಲೆಗಳಲ್ಲಿನ ಹಳ್ಳಿಗಳ ದುಃಸ್ಥಿತಿ ವರ್ಣನೆಗೆ ನಿಲುಕುವುದಿಲ್ಲ. ಅಷ್ಟು ದೂರ ಏಕೆ? ರಾಜಧಾನಿಗೆ ಸನಿಹದಲ್ಲೇ ಇರುವ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಇಪ್ಪತ್ತೈದು ಹಳ್ಳಿಗಳ ಸ್ಥಿತಿಯನ್ನು ನೋಡಿ. ಇಲ್ಲಿ ರೋಗರುಜಿನಗಳು ಹಲವಾರು ವರ್ಷಗಳಿಂದ ಮನೆಮಾಡಿಕೊಂಡಿವೆ. ಬೆಂಗಳೂರಿನಿಂದ ರಾಮನಗರ ಕಡೆ ಹೋಗುವ ಹೆದ್ದಾರಿಯಲ್ಲಿ ಕೆಂಗೇರಿ ಸಮೀಪಿಸುತ್ತಿದ್ದಂತೆಯೇ ದುರ್ಗಂಧ ಬೀರುತ್ತಾ ಹರಿಯುವ ವೃಷಭಾವತಿ, ಸುತ್ತಮುತ್ತಲ ಪರಿಸರವನ್ನು ಹಾಳುಗೆಡವಿದೆ. ಬಹುತೇಕ ಕಾರ್ಖಾನೆಗಳಿಂದ ಹೊರಬೀಳುವ ಕಲುಷಿತ ನೀರು ಬೆಂಗಳೂರು ಅಂಚಿನಲ್ಲಿ ಹರಿದು ಮುನ್ನುಗ್ಗಿ ರಾಮನಗರ ಜಿಲ್ಲೆಯ ಕೋಡಿಯಾಲ-ಕರೇನಹಳ್ಳಿ ಗ್ರಾಮದ ಕೃಷಿಯನ್ನೂ ಹಾಳುಮಾಡಿದೆ.

ಜನರ ಆರೋಗ್ಯವನ್ನೂ ಬರ್ಬರಗೊಳಿಸಿದೆ. ಈ ಕಲುಷಿತ, ಕಲ್ಮಷ, ದುರ್ಗಂಧಮಯ ನೀರಿನಿಂದಾಗಿ 30 ಗ್ರಾಮಗಳಲ್ಲಿ ಕುಡಿಯುವ ನೀರೂ ಕಲುಷಿತವಾಗಿ ಯೋಗ್ಯ ನೀರಿಗೆ ಜನ ಪರಿತಪಿಸಬೇಕಾದ ದುರ್ಗತಿ ಬಂದೊದಗಿದೆ.ಕೊಳಚೆ ನೀರು ರೋಗಹರಡುವ ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಕಳೆದ ಐದು ವರ್ಷಗಳಿಂದ ಇಡೀ ಹಳ್ಳಿಯ ಜನ ಮೈತುಂಬಾ ಕಜ್ಜಿಯಾಗಿ ನರಳುತ್ತಾ ಮೂಕಯಾತನೆ ಅನುಭವಿಸುತ್ತಿದ್ದಾರೆ. ಗ್ರಾಮನೈರ್ಮಲ್ಯದ ಬಗ್ಗೆ ಭಾಷಣಗಳಿಗೇನೂ ಬರವಿಲ್ಲ.

ಕಾಯಿಲೆ ನಿಯಂತ್ರಣಕ್ಕೆ ಬರಲೇ ಇಲ್ಲ. 175 ಕೋಟಿ ರೂಪಾಯಿ ಕೇಂದ್ರ ನೆರವಿನ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವೇ ವ್ಯರ್ಥವೆನಿಸಿದೆ. ಗ್ರಾಮಗಳಲ್ಲಿ ಕುಡಿಯುವ ನೀರು ಎಷ್ಟು ಸುರಕ್ಷಿತ ಎಂಬುದನ್ನು ಗುರುತಿಸಲು ಹಾಗೂ ಉತ್ತಮಗುಣಮಟ್ಟದ ಪರಿಶುದ್ಧ ಕುಡಿಯುವ ನೀರಿನ ಲಭ್ಯತೆಯ ಪ್ರಮಾಣವನ್ನು ತಿಳಿಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯದಲ್ಲಿ ಮಾಹಿತಿ ದಾಖಲಿಸುವ ಸಮೀಕ್ಷೆಗೆ ಈಗ ಚಾಲನೆ ನೀಡಿದೆ.

ಇದುವರೆಗೆ ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಜನ ಫ್ಲೋರೈಡ್‌ಯುಕ್ತ ನೀರನ್ನೇ ಸೇವಿಸುತ್ತಿದ್ದರು. ಅಲ್ಲಿ ಇದುವರೆಗೆ ಆಗಿರುವ ಕೆಲಸ ಏನು? ಅಲ್ಲಿ ಕುಡಿಯುವ ನೀರು ಕಲ್ಪಿಸುವ ಪರ್ಯಾಯ ವ್ಯವಸ್ಥೆ ಏಕೆ ರೂಪಿಸಲಾಗಿಲ್ಲ? ಹೀಗೆ ಹಲವಾರು ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರ ನಿರೀಕ್ಷಿಸುವುದೇ ತಪ್ಪಾಗುತ್ತದೆ. ಗ್ರಾಮೀಣ ಪ್ರದೇಶಗಳ ನಿರ್ಲಕ್ಷ್ಯ ಸಾಕು. ತಕ್ಷಣ ಸಮೀಕ್ಷಾ ಕಾರ್ಯಗಳು ಆರಂಭವಾಗಲಿ. ಜೀವನಾವಶ್ಯಕವೆನಿಸಿದ ನೀರನ್ನಾದರೂ ಶುದ್ಧವಾಗಿ ಕೊಡಲು ಸರ್ಕಾರ ಮುಂದಾಗಲಿ. ಗ್ರಾಮೀಣ ಸ್ವಾಸ್ಥ್ಯದಲ್ಲೇ ದೇಶದ ಹಿತ ಅಡಗಿದೆ ಎನ್ನುವುದನ್ನು ಮರೆಯದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.