ADVERTISEMENT

ಹೊಣೆಗೇಡಿತನ ಪರಮಾವಧಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರು ಪರಸ್ಪರ ಆರೋಪ- ಪ್ರತ್ಯಾರೋಪಗಳನ್ನು ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯವನ್ನು ಮುನ್ನಡೆಸುವ ತಮ್ಮ ಮೊದಲ ಕರ್ತವ್ಯವನ್ನೇ ಮರೆತಿದ್ದಾರೆ.

ದೈನಂದಿನ ಆಡಳಿತ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಡೆಗಣಿಸಿ ದಾಯಾದಿಗಳಂತೆ ಪರಸ್ಪರ ನಿಂದನೆಯಲ್ಲಿ ತೊಡಗಿರುವ ಅವರ ವರ್ತನೆ ನಿರ್ಲಜ್ಜತನದ ಪರಮಾವಧಿ ಎಂದೇ ಹೇಳಬೇಕಾದೀತು. ವಿಶ್ವವಿದ್ಯಾಲಯದ ಇಂದಿನ ಎಲ್ಲಾ ಅವ್ಯವಸ್ಥೆಗಳಿಗೆ ಈ ಇಬ್ಬರೂ ಹೊಣೆಗಾರರೇ.

ಆದರೆ ಅದನ್ನು ಒಪ್ಪಿಕೊಳ್ಳದೆ ಜವಾಬ್ದಾರಿಯನ್ನು ಇನ್ನೊಬ್ಬರ ಹೆಗಲ ಮೇಲೆ ಇಡುವ ಕೆಲಸ ಮಾಡುತ್ತ ಸಾರ್ವಜನಿಕರ ಕಣ್ಣಿಗೆ ವಿದೂಷಕರಂತೆ ಕಾಣಿಸುತ್ತಿದ್ದಾರೆ. ಈ ಇಬ್ಬರೂ ತಮ್ಮ ಹುದ್ದೆಯ ಘನತೆ, ಗಾಂಭೀರ್ಯಗಳನ್ನೇ ಮರೆತಿದ್ದಾರೆ. ವಿಶ್ವವಿದ್ಯಾಲಯ ಸ್ವಾಯತ್ತ ಸಂಸ್ಥೆಯೇ ಆದರೂ ಅಲ್ಲಿ ಸರ್ವಾಧಿಕಾರಕ್ಕೆ ಅವಕಾಶ ಇಲ್ಲ.
 
ಕುಲಪತಿ ಹಾಗೂ ಕುಲಸಚಿವ ಇಬ್ಬರೂ ವಿಶ್ವವಿದ್ಯಾಲಯದ ನಿಯಮಾವಳಿಗೆ ಬದ್ಧರು. ನಿಯಮಗಳ ಚೌಕಟ್ಟಿನಲ್ಲಿಯೇ ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ವಿಶ್ವ ವಿದ್ಯಾಲಯದಲ್ಲಿ ಅವ್ಯವಸ್ಥೆ ಇದೆ ಎಂದರೆ ಅದಕ್ಕೆ ಆಡಳಿತಗಾರರೇ ಹೊಣೆ.
 
ಅದನ್ನು ಒಪ್ಪಿಕೊಂಡು ಸರಿಪಡಿಸುವ ಕೆಲಸ ಮಾಡದೆ ರಾಜಕೀಯ ವಿರೋಧಿಗಳಂತೆ ಬೀದಿಯಲ್ಲಿ ನಿಂತು ಪರಸ್ಪರ ದೋಷಾರೋಪಣೆ ಮಾಡುವ ಹಂತಕ್ಕೆ ತಲುಪಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ. ಈ ಇಬ್ಬರ ಸ್ವಪ್ರತಿಷ್ಠೆಗೆ ವಿಶ್ವವಿದ್ಯಾಲಯದ ಘನತೆ, ಗೌರವ ಮಣ್ಣುಪಾಲಾಗಿದೆ. ಈ ಬೆಳವಣಿಗೆ ಖಂಡನೀಯ.

ಬೆಂಗಳೂರು ವಿಶ್ವವಿದ್ಯಾಲಯ ಹಿಂದೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂಬ ಹೆಸರು ಗಳಿಸಿತ್ತು. ಹೊಸ ಚಿಂತನೆಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುವ ವಿಷಯದಲ್ಲಿ ಅದು ರಾಜ್ಯದ ಇತರ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಿತ್ತು.

ಆದರೆ ಈಗ ಅದರ ಪ್ರತಿಷ್ಠೆ ಪಾತಾಳಕ್ಕೆ ಕುಸಿಯುತ್ತಿದೆ. ವಿಶ್ವವಿದ್ಯಾಲಯ ಈ ಸ್ಥಿತಿಗೆ ತಲುಪಲು  ರಾಜ್ಯ ಸರ್ಕಾರವೂ ಹೊಣೆ. ಕುಲಪತಿ ಮತ್ತು ಕುಲಸಚಿವರ ಹಿಂದೆ ರಾಜಕೀಯ ಪ್ರಭಾವಿಗಳಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಯಾರೊಬ್ಬರ ಮೇಲೂ ಕ್ರಮ ತೆಗೆದುಕೊಳ್ಳುವ ಆಸಕ್ತಿ ಸರ್ಕಾರಕ್ಕೆ ಇಲ್ಲ. ಕುಲಾಧಿಪತಿಗಳಾದ ರಾಜ್ಯಪಾಲರೂ ಈ ಬೆಳವಣಿಗೆಗಳನ್ನು ಉಪೇಕ್ಷಿಸಿದ್ದಾರೆ.
 
ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸಹ ಅಸಹಾಯಕವಾಗಿದೆ. ಇಬ್ಬರು ವ್ಯಕ್ತಿಗಳ ಸ್ವಪ್ರತಿಷ್ಠೆ ಮತ್ತು ರಾಜಕೀಯ ಹಿತಾಸಕ್ತಿಗೆ ಸಾವಿರಾರು ವಿದ್ಯಾರ್ಥಿಗಳ ಹಿತವನ್ನು ಬಲಿ ಕೊಡಬಾರದು. ರಾಜ್ಯ ಸರ್ಕಾರ ಇನ್ನಾದರೂ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಬೇಕು. ಕುಲಪತಿ ಹಾಗೂ ಕುಲಸಚಿವರ ಕಿವಿ ಹಿಂಡಿ ಕೆಲಸ ಮಾಡುವಂತೆ ಹೇಳಬೇಕು.


ಆರ್ಥಿಕ ವರ್ಷದ ಅಂತ್ಯದಲ್ಲಿರುವ ಈ ಸಂದರ್ಭದಲ್ಲಿ ಸರ್ಕಾರ ಮತ್ತು ಯುಜಿಸಿ ನೀಡಿದ ಹಣಕಾಸನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮುಗಿಸುವಂತೆ ಇಬ್ಬರಿಗೂ ತಾಕೀತು ಮಾಡಬೇಕು. ಈ ವಿಷಯದಲ್ಲಿ ಸರ್ಕಾರ ವಿಳಂಬದ ಧೋರಣೆ ಅನುಸರಿಸಿದರೆ ಅದಕ್ಕೆ ಬಲಿಯಾಗುವುದು ವಿದ್ಯಾರ್ಥಿಗಳ ಹಿತ. ಅದಕ್ಕೆ ಅವಕಾಶ ಕೊಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT