ADVERTISEMENT

ಹೊಸ ಸರ್ಕಾರದ ಹಳೆಯ ಚಾಳಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ಹೊಸ ಪಕ್ಷ ಅಧಿಕಾರಕ್ಕೆ ಬಂದು ಹೊಸ ಸರ್ಕಾರ ಸ್ಥಾಪಿತ ವಾದಾಗ ರಾಜಕೀಯ ಬದಲಾವಣೆಗಳು ಮಾತ್ರ ಆಗುತ್ತವೆ ಎಂದು ನಿರೀಕ್ಷಿಸುವ ಕಾಲ ಎಂದೋ ಮುಗಿಯಿತು. ರಾಜಕಾರಣಿಗಳು ಹೊಸದಾಗಿ ಅಧಿಕಾರ ಹಿಡಿದೊಡನೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಂಗಗಳ ಮೇಲೂ ಅವರ ಕೆಂಗಣ್ಣು ಬೀಳುವುದು ಖಚಿತ. ಯುಕ್ತಾಯುಕ್ತ ವಿವೇಚನೆ ಇಲ್ಲದೆ ಹಿಂದಿನ ಸರ್ಕಾರ ಮಾಡಿರುವ ನೇಮಕಗಳು ಮತ್ತು ನಾಮ ನಿರ್ದೇಶನಗಳನ್ನು ರದ್ದು ಮಾಡಿ ತಮ್ಮವರನ್ನೇ ತರುವ ಆತುರ ತೋರು ವುದೂ ಮಾಮೂಲಾಗಿ ಹೋಗಿದೆ.

ನಮ್ಮ ದೇಶದಲ್ಲಿ ಯಾವ ರಾಜ್ಯವೂ ಯಾವ ರಾಜಕೀಯ ಪಕ್ಷವೂ ಇದಕ್ಕೆ ಹೊರತಲ್ಲ. ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳ ಸಿಂಡಿಕೇಟ್‌ಗಳಿಗೆ ಬಿಜೆಪಿ ಸರ್ಕಾರ ಮಾಡಿದ್ದ ಸದಸ್ಯರ ನಾಮನಿರ್ದೇಶನವನ್ನು ರದ್ದು ಮಾಡುವ ಈ ಸರ್ಕಾರದ ಹೊಸ ಆದೇಶದಿಂದ ಅದೇ ಹಳೆಯ ಚಾಳಿ ಮರುಕಳಿಸಿದೆ. ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕವೇ ಒಂದು ದೊಡ್ಡ ರಾಜಕೀಯ ಭ್ರಷ್ಟಾಚಾರ ಆಗಿರುವಾಗ ಬೇರೆ ವಿಷಯಗಳ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ.

ತಮಾಷೆ ಎಂದರೆ, ಪ್ರತೀ ಬಾರಿ ಸಿಂಡಿಕೇಟ್‌ಗಳಿಗೆ ಸದಸ್ಯರ ನಾಮನಿರ್ದೇಶನ ಮತ್ತು ಅದನ್ನು ರದ್ದು ಮಾಡುವ ನಿರ್ಧಾರ ಎರಡೂ ವಿವಾದಕ್ಕೆ ಈಡಾಗುತ್ತವೆ. ತಾವು ಅಧಿಕಾರಕ್ಕೆ ಬಂದಾಗ ಯಾವ ಕೆಲಸವನ್ನು ಬಹಳ ಉಮೇದಿನಿಂದ ಮಾಡಿದ್ದರೋ ಅದನ್ನೇ ಮುಂದಿನ ಸರ್ಕಾರ ಮಾಡಿದಾಗ ಉಗ್ರವಾಗಿ ವಿರೋಧಿಸುವ ಉನ್ನತ ಶಿಕ್ಷಣ ಸಚಿವರು ನಮ್ಮಲ್ಲಿದ್ದಾರೆ.

ADVERTISEMENT

ಶಿಕ್ಷಣ ಸಂಸ್ಥೆಗಳ ಮಾಲೀಕರು, ರಾಜಕಾರಣಿಗಳ ಬಾಲಬಡುಕರು, ಶೈಕ್ಷಣಿಕ ರಂಗದ ಪುಢಾರಿಗಳು, ಸೈದ್ಧಾಂತಿಕ ಸಹವರ್ತಿ ಗಳೆಲ್ಲ ಹೊಸ ಸರ್ಕಾರಗಳ ದೃಷ್ಟಿಯಲ್ಲಿ ಏಕಾಏಕಿ `ಶಿಕ್ಷಣ ತಜ್ಞ'ರಾಗಿ ಪಟ್ಟ ಗಿಟ್ಟಿಸುತ್ತಾರೆ. ಹಾಗೆ ಗಿಟ್ಟಿಸಿಕೊಂಡವರು ತಮ್ಮ ಸ್ಥಾನಬಲದಿಂದ ಏನು ಮಾಡಬೇಕೋ ಅದನ್ನೇ ಮಾಡುತ್ತಾರೆ.

ಅಧಿಕಾರ ಸೂತ್ರ ಹಿಡಿದವರು ಮತ್ತು ಅವರ ಹಿಂಬಾಲಕರ ಇಂಥ ಕುಕೃತ್ಯಗಳ ಜೊತೆಗೆ, ಕುಲಾಧಿಪತಿ ಗಳಾದ ರಾಜ್ಯಪಾಲರು ಮಾಡುವ ನೇಮಕಾತಿ ರಾಜಕಾರಣವೂ ಇನ್ನಷ್ಟು ವಿವಾದಗಳನ್ನು ಸೃಷ್ಟಿಸುತ್ತಿದೆ. ಜ್ಞಾನಾಧಾರಿತ ಕ್ಷೇತ್ರದ ಆಯ್ಕೆಗಳಿಗೂ ಶೈಕ್ಷಣಿಕ ಸಾಮರ್ಥ್ಯಕ್ಕಿಂತ ರಾಜಕೀಯ ಸಾಮೀಪ್ಯವೇ ಮೂಲಾಧಾರವಾಗಿರ ಬೇಕು ಎನ್ನುವ `ಅಜ್ಞಾನ'ವೇ ಇದಕ್ಕೆ ಮುಖ್ಯ ಕಾರಣ.

ಹಿಂದಿನ ಸರ್ಕಾರ ತಪ್ಪು ಮಾಡಿದೆ ಎಂಬ ನೆಪವೊಡ್ಡಿ ಅವಧಿಗೆ ಮುನ್ನ ರದ್ದು ಮಾಡಿ ಸಿಂಡಿಕೇಟ್‌ಗಳಿಗೆ ಹೊಸ ನೇಮಕಾತಿ ಮಾಡುವುದು ನಿಜಕ್ಕೂ ರಾಜಕಾರಣಿಗಳು ಶೈಕ್ಷಣಿಕ ರಂಗದಲ್ಲಿ ಆಡುವ ಕೆಟ್ಟ ಹಾವುಏಣಿ ಆಟ. ಯಾವ ರಾಜಕೀಯ ಪಕ್ಷದ ಸರ್ಕಾರ ಬಂದರೂ ಅದೇ ಹಳೆಯ ರಾದ್ಧಾಂತ ಶುರುವಾಗುತ್ತದೆ.

ಶೈಕ್ಷಣಿಕ ರಂಗಕ್ಕೆ ಅದರದೇ ರೀತಿನೀತಿಗಳು ಇರಬೇಕೇ ಹೊರತು ಸಮಕಾಲೀನ ರಾಜಕೀಯ ಏರಿಳಿತಗಳು ಅದರ ಮೇಲೆ ಕರಿನೆರಳು ಹಾಯಿಸಬಾರದು. ಸಿಂಡಿಕೇಟ್‌ಗಳಿಗೆ ನಾಮನಿರ್ದೇಶನದ ವಿಚಾರದಲ್ಲಿ ಹಿಂದಿನ ಒಂದು ಕಾರ್ಯಪಡೆ ನೀಡಿರುವ ವರದಿಯ ಸಲಹೆ ಸೂಚನೆಗಳು ಎಲ್ಲ ಸರ್ಕಾರಗಳಿಂದ ಸಾರ್ವಕಾಲಿಕ ಮಾನ್ಯತೆ ಪಡೆಯಬೇಕು. ರಾಜಕೀಯ ಲೆಕ್ಕಾಚಾರಗಳಿಂದ ಶಿಕ್ಷಣದ ಮಾನಮರ್ಯಾದೆ ಕಳೆಯಬಾರದು ಎನ್ನುವ ಪಾಠವನ್ನು ನಮ್ಮ ರಾಜಕಾರಣಿಗಳು ಕಲಿಯುವುದು ಯಾವಾಗ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.